ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರುಳು ಸೇವೆ ನಡೆಸಿದ ರೈತರು

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಾದಯಾತ್ರೆ
Last Updated 14 ಫೆಬ್ರುವರಿ 2023, 5:20 IST
ಅಕ್ಷರ ಗಾತ್ರ

ಗುಬ್ಬಿ: ರೈತ ಸಂಘದ ಸಂಸ್ಥಾಪಕ ಪ್ರೊ.ನಂಜುಂಡಸ್ವಾಮಿ ಅವರ ಜನ್ಮ ದಿನಾಚರಣೆಯ ನೆನಪಿನಲ್ಲಿ ರೈತರ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಿಟ್ಟೂರಿನಿಂದ ಗುಬ್ಬಿ ತಾಲ್ಲೂಕು ಕಚೇರಿವರೆಗೆ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಾಜಿ ಸೈನಿಕರ ಸಹಯೋಗದೊಂದಿಗೆ ಸೋಮವಾರ ಪಾದಯಾತ್ರೆ
ಹಮ್ಮಿಕೊಳ್ಳಲಾಗಿತ್ತು.

ಪಾದಯಾತ್ರೆ ತಾಲ್ಲೂಕು ಕಚೇರಿ ಸಮೀಪ ತಲುಪಿದಾಗ ರೈತ ಸಂಘದ ಹಾಗಲವಾಡಿ ಘಟಕದ ಅಧ್ಯಕ್ಷ ಕೃಷ್ಣಜೆಟ್ಟಿ ಅರೆಬೆತ್ತಲೆಯಾಗಿ ಉರುಳು ಸೇವೆ ನಡೆಸಿ ರೈತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಎ ಗೋವಿಂದರಾಜು ಮಾತನಾಡಿ, ಪ್ರೊ.ನಂಜುಂಡಸ್ವಾಮಿ ರೈತಪರ ಚಿಂತನೆಗಳು ಸ್ಫೂರ್ತಿ ತುಂಬುವ ಜತೆಗೆ ಹೋರಾಟದ ಮನೋಭಾವನೆ ಮೂಡಿಸುತ್ತವೆ. ಅವರು ಹೋರಾಟದಿಂದ ಮಾತ್ರ ನಮ್ಮ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ನ್ಯಾಯದ ಮಾರ್ಗದಲ್ಲಿ ಹೋರಾಟವನ್ನು ಮುಂದುವರೆಸೋಣ ಎಂದು ಕರೆ ನೀಡಿದರು.

ರೈತಸಂಘ ಜಿಲ್ಲಾ ಘಟಕದ ಕಾರ್ಯದರ್ಶಿ ಶಂಕರಪ್ಪ ಮಾತನಾಡಿ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ನಿಗದಿಪಡಿಸದಿದ್ದರೆ ರೈತರ ಬದುಕು ಸಂಕಷ್ಟಕ್ಕೆ ಗುರಿಯಾಗುವುದು. ಸರ್ಕಾರ ತೆಂಗು ಮತ್ತು ಅಡಿಕೆ ಬೆಳೆಗಾರರನ್ನು ಸಂರಕ್ಷಿಸಬೇಕಾದ ಅಗತ್ಯವಿದೆ. ವಿದೇಶದಿಂದ ಆಮದಾಗುತ್ತಿರುವ ಅಡಿಕೆಯನ್ನು ತಕ್ಷಣ ನಿಲ್ಲಿಸಿ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಎಂದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ತಾಲ್ಲೂಕು ಆಡಳಿತ ಎಲ್ಲಾ ರೀತಿಯಿಂದಲೂ ವಿಫಲವಾಗಿದೆ. ಬಗರ್ ಹುಕುಂ ಸಭೆ ಕರೆದು ಹಲವಾರು ವರ್ಷಗಳಿಂದ ಅನುಭವದಲ್ಲಿರುವ ರೈತರಿಗೆ ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿದರು.

ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ ಮಾತನಾಡಿ, ಋಷಿ ಮತ್ತು ಕೃಷಿ ಸಂಸ್ಕೃತಿ ಭಾರತದ ಮೂಲ ಪರಂಪರೆಗಳಾಗಿವೆ. ಕೃಷಿಗೆ ಹಾಗೂ ರೈತರ ಬೆಂಬಲಕ್ಕೆ ಸರ್ಕಾರವು ನಿಲ್ಲದಿದ್ದಲ್ಲಿ ದೇಶದ ಪರಿಸ್ಥಿತಿಯೇ ಅಭಿವೃದ್ಧಿ ಹೀನವಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಲೋಕೇಶ್ ಕಾರ್ಯಧ್ಯಕ್ಷ ಗುರುಚನ್ನಬಸವಯ್ಯ, ಪದಾಧಿಕಾರಿ ಗಂಗರೇವಣ್ಣ, ನಟರಾಜು, ಬಸವರಾಜು, ಯುವಘಟಕದ ಶಿವಕುಮಾರ್, ಪ್ರಾಂತ ರೈತ ಸಂಘದ ಅಜ್ಜಪ್ಪ, ದಲಿತ ಸಂಘರ್ಷ ಸಮಿತಿಯ ನಾಗರಾಜು, ಕೃಷ್ಣಪ್ಪ, ಕರವೇ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT