ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಮ್ಮನಹಳ್ಳಿ ಗೊಲ್ಲರಹಟ್ಟಿ| ಶಾಲೆ ಮೂಲ ಸೌಕರ್ಯ ಪರಿಶೀಲನೆ

ಜಿಲ್ಲಾಮಟ್ಟದ ಅಧಿಕಾರಿಗಳ ಭೇಟಿ
Last Updated 18 ಸೆಪ್ಟೆಂಬರ್ 2019, 14:17 IST
ಅಕ್ಷರ ಗಾತ್ರ

ಪಾವಗಡ: ಪೆಮ್ಮನಹಳ್ಳಿ ಗೊಲ್ಲರಹಟ್ಟಿ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಬುಧವಾರ ಭೇಟಿ ನೀಡಿ ಮಾತನಾಡಿದರು.

ಸಂಸದರಿಗೆ ಮಾತ್ರವಲ್ಲದೆ ಯಾರೇ ಗ್ರಾಮಕ್ಕೆ ಬಂದರೂ ಅವರಿಗೆ ಮುಕ್ತ ಅವಕಾಶ ನೀಡಬೇಕು. ಯಾದವ ಸಮುದಾಯದ ಮುಖಂಡರು ನೀಡಿರುವ ಮನವಿಯಲ್ಲಿರುವ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.

ಗೊಲ್ಲರಹಟ್ಟಿಗಳಲ್ಲಿರುವ ಸಮಸ್ಯೆಗಳ ಬಗ್ಗೆ ಅರಿವಿದೆ. ಮೌಢ್ಯ ನಿವಾರಿಸಲು ಅಗತ್ಯವಿರುವ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಹಟ್ಟಿಗಳಿಗೆ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಮೇವಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಮತ್ತೆ ಪುನರಾರಂಭಿಸಲಾಗುವುದು. ಆದಾಯ ಹೆಚ್ಚಿರುವ ಅನರ್ಹರಿಗೆ ವಸತಿ ಸೌಕರ್ಯ ಕಲ್ಪಿಸಬಾರದು. ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಈ ನಿಟ್ಟಿನಲ್ಲಿ ಗ್ರಾಮಸಭೆ ನಡೆಸಿ ಆಯ್ಕೆ ಪ್ರಕ್ರಿಯೆ ವಿಡಿಯೊ ಚಿತ್ರೀಕರಣ ನಡೆಸುವಂತೆ ತಿಳಿಸಲಾಗುವುದು ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಡಿವೈಎಸ್‌ಪಿ ಧರಣೀಶ್, ಉಪ ವಿಭಾಗಾಧಿಕಾರಿ ಚಂದ್ರಶೇಕರಯ್ಯ, ತಹಶೀಲ್ದಾರ್ ವರದರಾಜು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ರಮಾ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ರವೀಂದ್ರ ರೆಡ್ಡಿ, ಸಹಾಯಕ ನಿರ್ದೇಶಕ ಶಿವಣ್ಣ, ಮುಖಂಡ ನರಸಿಂಹಯ್ಯ, ಅಕ್ಕಲಪ್ಪ, ಮೈಲಾರರೆಡ್ಡಿ ಉಪಸ್ಥಿತರಿದ್ದರು.

ಯಾದವ ಪೀಠದ ಸ್ವಾಮೀಜಿ ಭೇಟಿ: ಗ್ರಾಮಕ್ಕೆ ಚಿತ್ರದುರ್ಗದ ಯಾದವ ಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಭೇಟಿ ನೀಡಿ ಗ್ರಾಮಸ್ಥರ ಮನಃ ಪರಿವರ್ತನೆಗೆ ಯತ್ನಿಸಿದರು.

ಶ್ರೀಕೃಷ್ಣ ಜಾಂಬವಂತನ ಮಗಳನ್ನು ವಿವಾಹವಾಗಿದ್ದಾರೆ. ಅಂತಹದರಲ್ಲಿ ಅವರನ್ನು ಆರಾಧಿಸುವ ನಾವು ಏಕೆ ತಾರತಮ್ಯ ಮಾಡಬೇಕು. ಇಂತಹ ಪದ್ಧತಿಗಳನ್ನು ಬಿಟ್ಟು, ಅಭಿವೃದ್ಧಿಯತ್ತ ಗಮನಹರಿಸಿ ಎಂದು ಕರೆ ನೀಡಿದರು.

ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಜಿ. ಚಂದ್ರಶೆಖರ ಗೌಡ, ಪ್ರಧಾನ ಕಾರ್ಯದರ್ಶಿ ಮಹಲಿಂಗಪ್ಪ, ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT