ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರೂ ದಡ್ಡರಲ್ಲ, ಧೈರ್ಯವಾಗಿ ಪರೀಕ್ಷೆ ಎದುರಿಸಿ

ಪ್ರಜಾವಾಣಿ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಡಿಡಿಪಿಐ ಎಂ.ಆರ್.ಕಾಮಾಕ್ಷಿ
Last Updated 28 ಡಿಸೆಂಬರ್ 2019, 15:23 IST
ಅಕ್ಷರ ಗಾತ್ರ

ತುಮಕೂರು: ಕಷ್ಟದ ವಿಷಯಗಳನ್ನು ಇಷ್ಟ ಪಟ್ಟು ಓದಿ. ಗೊತ್ತಿಲ್ಲದ ವಿಚಾರಗಳನ್ನು ಶಿಕ್ಷಕರಿಂದ ಕೇಳಿ ತಿಳಿಯರಿ. ಒತ್ತಡಕ್ಕೆ ಬಿದ್ದು ಓದಬೇಡಿ. ಈಗಿನಿಂದಲೇ ಪರೀಕ್ಷೆಗೆ ಸಿದ್ಧರಾಗಿ. ಓದಿದ್ದನ್ನು ಮನನ ಮಾಡಿ. ಪರೀಕ್ಷೆ ಬಗ್ಗೆ ಯಾವುದೇ ಭಯ ಬೇಡ. 90 ದಿನ ಆರೋಗ್ಯ, ಆಹಾರದ ಬಗ್ಗೆ ಎಚ್ಚರ ವಹಿಸಿ. ಇಷ್ಟು ದಿನ ಹಾರ್ಡ್‌ವರ್ಕ್‌ ಮಾಡಿದ್ದೀರಿ, ಇನ್ನು ಮುಂದೆ ಸ್ಮಾರ್ಟ್‌ವರ್ಕ್‌ ಮಾಡಿ ಖಂಡಿತ ನೀವು ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುತ್ತೀರಾ...

ಇದು ತುಮಕೂರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಂ.ಆರ್.ಕಾಮಾಕ್ಷಿ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನೀಡಿದ ಸಲಹೆ.

ತುಮಕೂರು ಪ್ರಜಾವಾಣಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಉಪನಿರ್ದೇಶಕರು ಜಿಲ್ಲೆಯ ವಿವಿಧೆಡೆಯಿಂದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕರು ಕರೆ ಮಾಡಿದರು. ಆರಂಭದಿಂದಲೂ ಆತ್ಮವಿಶ್ವಾಸ ತುಂಬುವ ನುಡಿಗಳನ್ನಾಡುತ್ತಲೇ ವಿದ್ಯಾರ್ಥಿಗಳನ್ನು, ಪೋಷಕರನ್ನು ಪ್ರೋತ್ಸಾಹಿಸಿದರು.

ಎಲ್ಲಿಯೂ ತಾಳ್ಮೆ ಕಳೆದುಕೊಳ್ಳದೇ ನಗುಮುಖದಿಂದಲೇ ಎಲ್ಲರ ಸಮಸ್ಯೆಗಳಿಗೆ ಉತ್ತರ ನೀಡಿದರು.ಮಕ್ಕಳು ಕರೆ ಮಾಡಿದಾಗ ‘ಭಯಪಡಬೇಡ, ನಿನ್ನ ಸಮಸ್ಯೆ ಏನು ಹೇಳು ಪುಟ್ಟ’ ಎನ್ನುತ್ತಲೇ ಮಕ್ಕಳಲ್ಲಿ ಇದ್ದ ಪರೀಕ್ಷಾ ಗೊಂದಲಗಳನ್ನು ಸೂಕ್ಷ್ಮವಾಗಿ ಆಲಿಸಿ, ಬಗೆಹರಿಸಿದರು. ಉಪನಿರ್ದೇಶಕರಿಗೆ ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳು ಶಿಕ್ಷಕರು ಸಾಥ್ ನೀಡಿದರು.

10ರೊಳಗೆ ಸ್ಥಾನ: ಪರೀಕ್ಷಾ ಸಿದ್ಧತೆ ಹಾಗೂ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಉಪನಿರ್ದೇಶಕರು, ‘ಕೇವಲ ಉತ್ತಮ ಸ್ಥಾನ ಪಡೆಯುವುದಷ್ಟೇ ನಮ್ಮ ಉದ್ದೇಶವಲ್ಲ. ಗುಣಮಟ್ಟದ ಫಲಿತಾಂಶ ಪಡೆಯುವುದು ನಮ್ಮ ಮುಖ್ಯ ಗುರಿ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಜ್ಜುಗೊಂಡಿದೆ. ಶಿಕ್ಷಕರು ಸಹ ಗುಣಮಟ್ಟದ ಫಲಿತಾಂಶ ನೀಡಲು ಶ್ರಮಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಮೊದಲ 10ರೊಳಗೆ ಸ್ಥಾನ ಪಡೆಯುತ್ತೇವೆ’ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕಹಿಯಾದ ಔಷಧಿ ಆರೋಗ್ಯಕ್ಕೆ ಒಳ್ಳೆಯದು ಎಂಬಂತೆ ಮಕ್ಕಳಿಗೆ ಹಿಂಸೆಯಾದರೂ ಪರವಾಗಿಲ್ಲ ಎಂದು ಭಾವಿಸಿ ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಈಗಾಗಲೇ ನೂರು ದಿನದ ಕಾರ್ಯತಂತ್ರ ರೂಪಿಸಲಾಗಿದ್ದು, ಉತ್ತಮ ಫಲಿತಾಂಶಕ್ಕಾಗಿ ಪ್ರತಿದಿನವೂ ಒಂದೊಂದು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ಪ್ರಶ್ನೋತ್ತರ:

‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಹಲವು ಕರೆಗಳು ಬಂದಿದ್ದು, ಅದರಲ್ಲಿ ಆಯ್ದ ಪ್ರಶ್ನೆ ಮತ್ತು ಉತ್ತರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

* ಸಂದೀಪ್‌, ವಿದ್ಯಾರ್ಥಿ, ಸೊಂದೇನಹಳ್ಳಿ ಫ್ರೌಡಶಾಲೆ

ಇತರೆ ವಿಷಯಗಳಲ್ಲಿ 1 ಅಂಕದ ಪ್ರಶ್ನೆಗಳಿಗೆ ಉತ್ತರಗಳನ್ನು ಚಿಕ್ಕದಾಗಿ ಬರೆಯಬಹುದು. ಆದರೆ ಗಣಿತ ವಿಷಯದಲ್ಲಿ ಮಾತ್ರ ಏಕೆ ದೊಡ್ಡ ಉತ್ತರಗಳನ್ನು ಬರೆಯಬೇಕು?

– ಪ್ರಶ್ನೆಗಳಿಗೆ ಅನುಗುಣವಾಗಿ ಉತ್ತರಗಳನ್ನು ಬರೆಯಬೇಕಾಗುತ್ತದೆ. ಇತರೆ ವಿಷಯಗಳಲ್ಲಿ ಕೆಲವೊಮ್ಮೆ ವಿವರಣೆಗಳು ಕಡಿಮೆ ಇದ್ದು, ಚಿಕ್ಕ ಉತ್ತರ ಸಾಕಾಗುತ್ತದೆ. ಆದರೆ, ಗಣಿತ ವಿಷಯ ಆ ರೀತಿ ಇರುವುದಿಲ್ಲ. ಕೆಲವೊಮ್ಮೆ ದೀರ್ಘ ಉತ್ತರ ಬರೆಯಬೇಕಾಗುತ್ತದೆ. ಶಿಕ್ಷಕರಿಂದ ಸಲಹೆ ಪಡೆದು, ಅಭ್ಯಾಸ ಮಾಡಿದರೆ ಉತ್ತರಿಸಲು ಸುಲಭವಾಗಬಹುದು.

* ದಿನೇಶ್‌, ಪೋಷಕರು, ತಿಪಟೂರು

ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಬದಲಾವಣೆ ಆಗಿರುವ ಕಾರಣ ವಿದ್ಯಾರ್ಥಿಗಳು ಅಂಕ ಗಳಿಕೆಯಲ್ಲಿ ಹಿಂದೆ ಬೀಳಬಹುದು ಎನ್ನುವ ಆತಂಕ ಕಾಡುತ್ತಿದೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿದ್ದರೆ ಚೆನ್ನಾಗಿತ್ತು?

– ಪ್ರಶ್ನೆ ಪತ್ರಿಕೆ ತಯಾರಿಯಲ್ಲಿ ಪ್ರಮುಖವಾದ ಬದಲಾವಣೆಗಳನ್ನು ಮಾಡಿಲ್ಲ. ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಮಕ್ಕಳಿಗೆ ಬರವಣಿಗೆಯ ಕೌಶಲ ಹೆಚ್ಚಾಗಲಿ ಎನ್ನುವ ಕಾರಣಕ್ಕೆ 3 ಮತ್ತು 5 ಅಂಕದ ಪ್ರಶ್ನೆಗಳನ್ನು ಕೇಳಲಾಗಿದೆ, ಬಹು ಆಯ್ಕೆಯ ಪ್ರಶ್ನೆಗಳಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ಈಗಾಗಲೇ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಶಾಲೆಗಳಿಗೆ ನೀಡಿದ್ದು, ಅವುಗಳನ್ನು ಗಮನವಿಟ್ಟು ಅಭ್ಯಾಸ ಮಾಡಿದರೆ ಉತ್ತಮ ಅಂಕ ಪಡೆಯಬಹುದು.

* ಸೋಮಶೇಖರ್‌, ಶಿಕ್ಷಕ, ವಿವೇಕಾನಂದ ಫ್ರೌಡಶಾಲೆ, ಅಮೃತ್ತೂರು

3 ಅಂಕದ ಪ್ರಶ್ನೆಗಳು ಹೆಚ್ಚಾಗಿ, 2 ಅಂಕದ ಪ್ರಶ್ನೆಗಳು ಕಡಿಮೆ ಆಗಿರುವುದರಿಂದ ಓದಿನಲ್ಲಿ ಹಿಂದಿರುವ ವಿದ್ಯಾರ್ಥಿಗಳು ನಪಾಸಾಗುವ ಸಾಧ್ಯತೆ ಹೆಚ್ಚಿದೆ?

– ಶಿಕ್ಷಕರಾದವರೆ ಭಯಭೀತರಾದರೆ ವಿದ್ಯಾರ್ಥಿಗಳಿಗೆ ಧೈರ್ಯ ಹೇಳುವವರು ಯಾರು? ಪ್ರಶ್ನೆಪತ್ರಿಕೆ ವಿಧಾನ ಬದಲಾವಣೆಯಿಂದ ಹೆಚ್ಚೆನೂ ತೊಂದರೆ ಆಗುವುದಿಲ್ಲ, 3 ಅಂಕದ ಪ್ರಶ್ನೆಗಳಿಗೆ ಉತ್ತರಿಸುವಾಗ ಕೊಂಚ ವಿವರಗಳನ್ನು ಸೇರಿಸಿದರೆ ಸಾಕು. ವಿದ್ಯಾರ್ಥಿಗಳು ದೀರ್ಘ ಉತ್ತರಕ್ಕೆ ತಯಾರಿ ನಡೆಸಿದರೆ ಅದನ್ನು ಹಿಗ್ಗಿಸಬಹುದು ಅಥವಾ ಕುಗ್ಗಿಸಬಹುದು.

* ಯತೀಶ್‌ ಚಂದ್ರ, ಪೋಷಕರು, ತಿಪಟೂರು

ನನ್ನ ಮಗ 10 ನೇ ತರಗತಿ ಓದುತ್ತಿದ್ದು, ಓದಿನಲ್ಲಿ ಹಿಂದೆ ಬಿದ್ದಿದ್ದಾನೆ. ಪುಸ್ತಕವನ್ನು ಹಿಡಿಯುವುದೇ ಇಲ್ಲ ಇದಕ್ಕೆ ಪರಿಹಾರ ತಿಳಿಸಿ?

– ನೀವು ಮನೆಯಲ್ಲಿ ಟಿ.ವಿ ನೋಡುತ್ತಿದ್ದರೆ ಅದರಿಂದ ಕೆಲವು ದಿನ ದೂರವಿರಿ. ಮಗನ ಬಳಿ ಪ್ರೀತಿಯಿಂದ ಮಾತನಾಡಿ, ಸಂಜೆಯ ಹೊತ್ತು ಅಪ್ಪ, ಅಮ್ಮ ಇಬ್ಬರೂ ಪಕ್ಕದಲ್ಲಿ ಕುಳಿತುಕೊಂಡು ಪುಸ್ತಕ ಹಿಡಿಯುವಂತೆ ಮಾಡಿ.

* ಗುರುಕಿರಣ್, ವರ್ತಕರು, ಕುಣಿಗಲ್‌

ವ್ಯಾಕರಣಗಳನ್ನು ಸುಲಭವಾಗಿ ಮನದಟ್ಟಾಗುವ ರೀತಿಯಲ್ಲಿ ಪಾಠ ಮಾಡಲಾಗುತ್ತಿದೆಯೆ?

ಕನ್ನಡ, ಇಂಗ್ಲಿಷ್‌ ಹಿಂದಿ ಭಾಷೆಗಳಿಗೆ ಸಂಬಂಧಿಸಿದಂತೆ ವ್ಯಾಕರಣ ಕಲಿಕೆಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಇದರ ಕುರಿತು ವಿಶೇಷ ಗಮನ ಹರಿಸುತ್ತೇವೆ.

* ವಿನೋದ್‌, ಕುಣಿಗಲ್‌

ಕಲಿಕೆಯಲ್ಲಿ ಹಿಂದೆ ಬಿದ್ದಿರುವ ವಿದ್ಯಾರ್ಥಿಗಳನ್ನು ಮೇಲೆತ್ತಲು ಯಾವ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ.

– ಎಲ್ಲಾ ಮಕ್ಕಳಲ್ಲೂ ಸಾರ್ಮರ್ಥ್ಯ ಇದೆ. ಪರೀಕ್ಷಾ ಭಯದ ಕಾರಣ ಓದಿನಲ್ಲಿ ಹಿಂದೆ ಬೀಳುವ ಮಕ್ಕಳನ್ನು ಗುರುತಿಸಿ ಅಂತಹ ಮಕ್ಕಳನ್ನು ಶಿಕ್ಷಕರು ದತ್ತು ಪಡೆಯುವ ಯೋಜನೆ ರೂಪಿಸಲಾಗಿದೆ. 5 ಮಕ್ಕಳನ್ನು ಒಳಗೊಂಡ ತಂಡಗಳನ್ನು ರಚಿಸಿ ಚುರುಕುಗೊಳಿಸುವ ಕಾರ್ಯ ನಡೆಯುತ್ತಿದೆ.

ಸಿದ್ದೇಶ್‌, ಶಿಕ್ಷಕರು, ದಬ್ಬೇಘಟ್ಟ, ತುರುವೇಕೆರೆ

* ಮಾದರಿ ಪ್ರಶ್ನೆ ಪತ್ರಿಕೆಗಳು ಚೆನ್ನಾಗಿ ಮೂಡಿ ಬಂದಿದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತಿದೆ. ಇನ್ನೂ ಹೆಚ್ಚಿನ ಪ್ರಶ್ನೆ ಪತ್ರಿಕೆಗಳನ್ನು ನೀಡಿದ್ದರೆ ಸಹಕಾರಿಯಾಗುತ್ತಿತ್ತು.

– ನಿಮ್ಮ ಅಭಿಲಾಷೆಯಂತೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒದಗಿಸಲಾಗುವುದು. ಇನ್ನೂ 10 ಮಾದರಿ ಪ್ರಶ್ನೆ ಪತ್ರಿಕೆಗಳು ಹಂತ ಹಂತವಾಗಿ ನಿಮ್ಮ ಕೈ ಸೇರಲಿವೆ.

* ಮಂಜುನಾಥ್‌, ಎಸ್‌ಡಿಎಂಸಿ ಅಧ್ಯಕ್ಷ, ಶೇಷೇನಹಳ್ಳಿ (ಗುಬ್ಬಿ ತಾ.)

ಸುಮಾರು 80 ಮಕ್ಕಳು ಓದುತ್ತಿರುವ ನಮ್ಮ ಊರಿನ ಶಾಲೆಗೆ ಶೌಚಾಲಯದ ವ್ಯವಸ್ಥೆ ಇಲ್ಲ.

– ಈ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಬಹುದು. ಸ್ಥಳೀಯ ಮುಖಂಡರಾಗಿರುವ ನೀವು ನರೇಗಾ ಯೋಜನೆ ಅಡಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿ. ಮಕ್ಕಳ ಗ್ರಮ ಸಭೆ ನಡೆದಾಗ ಮಕ್ಕಳ ಕಡೆಯಿಂದ ಮನವಿ ಸಲ್ಲಿಸಿದರೆ ಕೆಲಸ ಸುಲಭವಾಗಿ ಆಗುತ್ತದೆ.

* ರಮೇಶ್‌, ವೈ.ಎನ್‌.ಹೊಸಕೋಟೆ (ಪಾವಗಡ ತಾ)

ಪರೀಕ್ಷಾ ಭಯ ಹೋಗಲಾಡಿಸಲು ವಿದ್ಯಾರ್ಥಿಗಳಿಗೆ ಯಾವ ರೀತಿಯ ಸಲಹೆ ನೀಡುತ್ತೀರಿ?

– ಪರೀಕ್ಷೆ ಎಂದ ಕೂಡಲೆ ಭಯ ಪಡುವ ಅವಶ್ಯಕತೆಯೆ ಇಲ್ಲ. ಹೆದರಿಕೊಂಡರೆ ಓದಿರುವುದು ಮರೆತು ಹೋಗುತ್ತದೆ. ಆದ್ದರಿಂದ ನಿಮ್ಮ ಸುತ್ತಮುತ್ತಲ ಮಕ್ಕಳಿಗೆ ಧೈರ್ಯ ತುಂಬಿ, ಆತ್ಮವಿಶ್ವಾಸ ಬೆಳೆಸಿ.

* ಗೋವಿಂದಪ್ಪ, ಕೊಟ್ಟ, ಶಿರಾ ತಾಲ್ಲೂಕು

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಾಗಲು ಯಾವ ರೀತಿಯ ಯೋಜನೆಗಳನ್ನು ರೂಪಿಸಿದ್ದೀರಿ?.

– ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮೇಲೆ ವಿಶೇಷವಾಗಿ ನಿಗಾ ಇಡುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ ಹಾಗೂ 5 ಜನರ ಗುಂಪುಗಳನ್ನು ಮಾಡಿ ಓದಿನಲ್ಲಿ ಮುಂದಿರುವ ವಿದ್ಯಾರ್ಥಿಗಳ ಜತೆ ಸೇರಿಸಿ ಅಲ್ಲಿ ಗುಂಪು ಚರ್ಚೆ ಹಾಗೂ ಇನ್ನಿತರೆ ಚಟುವಟಿಕೆಗಳ ಮೂಲಕ ಮೇಲೆತ್ತುವ ಕೆಲಸ ಮಾಡಲಾಗುತ್ತಿದೆ. ಜತೆಗೆ ಶಿಕ್ಷಕರಿಗೆ ಇಂತಹ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಯೋಜನೆ ರೂಪಿಸಲಾಗಿದೆ.

* ಪ್ರಜ್ಞಾ, ಮಹಾತ್ಮಗಾಂಧಿ ಶಾಲೆ, ಅಮೃತೂರು

ಇನ್ನೂ ಪಾಠಗಳು ಮುಗಿದಿಲ್ಲ, ಪರೀಕ್ಷೆ ಹತ್ತಿರ ಬರುತ್ತಿರುವುದರಿಂದ ನಮಗೆ ಕಷ್ಟ ಆಗುತ್ತಿದೆ. ಜತೆಗೆ ಪ್ರಶ್ನೆ ಪತ್ರಿಕೆ ಮಾದರಿ ಸಹ ಬದಲಾಗಿರುವುದರಿಂದ ಪರೀಕ್ಷಾ ಸಮಯ ಹೆಚ್ಚಳ ಮಾಡಬೇಕಾಗಿ ವಿನಂತಿ?

– ಡಿಸೆಂಬರ್‌ ಒಳಗೆ ಎಲ್ಲಾ ಪಾಠಗಳನ್ನು ಮುಗಿಸುವಂತೆ ತಿಳಿಸಿದ್ದೆವು. ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ, ಅದಕ್ಕೆ ನಿಮ್ಮ ಶಿಕ್ಷಕರ ಮೇಲೆ ನೀವೇ ಒತ್ತಡ ಹಾಕಿ ವಿಶೇಷ ತರಗತಿಗಳು ನಡೆಯುವಂತೆ ನೋಡಿಕೊಳ್ಳಿ. ಈಗಾಗಲೇ ಪರೀಕ್ಷಾ ಸಮಯವನ್ನು 15 ನಿಮಿಷ ಹೆಚ್ಚಳ ಮಾಡಲಾಗಿದೆ ಆತಂಕ ಬೇಡ.

* ಭೂಮಿಕಾ, ವಿದ್ಯಾರ್ಥಿನಿ, ಗೋಣಿ ತುಮಕೂರು

ಹೆಚ್ಚು ಅಂಕ ಗಳಿಸಲು ಏನು ಮಾಡಬೇಕು, ಸಲಹೆ ನೀಡಿ ಮೇಡಮ್‌?‌

– ಟಿ.ವಿ ಹಾಗೂ ಮೊಬೈಲ್‌ ಬಳಕೆ ಒಂದಷ್ಟು ದಿನ ಕಡಿಮೆ ಮಾಡಿ, ನಿಮ್ಮದೇ ಆದ ವೇಳಾಪಟ್ಟಿ ತಯಾರಿಸಿಕೊಳ್ಳಿ. ಕಷ್ಟದ ವಿಷಯಗಳ ಪಟ್ಟಿ ಮಾಡಿಕೊಂಡು ಮನನ ಮಾಡಿಕೊಳ್ಳಿ. ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ. ಒಳ್ಳೆಯದಾಗಲಿ.

* ಸಬೀಹಾ, ವಿಜ್ಞಾನ ಶಿಕ್ಷಕಿ, ಗುಡ್ಡೇನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ

ಅಪ್ಲಿಕೇಶನ್ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವುದು ಕಷ್ಟವಾಗುತ್ತಿದೆ.

–ವಿಜ್ಞಾನವನ್ನು ಚನ್ನಾಗಿ ಓದಿ ಅರ್ಥೈಸಿಕೊಂಡರೇ ಮಕ್ಕಳಿಗೆ ಅರ್ಥೈಸುವುದು ಸುಲುಭ. ಹೆಚ್ಚಿನ ಮಾಹಿತಿ ಪಡೆಯಲು ವಿಜ್ಞಾನ ಕಾರ್ಯಗಾರದಲ್ಲಿ ಭಾಗವಹಿಸಿ.

* ಟಿ.ಪಿ.ಅಮೂಲ್ಯ, 10ನೇ ತರಗತಿ ವಿದ್ಯಾರ್ಥಿ, ಮಾಗಡಿಪಾಳ್ಯ ಕ್ರಾಸ್‌, ಕುಣಿಗಲ್‌ ತಾ

ಬಹುಪದೋಕ್ತಿಯ 4 ಶೂನ್ಯತೆಗಳಲ್ಲಿ 3 ಶೂನ್ಯತೆಗಳನ್ನು ನೀಡಿದಾಗ 4ನೇ ಶೂನ್ಯತೆ ಹೇಗೆ ಕಂಡುಹಿಡಿಯಬೇಕು?

– ದತ್ತ ಶೂನ್ಯತೆಗಳಲ್ಲಿ ಎರಡರಿಂದ ವರ್ಗ ಸಮೀಕರಣ ಕಂಡು ಹಿಡಿದು, ದೊರೆತ ವರ್ಗ ಸಮೀಕರಣದಿಂದ ಬಹುಪದೋಕ್ತಿಯನ್ನು ಭಾಗಿಸಿ 4ನೇ ಶೂನ್ಯ ಕಂಡು ಹಿಡಿಯಿರಿ.

*ಬಾಲಾಜಿ, 7ನೇ ತರಗತಿ, ಜಿ.ಗೊಲ್ಲರಹಟ್ಟಿ ಶಾಲೆ, (ಚಿ.ನಾ ಹಳ್ಳಿ ತಾ)

7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಮಾಡಿದ್ದರೆ ಚೆನ್ನಾಗಿತ್ತು?

– ನಿನ್ನ ಆಸೆ ಈ ವರ್ಷ ಈಡೇರುವ ಸಾಧ್ಯತೆ ಕಡಿಮೆ. ಮುಂದಿನ ವರ್ಷದಿಂದ ಪಬ್ಲಿಕ್‌ ಪರೀಕ್ಷೆ ಆರಂಭವಾಗಬಹುದು.

* ಶಿವದಾಸ್‌, ವಕೀಲ, ಮಧುಗಿರಿ

7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವ ಆಲೋಚನೆಯನ್ನು ಸರ್ಕಾರ ನಡೆಸಿತ್ತು, ಅಲ್ಲದೆ, ಪರೀಕ್ಷೆಯಲ್ಲಿ ಯಾವ ಮಕ್ಕಳನ್ನೂ ನಪಾಸು ಮಾಡುವುದಿಲ್ಲ ಎಂದಿದೆ. ಇದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳುವ ಸಾಧ್ಯತೆ ಹೆಚ್ಚಿಲ್ಲವೆ?

ಇದು ಇನ್ನೂ ಮಾತುಕತೆಯ ಹಂತದಲ್ಲಿ ಇದೆ. ಎಲ್ಲಾ ಮಕ್ಕಳು ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಈ ಪಬ್ಲಿಕ್‌ ಪರೀಕ್ಷೆಯ ಮುಖ್ಯ ಉದ್ದೇಶ ಹಾಗೂ ಮುಂದಿನ ಪರೀಕ್ಷೆಗಳಿಗೆ ತಾಲೀಮು ಮಾಡಿಸುವುದಾಗಿದೆ.

* ಟಿ.ಗೋವಿಂದಪ್ಪ, ನಿವೃತ್ತ ಕೃಷಿ ಅಧಿಕಾರಿ, ಕೊಟ್ಟ

ಇತ್ತೀಚೆಗೆ ಸರ್ಕಾರದ ಆದೇಶದಂತೆ ‘ವಾಟರ್‌ ಬೆಲ್‌’ ಯೋಜನೆ ಜಾರಿಗೊಳಿಸಲಾಗಿದ್ದು, ಇದರಿಂದ ವಿದ್ಯಾರ್ಥಿಗಳ ಸಮಯ ಹಾಳಾಗುವುದಿಲ್ಲವೇ?

– ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಇದು ಉತ್ತಮ ಯೋಜನೆ. ಮಕ್ಕಳ ದೇಹಕ್ಕೆ ನೀರು ಅತ್ಯವಶ್ಯಕ ಎಂಬುದನ್ನು ಅರಿತು ಸರ್ಕಾರ ಈ ಯೋಜನೆ ರೂಪಿಸಿದೆ. ಈ 10 ನಿಮಿಷದಲ್ಲಿ ವಿದ್ಯಾರ್ಥಿಗಳು ಕೇವಲ ನೀರು ಕುಡಿಯಲು ಮಾತ್ರವಲ್ಲದೆ ಶೌಚಾಲಯಕ್ಕೆ ಹೋಗಲು ಅವಕಾಶ ಕಲ್ಪಿಸಲಾಗಿದೆ.

* ಎಸ್‌.ಪಿ.ರುದ್ರಾಚಾರಿ, ಶಿರಾ

ಶಾಗದಡ ಹಾಗೂ ಸುತ್ತ ಮುತ್ತಲ ಪ್ರದೇಶಗಳ ಅನೇಕ ಸರ್ಕಾರಿ ಶಾಲೆಗಳು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ದಯವಿಟ್ಟು ಸರ್ಕಾರಿ ಶಾಲೆಗಳನ್ನು ಉಳಿಸುವ ಯೋಜನೆ ರೂಪಿಸಿ?

– ಈಗಾಗಲೇ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ಪಟ್ಟಿ ಮಾಡಲಾಗಿದೆ. ಜಿಲ್ಲೆಯ ಶಾಲೆಗಳ ದುರಸ್ತಿ ಕಾರ್ಯಕ್ಕೆ ಮೊದಲ ಹಂತದಲ್ಲಿ ₹ 13 ಕೋಟಿ ಬಿಡುಗಡೆಯಾಗಿದ್ದು, ಹಂತ ಹಂತವಾಗಿ ದುರಸ್ತಿಗೊಳಿಸಲಾಗುವುದು. ಈ ಬಗ್ಗೆ ಕ್ರಮವಹಿಸಲಾಗುವುದು.

ಉಪಸ್ಥಿತಿ: ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ತಂಡವೇ ಆಗಮಿಸಿತ್ತು. ಶಿಕ್ಷಣಾಧಿಕಾರಿ ಎ.ಟಿ.ರಂಗದಾಸಪ್ಪ, ಕನ್ನಡ ವಿಷಯ ಪರಿವೀಕ್ಷಕ ಎಚ್.ಜಿ.ಗಿರೀಶ್, ವಿಜ್ಞಾನ ವಿಷಯ ಪರಿವೀಕ್ಷಕಿ ಆರ್.ಪ್ರತಿಭಾ, ಸಮಾಜವಿಜ್ಞಾನ ವಿಷಯ ಪರಿವೀಕ್ಷಕ ಸುನೀಲ್ ಕುಮಾರ್, ಗಣಿತ ವಿಷಯ ಪರಿವೀಕ್ಷಕ ಮಂಜುನಾಥಾಚಾರ್, ಗಣಿತ ಶಿಕ್ಷಕ ಎ.ರಾಮಸ್ವಾಮಿ, ಕನ್ನಡ ಶಿಕ್ಷಕ ಎಸ್.ಕೃಷ್ಣಪ್ಪ, ಇಂಗ್ಲಿಷ್ ಶಿಕ್ಷಕ ಗಂಗಯ್ಯ, ವಿಜ್ಞಾನ ಶಿಕ್ಷಕಿ ಕೆ.ಎನ್.ದೇವಕಿ, ಸಮಾಜ ವಿಜ್ಞಾನ ಶಿಕ್ಷಕ ಆದಿನಾರಾಯಣ್, ಹಿಂದಿ ಶಿಕ್ಷಕ ಡಿ.ವಿ.ಶ್ರೀಕಾಂತ್ ಇದ್ದರು.

ಪ್ರಜಾವಾಣಿ ತಂಡ: ಸಿದ್ದೇಗೌಡ ಎನ್., ಡಿ.ಎಂ.ಕುರ್ಕೆ ಪ್ರಶಾಂತ್, ವಿಠಲ, ಅಭಿಲಾಷ, ಅನಿಲ್ ಕುಮಾರ್ ಜಿ., ಸೋಮಶೇಖರ್ ಎಸ್, ವಿನಯ್.

ಚಿತ್ರಗಳು: ಚನ್ನದೇವರು ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT