ಸೋಮವಾರ, ಆಗಸ್ಟ್ 8, 2022
24 °C

3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೋವಿಡ್ ಮೂರನೇ ಅಲೆ ಎದುರಿಸಲು ಜಿಲ್ಲಾ ಆಡಳಿತ ಸಜ್ಜಾಗಿದ್ದು, ಜಿಲ್ಲೆಯಲ್ಲಿ 8,672 ಅಪೌಷ್ಟಿಕ ಮಕ್ಕಳು ಇದ್ದಾರೆ. ಅದರಲ್ಲಿ 127 ತೀವ್ರ ಅಪೌಷ್ಟಿಕ ಮಕ್ಕಳಿದ್ದಾರೆ. ವಿವಿಧ ಕಾಯಿಲೆಯಿಂದ ಬಳಲುತ್ತಿರುವ 2,200 ಮಕ್ಕಳನ್ನು ಗುರುತಿಸಲಾಗಿದೆ.

ಕೋವಿಡ್ ತಡೆ ಸಂಬಂಧ ಸಭೆ ನಡೆದ ನಂತರ ಮಾಧ್ಯಮದವರ ಜತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ‘ಅಪೌಷ್ಟಿಕ ಮಕ್ಕಳ ಆರೋಗ್ಯದ ಕಡೆ ನಿಗಾ ವಹಿಸಲಾಗುತ್ತಿದೆ. ಅಪೌಷ್ಟಿಕ ಮಕ್ಕಳಿಗೆ ಡೇರಿಯಿಂದ ನಿತ್ಯ 200 ಗ್ರಾಂ ಹಾಲು ಹಾಗೂ ದಾನಿಗಳ ನೆರವಿನಿಂದ ಪೌಷ್ಟಿಕ ಆಹಾರ ವಿತರಣೆಗೆ ಚಿಂತನೆ ನಡೆಸಲಾಗುತ್ತಿದೆ. ಗುರುತಿಸಿರುವ ಮಕ್ಕಳನ್ನು ಉತ್ತಮ ಆರೋಗ್ಯ ಸ್ಥಿತಿಗೆ ಮರಳಿಸುವುದು ಮುಖ್ಯ ಉದ್ದೇಶವಾಗಿದೆ. ಈಗಾಗಲೇ ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

ಕೋವಿಡ್ ಮೂರನೇ ಅಲೆಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ಜ್ವರ, ತಲೆನೋವಿನಂತಹ ಲಕ್ಷಣಗಳು ಇರುವುದಿಲ್ಲ. ಕೊರೊನಾ ವೈರಸ್ ಬೇರೆ ರೀತಿಯಲ್ಲಿ ರೂಪಾಂತರ ಹೊಂದಬಹುದೆನ್ನುವ ಬಗ್ಗೆ ಚರ್ಚೆಯಾಗುತ್ತಿದೆ. ಕಣ್ಣು ಕೆಂಪಗಾಗಿ ಕಣ್ಣಿನ ಬಳಿ ಗುಳ್ಳೆಗಳಾಗುವ ಸಾಧ್ಯತೆ ಇದೆ. ವಾಂತಿ ಅಥವಾ ಭೇದಿಯಾಗುತ್ತದೆ. ಈ ಲಕ್ಷಣ ಕಂಡುಬಂದ ಮಕ್ಕಳನ್ನು ಕೋವಿಡ್ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ. ಕಣ್ಣು ಕೆಂಪಗಾಗಿ ಕಣ್ಣಿನ ಬಳಿ ಗುಳ್ಳೆಗಳಾಗಬಹುದೆಂಬ ಲಕ್ಷಣದ ಬಗ್ಗೆ ಇನ್ನೂ ಖಚಿತವಾಗಿಲ್ಲ ಎಂದರು.

ಸಾಮಾನ್ಯ ರೋಗ ಲಕ್ಷಣಗಳು ಕಂಡುಬಂದಲ್ಲಿ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ. ಮಕ್ಕಳ ಆರೈಕೆಗಾಗಿ ಈಗಾಗಲೇ 600 ಹಾಸಿಗೆ ಸಿದ್ಧಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸರ್ಕಾರದ 18 ಸೇರಿದಂತೆ ಒಟ್ಟು 70 ಮಕ್ಕಳ ವೈದ್ಯರಿದ್ದು, ಅವರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಬೆಂಗಳೂರಿನಿಂದ ಒಬ್ಬರು ತಜ್ಞರನ್ನು ಕರೆಸಿ ಎಲ್ಲ ವೈದ್ಯರೊಂದಿಗೆ ಸಭೆ ನಡೆಸಲಾಗುವುದು. 85 ಖಾಸಗಿ, 74 ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯು ವೆಂಟಿಲೇಟರ್‌ಗಳಿದ್ದು, ಅವುಗಳನ್ನು ಮಕ್ಕಳ ವೆಂಟಿಲೇಟರ್‌ಗಳನ್ನಾಗಿ ಮಾರ್ಪಾಡು ಮಾಡಲಾಗುವುದು. ಮಕ್ಕಳಿಗೆ ಸರಿ ಹೊಂದುವ ಮಾಸ್ಕ್ ವಿತರಣೆಗೂ ತಯಾರಿ ನಡೆಸಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಅಂಗನವಾಡಿಯಲ್ಲಿ 1,45,811, ಶಾಲೆಯಲ್ಲಿ 2.44 ಲಕ್ಷ ಸೇರಿ ಒಟ್ಟು 3.81 ಲಕ್ಷ ಮಕ್ಕಳಿದ್ದಾರೆ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು