ಪಾವಗಡ: ಶನೈಶ್ಚರ ದೇಗುಲದ ಗರ್ಭಗುಡಿ, ಪ್ರಾಂಗಣಕ್ಕೆ ಚಿನ್ನದ ಕವಚ ಹೊಡಿಸುವ ಯೋಜನೆಗೆ ಎಸ್‌ಎಸ್‌ಕೆ ಸಂಘ ಚಾಲನೆ ನೀಡಿದೆ.
ರಾಜ್ಯ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಶನೈಶ್ಚರ ದೇಗುಲ ಎಂದು ಗುರುತಿಸಿಕೊಂಡಿರುವ ಇಲ್ಲಿಗೆ ವರ್ಷವಿಡೀ ರಾಜ್ಯದ ವಿವಿಧ ಭಾಗಗಳು ಸೇರಿದಂತೆ, ಆಂಧ್ರ, ಕೇರಳ, ತಮಿಳುನಾಡು ರಾಜ್ಯಗಳಿಂದ ಲಕ್ಷಾಂತರ ಮಂದಿ ಭಕ್ತರು ಬರುತ್ತಾರೆ.
ಶ್ರಾವಣ ಮಾಸದಲ್ಲಿ ಶುಕ್ರವಾರ ರಾತ್ರಿಯಿಂದಲೇ ದೇಗುಲ ಇರುವ ಪ್ರದೇಶ ಜನರಿಂದ ತುಂಬಿರುತ್ತದೆ. ದೇಗುಲದ ಗರ್ಭಗುಡಿ, 9 ಕಂಬಗಳನ್ನೊಳಗೊಂಡ ಪ್ರಾಂಗಣ, ಗಣಪತಿ, ಶೀತಲಾ ದೇವಿ, ಸತ್ಯನಾರಾಯಣ ಗುಡಿ ಸೇರಿದಂತೆ 1,700 ಚ.ಅಡಿಗಳಷ್ಟು ಚಿನ್ನದ ಕವಚ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಸುಮಾರು ₹6.5 ಕೋಟಿ ವೆಚ್ಚವಾಗಲಿದ್ದು, ಆದೋನಿಯ ಶಿಲ್ಪಿ ಗುಂಡಾಚಾರ್ ಅವರಿಗೆ ಗುತ್ತಿಗೆ ನೀಡಲಾಗಿದೆ. ಆರು ತಿಂಗಳೊಳಗಾಗಿ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಎಸ್‌ಎಸ್‌ಕೆ ಸಂಘದ ಅಧ್ಯಕ್ಷ ಸಿ.ಎನ್. ಆನಂದರಾವ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಶ್ರಾವಣ ಮಾಸಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಶುಕ್ರವಾರ, ಶನಿವಾರ, ಭಾನುವಾರ, ಸೋಮವಾರ ಬಂದ ಭಕ್ತಾದಿಗಳಿಗೆ ಊಟದ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಉಳಿದುಕೊಳ್ಳಲು ಡಾರ್ಮೆಟರಿ, ಕೊಠಡಿ ವ್ಯವಸ್ಥೆ ಇದೆ. ಇದರೊಟ್ಟಿಗೆ ಕುಳಿತುಕೊಂಡು ಪೂಜಾ ಕೈಂಕರ್ಯ ವೀಕ್ಷಿಸುವ ವ್ಯವಸ್ಥೆ ಇದೆ ಎಂದು ತಿಳಿಸಿದರು.
ಶ್ರಾವಣ ಮಾಸದ ವಿಶೇಷ ಪೂಜಾ ಕಾರ್ಯಕ್ರಮಗಳು: ಶ್ರಾವಣ ಮಾಸದ ವಿಶೇಷ ಪೂಜಾ ಕಾರ್ಯಕ್ರಮಗಳಿಗಾಗಿ ಪಟ್ಟಣದ ಶನೈಶ್ಚರ ದೇಗುಲವನ್ನು ಬಗೆ ಬಗೆಯ ಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಆಗಸ್ಟ್-10, ಆಗಸ್ಟ್-17, ಆಗಸ್ಟ್- 24ರಂದು ಬೆಳಗಿನ ಜಾವ 4 ಗಂಟೆಯಿಂದ ತೈಲಾದಿ ಅಭಿಷೇಕ, ನವಗ್ರಹ ಪೂಜೆ, ರಾತ್ರಿ 7.30ಕ್ಕೆ ವಿಶೇಷ ಪೂಜೆ, ಉತ್ಸವ ನಡೆಯಲಿದೆ.
ಆಗಸ್ಟ್-16 ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 9ರಿಂದ ಶೀತಲಾಂಬ ದೇವಿ ಮೂಲ ಯಂತ್ರಕ್ಕೆ ಸಹಸ್ರ ಕುಂಕುಮಾರ್ಚನೆ. ಮಹಾ ಮಂಗಳಾರತಿ ನಡೆಯಲಿದೆ. ಆಗಸ್ಟ್-31 ರಂದು ರಾತ್ರಿ ವಾದ್ಯ ಗೋಷ್ಠಿಯೊಂದಿಗೆ ಜ್ಯೇಷ್ಟಾದೇವಿ ಸಮೇತ ಶನೈಶ್ಚರ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.