ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡದಲ್ಲಿ ಬಸ್ ಭೀಕರ ಅಪಘಾತ: ಆರು ಮಂದಿ ಸಾವು

Last Updated 19 ಮಾರ್ಚ್ 2022, 18:26 IST
ಅಕ್ಷರ ಗಾತ್ರ

ಪಾವಗಡ (ತುಮಕೂರು):ತಾಲ್ಲೂಕಿನ ಪಳವಳ್ಳಿ ಕಟ್ಟೆ ಬಳಿ ಶನಿವಾರ ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಉರುಳಿ ಬಿದ್ದು ಮೂವರು ವಿದ್ಯಾರ್ಥಿಗಳು ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ.

ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತ ವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ. ಕೆರೆ ಏರಿಯ ಮೇಲಿನ ರಸ್ತೆಯ ತಿರುವಿನಲ್ಲಿ ಏಕಾಏಕಿ ಬ್ರೇಕ್‌ ಹಾಕಿದಾಗ ಬಸ್‌ ಪಲ್ಟಿ ಆಯಿತು. ವೇಗ ತಗ್ಗಿಸುವಂತೆ ಮತ್ತು ಮೊಬೈಲ್‌ನಲ್ಲಿ ಮಾತನಾಡದಂತೆ ಪದೇ ಪದೇ ಹೇಳಿದರೂ ಚಾಲಕ ಕೇಳಿಸಿಕೊಳ್ಳಲಿಲ್ಲ. ಅಪಘಾತಕ್ಕೆ ಇದೇ ಕಾರಣ ಎಂದು ಪ್ರಯಾಣಿಕರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪಾವಗಡದಲ್ಲಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾದ ಪೋತಗಾನಹಳ್ಳಿಯ ಅಮೂಲ್ಯ (16) ಮತ್ತು ಆಕೆಯ ತಂಗಿ ಹರ್ಷಿತಾ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ದ್ವಿತೀಯ ಪಿಯು ವಿದ್ಯಾರ್ಥಿ ನೀಲಮ್ಮನಹಳ್ಳಿಯ ದಾದಾವಲಿ (17),ಮಣಪ್ಪುರಂ ಸಂಸ್ಥೆ ಉದ್ಯೋಗಿ ಸೂಲನಾಯಕನಹಳ್ಳಿಯ ಅಜಿತ್ (28),ಕಂಪ್ಯೂಟರ್ ಕೋರ್ಸ್ ಕಲಿಯು ತ್ತಿದ್ದ ವೈ.ಎನ್. ಹೊಸಕೋಟೆಯ ಕಲ್ಯಾಣ್ (18) ಮತ್ತು ಆಂಧ್ರಪ್ರದೇಶದ ಬೆಸ್ತರಹಳ್ಳಿ ಮೆಕಾನಿಕ್‌ ಶಾನವಾಜ್‌ (18) ಅವರು ಮೃತಪಟ್ಟಿದ್ದಾರೆ.

ಬಸ್ ಬಿದ್ದ ರಭಸಕ್ಕೆ ಪ್ರಯಾಣಿಕರೆಲ್ಲ ರಸ್ತೆ ಮತ್ತು ಪಕ್ಕದ ಕಂದಕದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರು.

ಜಿಲ್ಲಾ ಆಸ್ಪತ್ರೆಯ ಮುಂಭಾಗ ಆಸ್ಪತ್ರೆಗೆ ದಾಖಲಾದವರ ಸಂಬಂಧಿಕರು.
ಜಿಲ್ಲಾ ಆಸ್ಪತ್ರೆಯ ಮುಂಭಾಗ ಆಸ್ಪತ್ರೆಗೆ ದಾಖಲಾದವರ ಸಂಬಂಧಿಕರು.

ಬಸ್‌ ಅಡಿ ಸಿಲುಕಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟರೆ, ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಹರ್ಷಿತಾ ರಾತ್ರಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

25ಕ್ಕೂ ಹೆಚ್ಚಿನ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ತುಮಕೂರುಮತ್ತು ಬೆಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದೆ. ಆ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಿಗ್ಗೆ ಬರಬೇಕಿದ್ದ ಎರಡು ಬಸ್‌ಗಳು ಬಾರದ ಕಾರಣ ವೈ.ಎನ್.ಹೊಸಕೋಟೆಯಿಂದ ಪಾವಗಡಕ್ಕೆ ಹೊರಟಿದ್ದ ಈ ಬಸ್‌ನಲ್ಲಿ ನೂರಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಬಸ್‌ ಒಳಗೆ ಕಾಲಿಡಲು ಜಾಗ ಇರಲಿಲ್ಲ. ಹಾಗಾಗಿ, ಅನೇಕರು ಬಸ್‌ ಮೇಲ್ಭಾಗ ಏರಿ ಕುಳಿತಿದ್ದರು. ಪಾವಗಡಕ್ಕೆ ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿಗಳು ಮತ್ತು ಕೆಲಸಗಾರರೇಈ ಬಸ್‌ನಲ್ಲಿ ಹೆಚ್ಚಿನಸಂಖ್ಯೆಯಲ್ಲಿದ್ದರು. ಬಸ್‌ ಪಲ್ಟಿಯಾಗುವ ವೇಳೆ ಮೇಲ್ಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ಗಾಬರಿಯಿಂದ ಕೆಳಗೆ ನೆಗೆದರು. ಬಸ್‌ ಅವರ ಮೇಲೆಯೇ ಉರುಳಿ ಬಿದ್ದ ಕಾರಣ ಸಾವಿಗೀಡಾದರು. ಇನ್ನೂ ಕೆಲವರು ರಸ್ತೆಯ ಪಕ್ಕದ ಕಂದಕದ ಮುಳ್ಳುಕಂಟೆಗಳಲ್ಲಿ ಸಿಲುಕಿದ್ದರು ಎಂದು ಪ್ರತ್ಯಕ್ಷ್ಯದರ್ಶಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT