ಸೋಮವಾರ, ಏಪ್ರಿಲ್ 12, 2021
32 °C
ತುಮಕೂರು ಲೋಕಸಭಾ ಕ್ಷೇತ್ರದ ಫಲಿತಾಂಶದ ಫಲ; ಪರಮೇಶ್ವರ, ರಾಜಣ್ಣ ಬೆಂಬಲಿಗರ ಜಟಾಪಟಿ

ಕಾಂಗ್ರೆಸ್‌ನಲ್ಲಿ ಹೆಚ್ಚಿದ ಬೇಗುದಿ

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಲೋಕಸಭಾ ಚುನಾವಣೆ ಪೂರ್ಣವಾಗಿದೆ. ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ ಎನ್ನುವಂತೆ ಜಿಲ್ಲೆಯ ರಾಜಕಾರಣದಲ್ಲಿ ಹನಿಯ ಬದಲು ದೊಡ್ಡ ಅಲೆಯೇ ಎದ್ದಿದೆ.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರ ಸೋಲು ಜಿಲ್ಲೆಯ ಕಾಂಗ್ರೆಸ್‌ನೊಳಗಿದ್ದ ಆಂತರಿಕ ಬೇಗುದಿಯನ್ನು ಬಹಿರಂಗವಾಗಿ ತೆರೆದಿಟ್ಟಿದೆ. ರಾಜ್ಯ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗೂ ‘ವರ್ಚಸ್ಸಿ’ನ ಬಿಸಿತುಪ್ಪವಾಗಿದೆ.

ಫಲಿತಾಂಶದ ನಂತರ ಮಧುಗಿರಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕಾಂಗ್ರೆಸ್‌ನ ರೆಬಲ್ ನಾಯಕ ಎನಿಸಿದ್ದಾರೆ. ದೇವೇಗೌಡರ ಸ್ಪರ್ಧೆಯನ್ನು ಆರಂಭದಿಂದಲೂ ರಾಜಣ್ಣ ವಿರೋಧಿಸಿದ್ದರು. ಮಧುಗಿರಿಯಲ್ಲಿ ಬಿಜೆಪಿಗೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಮತಗಳೇ ಬಂದವು. ಇದಕ್ಕೆ ಕೆ.ಎನ್.ರಾಜಣ್ಣ ಅವರ ಸಹಕಾರ ಕಾರಣ ಎನ್ನುವುದನ್ನು ಬಿಜೆಪಿ ಮುಖಂಡರು ಬಹಿರಂಗವಾಗಿ ನುಡಿಯುವರು.

ಫಲಿತಾಂಶದ ನಂತರ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ವಿರುದ್ಧ ರಾಜಣ್ಣ ವಾಗ್ದಾಳಿ ನಡೆಸಿದ್ದು ಜಿಲ್ಲಾ ಕಾಂಗ್ರೆಸ್‌ ರಾಜಕಾರಣವನ್ನು ಬೀದಿಗೆ ತಂದು ನಿಲ್ಲಿಸಿದೆ. ರಾಜಣ್ಣ ಅವರ ‘ಝೀರೊ ಟ್ರಾಫಿಕ್ ಮಂತ್ರಿ’ ಎನ್ನುವ ಪದ ಪರಮೇಶ್ವರ ಬೆಂಬಲಿಗರನ್ನು ಕೆರಳಿಸಿದೆ.

ರಾಜಣ್ಣ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ದೂರು ನೀಡಿದರು. ಮತ್ತೊಂದು ಕಡೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ರಾಜಣ್ಣ, ಸಚಿವ ಎಚ್‌.ಡಿ.ರೇವಣ್ಣ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದರು. ಸರ್ಕಾರ ಸೇಡಿನ ಕ್ರಮಕ್ಕೆ ಮುಂದಾಗಿದೆ ಎಂದು ದೂರಿದರು. ಈ ಎಲ್ಲ ಬೆಳವಣಿಗೆಗಳು ತುಮಕೂರು ರಾಜಕಾರಣದತ್ತ ರಾಜ್ಯದ ಜನರು ತಿರುಗಿ ನೋಡುವಂತೆ ಮಾಡಿತು.

‘ಪರಮೇಶ್ವರ ಹಠಾವೋ ಕಾಂಗ್ರೆಸ್ ಬಚಾವೋ’ ಎನ್ನುವ ಭಿತ್ತಿಪತ್ರಗಳು ನಗರದ ವಿವಿಧ ಕಡೆಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅದಾಗಲೆ ಕೆಂಡವಾಗಿದ್ದ ಕಾಂಗ್ರೆಸ್ ಬೇಗುದಿಗೆ ತುಪ್ಪ ಸುರಿಯಿತು. ಇದೂ ಪರಸ್ಪರ ಆರೋಪ ಪ್ರತ್ಯಾರೋಪದ ಅಸ್ತ್ರವಾಗಿ ಬಳಕೆಯಾಯಿತು.

ರಾಜಣ್ಣ ಮತ್ತು ಪರಮೇಶ್ವರ ಬೆಂಬಲಿಗರ ನಡುವೆ ಆರೋಪ ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇದು ಪಕ್ಷದ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವ ಆತಂಕ ಮುಖಂಡರಲ್ಲಿ ಇದೆ.

ಸಮುದಾಯದ ಬಣ್ಣ: ರಾಜಣ್ಣ, ಪರಮೇಶ್ವರ ವಿರುದ್ಧ ವಾಗ್ದಾಳಿ ಮುಂದುವರಿಸಿದಂತೆ ಇದಕ್ಕೆ ಸಮುದಾಯದ ಬಣ್ಣವೂ ಬಂದಿದೆ. ಝೀರೊ ಟ್ರಾಫಿಕ್ ಎನ್ನುವ ಪದ ಬಳಸಿದ್ದಕ್ಕೆ ಆಕ್ಷೇಪಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ, ‘ನಮ್ಮ ದಲಿತ ಸಮುದಾಯಕ್ಕೆ ಮಾಡಿದ ಅವಮಾನ’ ಎಂದರು. ಕೆಲವು ದಲಿತ ಸಂಘಟನೆಗಳು ರಾಜಣ್ಣ ಅವರ ವಿರುದ್ಧ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯ ಸ್ಥಳಕ್ಕೆ ರಾಜಣ್ಣ ತೆರಳಿ ‘ನಾಲಿಗೆ ಸೀಳುವ’ ಎಚ್ಚರಿಕೆ ನೀಡಿದರು.

‘ಈ ಕೆಸರೆರಚಾಟ ಖಂಡಿತ ಪಕ್ಷಕ್ಕೆ ಒಳ್ಳೆಯದನ್ನು ತರುವುದಿಲ್ಲ. ಪರಸ್ಪರ ದ್ವೇಷ ಮತ್ತು ಒಡಕಿನ ಕಾರಣಕ್ಕೆ ಜಿಲ್ಲೆಯಲ್ಲಿ ಕಾಂಗ್ರೆಸ್ ಒಳ್ಳೆಯ ಅವಕಾಶಗಳನ್ನು ಕಳೆದುಕೊಂಡಿದೆ’ ಎನ್ನುವರು ಕಾಂಗ್ರೆಸ್‌ನ ಜಿಲ್ಲಾ ಮುಖಂಡರೊಬ್ಬರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.