ಭಾನುವಾರ, ನವೆಂಬರ್ 28, 2021
21 °C
ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಒತ್ತಾಯ

ಸತ್ಯಾಗ್ರಹಕ್ಕೆ ಎರಡು ದಿನ ಬಾಕಿ ಇದೆ, ಒಳ್ಳೆ ಸುದ್ದಿ ಬರಬಹುದು: ಮೃತ್ಯುಂಜಯ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಬೇಕು, ಕೇಂದ್ರದಲ್ಲಿ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಅ. 1ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸತ್ಯಾಗ್ರಹ ಆರಂಭಿಸುವುದು ನಿಶ್ಚಿತ ಎಂದು ಹೋರಾಟದ ನೇತೃತ್ವ ವಹಿಸಿರುವ ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರಕಟಿಸಿದರು.

ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ‘ಪ್ರತಿಜ್ಞಾ ಪಂಚಾಯತ್’ ಅಭಿಯಾನ ಮಂಗಳವಾರ ನಗರಕ್ಕೆ ಆಗಮಿಸಿದ್ದು, ಸಿದ್ಧಗಂಗಾ ಮಠದಲ್ಲಿ ತಂಗಿತ್ತು. ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಸ್ವಾಮೀಜಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಿಂದೆ ಹೋರಾಟ ನಡೆಸಿದ ಸಮಯದಲ್ಲಿ ಸೆಪ್ಟೆಂಬರ್ 15ರ ಒಳಗೆ ಮೀಸಲಾತಿ ಸೌಲಭ್ಯ ಕಲ್ಪಿಸುವುದಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ ಭರವಸೆ ಈಡೇರಿಲ್ಲ. ಸರ್ಕಾರ ನೀಡಿದ್ದ ಆರು ತಿಂಗಳ ಗಡುವುದು ಮುಗಿದಿದ್ದು, ಕೊಟ್ಟ ಮಾತು ನೆನಪಿಸಿ ಮತ್ತೆ ಹೋರಾಟ ಆರಂಭಿಸಲಾಗಿದೆ ಎಂದು ಹೇಳಿದರು.

ಸತ್ಯಾಗ್ರಹ ಆರಂಭಿಸಲು ಇನ್ನು ಎರಡು ದಿನಗಳಷ್ಟೇ ಬಾಕಿ ಉಳಿದಿದ್ದು, ಅಷ್ಟರಲ್ಲಿ ಒಳ್ಳೆ ಸುದ್ದಿ ಬರಬಹುದು ಎಂದು ನಿರೀಕ್ಷಿಸಿದ್ದೇವೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಒಂದು ವೇಳೆ ಮೀಸಲಾತಿ ನೀಡದಿದ್ದರೆ ಈಗಾಗಲೇ ನಿರ್ಧರಿಸಿರುವಂತೆ ಅ. 1ರಿಂದ ಸತ್ಯಾಗ್ರಹ ಆರಂಭವಾಗಲಿದೆ ಎಂದರು.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ‘ರಾಜ್ಯ ಸರ್ಕಾರಕ್ಕೆ ನೀಡಿದ್ದ ಆರು ತಿಂಗಳ ಗಡುವು ಮುಗಿದಿದೆ. ಅತ್ತ ಕಡೆಯಿಂದ ಬರುವ ಉತ್ತರ ನೋಡಿಕೊಂಡು ಹೋರಾಟ ಮುಂದುವರಿಸಲಾಗುವುದು. ಇದು ಕೊನೆಯದಾದ ಮಾಡು– ಇಲ್ಲವೆ ಮಡಿ ಹೋರಾಟವಾಗಿದೆ. ಮೀಸಲಾತಿ ಆದೇಶ ಪತ್ರ ಕೈಗೆ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರವರ್ಗ 2ಎಗೆ ಲಿಂಗಾಯತ ಪಂಚಮಸಾಲಿ ಸಮುದಾಯ ಸೇರಿಸುವುದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ನಾವು ಯಾರ ಮೀಸಲಾತಿಯನ್ನು ಕಿತ್ತುಕೊಳ್ಳುತ್ತಿಲ್ಲ. ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಕೇಳಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು