ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟುಡಾ’ ಅಧಿಕಾರಿ ಕೋಟಿ ಒಡೆಯ: ಆಂಧ್ರದಲ್ಲೂ ಜಮೀನು!

ಟೂಡಾ ಜಂಟಿ ನಿರ್ದೇಶಕ ನಾಗರಾಜ್ ಮನೆ ಮೇಲೆ ಲೋಕಾಯುಕ್ತ ದಾಳಿ
Published 17 ಆಗಸ್ಟ್ 2023, 23:30 IST
Last Updated 17 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಮೂಲೆ, ಮೂಲೆಯಲ್ಲಿ ಕೋಟಿ, ಕೋಟಿ ಬೆಲೆಬಾಳುವ ಆಸ್ತಿ. ಜೊತೆಗೆ ನೆರೆಯ ಆಂಧ್ರಪ್ರದೇಶದಲ್ಲೂ ಕೃಷಿ ಜಮೀನು ಇದೆ.

ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಗುರುವಾರ ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕ ಹಾಗೂ ನಗರ ಯೋಜನಾ ಸದಸ್ಯ ಕೆ.ಎನ್.ನಾಗರಾಜ್ ಅವರ ನಗರದ ಸಪ್ತಗಿರಿ ಬಡಾವಣೆಯ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಅಪಾರ ಪ್ರಮಾಣ ಆಸ್ತಿ ಕಂಡುಬಂದಿದೆ.

ನಗರದಲ್ಲಿ ಕೋಟಿ ಬೆಲೆ ಬಾಳುವ ಮನೆ, ₹83 ಲಕ್ಷ ಬೆಲೆ ಬಾಳುವ ಆರು ನಿವೇಶನ, ₹20 ಲಕ್ಷದ ವಾಣಿಜ್ಯ ಮಳಿಗೆ, ಕೃಷಿ ಜಮೀನು, ₹25 ಲಕ್ಷ ಮೌಲ್ಯದ 800 ಗ್ರಾಂ ಚಿನ್ನದ ಒಡವೆ, 1.50 ಕೆ.ಜಿ ಬೆಳ್ಳಿ ಸಾಮಗ್ರಿಗಳು. ದಾಳಿ ವೇಳೆ ಒಟ್ಟು ₹3.46 ಕೋಟಿ ಮೊತ್ತದ ಆಸ್ತಿ ಪತ್ತೆಯಾಗಿದೆ.  

ಇವುಗಳಷ್ಟೇ ಅಲ್ಲ, ನೆರೆಯ ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕು ಬಸವಪಲ್ಲಿ ಗ್ರಾಮದಲ್ಲಿ ಒಂದು ಲಕ್ಷ ಮೌಲ್ಯದ ಒಂದು ಎಕರೆ ಜಮೀನು ಹೊಂದಿದ್ದಾರೆ.

ತುಮಕೂರು ತಾಲ್ಲೂಕು ಮೂಡಲಕೋಡಿ ಗ್ರಾಮದಲ್ಲಿ ₹48.80 ಲಕ್ಷ ಮೌಲ್ಯದ 5.35 ಎಕರೆ ಕೃಷಿ ಜಮೀನು, ಪಾವಗಡ ತಾಲ್ಲೂಕು ಜಂಗಮರಹಳ್ಳಿಯಲ್ಲಿ ₹35 ಲಕ್ಷದ ಮನೆ, ಪಾವಗಡ ತಾಲ್ಲೂಕು ಜಂಗಮರಹಳ್ಳಿಯಲ್ಲಿ ₹15.55 ಲಕ್ಷ ಬೆಲೆ ಬಾಳುವ ಕೃಷಿ ಜಮೀನು, ₹15 ಲಕ್ಷದ ಹುಂಡೈ ಕಾರು, ₹1.85 ಲಕ್ಷದ ಮೂರು ದ್ವಿಚಕ್ರ ವಾಹನ ಇವಿಷ್ಟು ನಾಗರಾಜ್‌  ಕ್ರೋಡೀಕರಿಸಿದ ಸಂಪತ್ತು. 

ಕೆ.ಎನ್.ನಾಗರಾಜ್
ಕೆ.ಎನ್.ನಾಗರಾಜ್

ಗ್ರಾ.ಪಂ ಸದಸ್ಯನ ಹೆಸರಲ್ಲಿ ತಹಶೀಲ್ದಾರ್‌ ಬೇನಾಮಿ ಆಸ್ತಿ?

ದೇವನಹಳ್ಳಿ ತಹಶೀಲ್ದಾರ್ ಶಿವರಾಜ್‌ ಅವರು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಹೆಸರಿನಲ್ಲಿ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ದಾಳಿಯಲ್ಲಿ ದೊರೆತ ಕೆಲವು ದಾಖಲೆ ಪತ್ರಗಳನ್ನು ನೋಡಿದ ನಂತರ ಲೋಕಾಯುಕ್ತ ಪೊಲೀಸರಿಗೆ ಅನುಮಾನ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಆಪ್ತರೆಂದು ಹೇಳಲಾದ ಹರೀಶ್‌ ಮತ್ತು ದಯಾನಂದ್‌ ಎಂಬುವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇನ್ನೂ ಹಲವು ಆಪ್ತರು ಮತ್ತು ವ್ಯಕ್ತಿಗಳ ಮೇಲೆ ಅನುಮಾನ ಇದ್ದು ಅವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ದೇವನಹಳ್ಳಿ ತಹಶೀಲ್ದಾರ್ ಹುದ್ದೆಯಿಂದ ವರ್ಗಾವಣೆಗೊಂಡಿದ್ದ ಶಿವರಾಜ್‌ ಸರ್ಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಕರಣ ದಾಖಲಿಸಿ ತಡೆಯಾಜ್ಞೆ ತಂದಿದ್ದರು. ಇನ್ನೂ ಕೆಲವೇ ತಿಂಗಳು ಅವರು ಸೇವೆ ಬಾಕಿ ಇದ್ದು ನಿವೃತ್ತಿಯ ಹೊಸ್ತಿನಲ್ಲಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT