ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಳೆ, ಕೋಳಿ, ಹಣ್ಣಿನ ಬೆಲೆ ಏರಿಕೆ

Last Updated 7 ಮಾರ್ಚ್ 2021, 3:57 IST
ಅಕ್ಷರ ಗಾತ್ರ

ತುಮಕೂರು: ಶಿವರಾತ್ರಿ ಸೇರಿದಂತೆ ಸಾಲುಸಾಲು ಹಬ್ಬಗಳು, ಊರಿನ ಜಾತ್ರೆ, ರಥೋತ್ಸವ ಇತರ ಕಾರ್ಯಕ್ರಮಗಳು ಬರುತ್ತಿದ್ದು ಧಾನ್ಯ, ಅಡುಗೆ ಎಣ್ಣೆ, ಕೋಳಿ, ಮೀನಿನ ಬೆಲೆಯಲ್ಲಿ ಹೆಚ್ಚಳವಾಗಿದೆ. ಮದುವೆ ಹಾಗೂ ಶುಭ ಸಮಾರಂಭಗಳು ಆರಂಭವಾಗಿದ್ದು ಬೆಲೆ ಏರಿಕೆಗೆ ಮತ್ತೊಂದು ಕಾರಣವಾಗಿದೆ.

ಬಿಸಿಲು ಜೋರಾಗುತ್ತಿದ್ದು, ಜೂಸ್‌ಗೆ ಬಳಸುವ ಹಣ್ಣುಗಳ ಧಾರಣೆ ಕೊಂಚ ದುಬಾರಿಯಾಗಿದೆ. ಈ ವಾರ ತರಕಾರಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ತೊಗರಿ ಬೇಳೆ ಕೆ.ಜಿ.ಗೆ ₹5, ಉದ್ದಿನಬೇಳೆ ₹10, ಕಡಲೆಬೇಳೆ ₹5, ಕಡಲೆ ಬೀಜ ಕೆ.ಜಿ.ಗೆ ₹10 ಹಾಗೂ ಉರಿಗಡಲೆ, ಸಕ್ಕರೆ ಬೆಲೆಯಲ್ಲಿ ಏರಿಕೆಯಾಗಿದೆ. ಅಡುಗೆ ಎಣ್ಣೆ ಮತ್ತೆ ದುಬಾರಿಯಾಗಿದ್ದು, ಸನ್‌ಫ್ಲವರ್ ಕೆ.ಜಿ ₹145– ₹150ಕ್ಕೆ, ಫಾಮಾಯಿಲ್ ಕೆ.ಜಿ ₹118ಕ್ಕೆ ಜಿಗಿದಿದೆ. ಎಣ್ಣೆ ಬೆಲೆ ಕಡಿಮೆಯಾಗುವಂತೆ ಕಾಣುತ್ತಿಲ್ಲ.

ತರಕಾರಿ ಬೆಲೆ ಬಹುತೇಕ ಸ್ಥಿರವಾಗಿದ್ದು, ಕೆಲವು ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಬೀನ್ಸ್ ಕೆ.ಜಿ.ಗೆ ₹5, ಫಾರಂ ಬಟಾಣಿ ₹10, ಕ್ಯಾಪ್ಸಿಕಂ ₹10 ಹೆಚ್ಚಳವಾಗಿದ್ದು, ಹಸಿಮೆಣಸಿನಕಾಯಿ ಧಾರಣೆ ಕೆ.ಜಿ.ಗೆ ₹10 ಕಡಿಮೆಯಾಗಿದೆ.

ದಾಳಿಂಬೆ ಹಣ್ಣಿನ ಬೆಲೆ ಕೈಗೆಟುಕದಾಗಿದ್ದು, ಸೇಬಿಗಿಂತ ದುಬಾರಿಯಾಗಿದೆ. ಮೂಸಂಬಿ, ಕಿತ್ತಳೆ ಹಣ್ಣಿನ ಧಾರಣೆ ಸ್ವಲ್ಪ ಏರಿಕೆ ಕಂಡಿದೆ. ದ್ರಾಕ್ಷಿ ಮಾರುಕಟ್ಟೆಗೆ ಬರುತ್ತಿದ್ದು, ಬೆಲೆ ಇಳಿಕೆಯಾಗಿದೆ.

ಕೋಳಿ ಮತ್ತೂ ದುಬಾರಿ: ಕಳೆದ ವಾರದಿಂದ ಕೋಳಿ ಬೆಲೆ ಏರಿಕೆ ಮುಂದುವರಿದಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ.ಗೆ ₹20 ದುಬಾರಿಯಾಗಿದೆ. ಈಗ ಬ್ರಾಯ್ಲರ್ ಕೋಳಿ ಕೆ.ಜಿ ₹150, ರೆಡಿ ಚಿಕನ್ ಕೆ.ಜಿ ₹220ಕ್ಕೆ ಹಾಗೂ ಮೊಟ್ಟೆಕೋಳಿ ಕೆ.ಜಿ ₹110ಕ್ಕೆ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ.

ಮೀನಿನ ಬೆಲೆಯೂ ಏರಿಕೆ

ಮೀನಿನ ಬೆಲೆಯೂ ಏರಿಕೆಯತ್ತ ಹೆಜ್ಜೆ ಹಾಕಿದೆ. ಮಾರುಕಟ್ಟೆಗೆ ಮೀನು ಬರುವುದು ಕಡಿಮೆಯಾಗಿದ್ದು, ಬೆಲೆ ದುಬಾರಿಯಾಗಿದೆ. ಬೊಳಿಂಜರ್ ಮೀನು ಮಾರುಕಟ್ಟೆಗೆ ಬಂದಿಲ್ಲ.

ಬಂಗುಡೆ ಕೆ.ಜಿ.ಗೆ ₹20 ಏರಿಕೆಯಾಗಿದ್ದು, ₹300ಕ್ಕೆ ತಲುಪಿದೆ. ಬೂತಾಯಿ ಕೆ.ಜಿ 220, ಅಂಜಲ್ ₹830, ಬಿಳಿಮಾಂಜಿ ₹840, ಸೀಗಡಿ ಕೆ.ಜಿ ₹540ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT