ಮಂಗಳವಾರ, ಆಗಸ್ಟ್ 9, 2022
20 °C
ಕೆಪಿಸಿಸಿ ಅಧ್ಯಕ್ಷ

ಪಿಕ್‍ಪಾಕೆಟ್ ಸರ್ಕಾರ: ಕೇಂದ್ರದ ವಿರುದ್ಧ ಡಿ.ಕೆ.ಶಿವಕುಮಾರ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ‘ಕೇಂದ್ರ ಸರ್ಕಾರ ಪಿಕ್‌ಪಾಕೆಟ್‌ ಸರ್ಕಾರವಾಗಿದ್ದು, ಜನರ ಜೇಬಿನಿಂದ ಪಿಕ್‍ಪಾಕೆಟ್ ಮಾಡಿ ಸರ್ಕಾರ ನಡೆಸುತ್ತಿರುವುದು ದುರಂತ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಕೆ.ಬಿ.ಕ್ರಾಸ್‍ನಲ್ಲಿ ಇಂಧನ, ಅಗತ್ಯ ವಸ್ತು ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಆಯೋಜಿಸಿದ್ದ ‘100 ನಾಟ್‌ಔಟ್‌’ ಪ್ರತಿಭಟನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದೇಶಕ್ಕೆ ₹35ಕ್ಕೆ ಸರಬರಾಜಾಗುತ್ತಿರುವ ಇಂಧನಕ್ಕೆ ₹65 ತೆರಿಗೆ ಕಟ್ಟುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ತೆರಿಗೆ ನೀತಿಯಿಂದ ಜನರನ್ನು ಸಂಕಷ್ಟಕ್ಕೆ ನೂಕಿವೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಇಂಧನ ಬೆಲೆ ಸ್ವಲ್ಪ ಏರಿದರೂ ಪ್ರತಿಭಟಿಸುತ್ತಿದ್ದರು. ಆಗ ಇದ್ದ ಹೋರಾಟ, ಛಲ ಈಗ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ಇಂಧನ ಬೆಲೆ ಏರಿಕೆ ಇತರ ವಸ್ತುಗಳ ಮೇಲೂ ಪರಿಣಾಮ ಬೀರಿದೆ. ಸಾಮಾನ್ಯ ಜನರು ಜೀವನ ನಡೆಸುವುದು ಕಷ್ಟವಾಗಿದೆ. ಕಟ್ಟಡ ಕೆಲಸದ ಸಾಮಗ್ರಿ ಬೆಲೆ ದುಪ್ಪಟ್ಟಾಗಿದೆ. ಲಾಕ್‍ಡೌನ್‌ನಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ರೈತರ ಕೃಷಿ ವಿಚಾರದಲ್ಲಿ ಬೆಲೆಗಳಲ್ಲಿ ಗಣನೀಯ ಏರಿಕೆ ಕಂಡಿದ್ದು, ರಸಗೊಬ್ಬರ ಬೆಲೆ ಕೇವಲ ಈ ತಿಂಗಳಿಗೆ ಮಾತ್ರವೇ ಕಡಿತಗೊಳಿಸಿದ್ದು ಮತ್ತೇ ಬೆಲೆ ಏರಿಕೆ ಆಗುತ್ತದೆ. ಕೃಷಿಯನ್ನೇ ನಂಬಿರುವವರು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದರು.

ಸರ್ಕಾರದ ವಿಫಲತೆಯ ಬಗ್ಗೆ ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡಬೇಕಿದ್ದು, ಸರ್ಕಾರದ ದೌರ್ಬಲ್ಯದ ವಿರುದ್ಧ ಸತತ ಹೋರಾಟ ಮಾಡಿ ಅಚ್ಚೇ ದಿನವನ್ನು ನೆನಪಿಸಬೇಕಿದೆ ಎಂದರು.

ಶಾಸಕ ಡಾ.ಜಿ.ಪರಮೇಶ್ವರ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶ ದಿವಾಳಿಯತ್ತ ಸಾಗುತ್ತಿದೆ. ದೇಶವನ್ನು ಸ್ವರ್ಗ ಮಾಡುತ್ತೇವೆ ಎಂದು ಬೊಬ್ಬೆ ಹೊಡೆದವರು ಅಧಿಕಾರ ಸಿಕ್ಕ ಕೂಡಲೇ ಬರೆ ಎಳೆಯುತ್ತಿದ್ದಾರೆ. ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಬದುಕನ್ನು ಹಾಳುಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಕೋವಿಡ್‌ಗಿಂತ ಭಯಂಕರ ವೈರಸ್ ಎಂದರೆ ಅದು ಬಿಜೆಪಿ ಸರ್ಕಾರ. ಬಿಜೆಪಿಯವರು ‘ಹಮ್ ದೊ, ಹಮಾರೆ ದಪ’ ಎನ್ನುವ ಮಾತುಗಳನ್ನಾಡುತ್ತಾರೆ. ‘ಹಮ್ ದೋ’ ಎಂದರೆ ಮೋದಿ ಮತ್ತು ಅಮಿತ್ ಶಾ, ‘ಹಮಾರೆ ದೊ’ ಎಂದರೆ ಅದಾನಿ ಮತ್ತು ಅಂಬಾನಿ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದರು.

ಮಾಜಿ ಶಾಸಕ ಕೆ.ಷಡಕ್ಷರಿ ಮಾತನಾಡಿ, ಪ್ರತಿದಿನ ಈ ರೀತಿ ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಇದ್ದು, ಈ ಸರ್ಕಾರದಲ್ಲಿ ಸಾಮಾನ್ಯ ಜನರು ಬದುಕಲು ಸಾಧ್ಯವೇ ಇಲ್ಲದಂತಹ ಸ್ಥಿತಿ ಇದೆ ಎಂದು ತಿಳಿಸಿದರು.

ರಫೀಕ್ ಅಹಮದ್, ಕಾಂಗ್ರೆಸ್ ವಕ್ತಾರ ಮುರುಳೀಧರ್ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ, ಕೆಪಿಸಿಸಿ ರಾಜ್ಯ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಾಂತಕುಮಾರ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಹುಲ್ಕುಂಟೆಮಠ್, ಕಾಂಗ್ರೆಸ್ ಮುಖಂಡ ಸಿ.ಬಿ.ಶಶಿಧರ್, ಮಾಜಿ ಜಿ.ಪಂ.ಸದಸ್ಯ ಜಿ.ನಾರಾಯಣ್, ಕೆಪಿಸಿಸಿ ಸದಸ್ಯ ಯೋಗೇಶ್, ಮುಖಂಡರಾದ ನಿಖಿಲ್ ರಾಜಣ್ಣ, ಆದರ್ಶ ಜಯಣ್ಣ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು