ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರು: ತಾಯಿ, ಮಗು ಆಸ್ಪತ್ರೆಗೆ ಪ್ರಸ್ತಾವ

ತಿಪಟೂರು ಆಸ್ಪತ್ರೆ ಮೇಲ್ದರ್ಜೆಗೆ ₹ 3 ಕೋಟಿ ನಿಗದಿ
Last Updated 29 ಮಾರ್ಚ್ 2023, 6:00 IST
ಅಕ್ಷರ ಗಾತ್ರ

ತಿಪಟೂರು: ತಾಲ್ಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯನ್ನು ಜಿಲ್ಲಾ ಹಂತದ ಆಸ್ಪತ್ರೆಯ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತಿದೆ. ಜೊತೆಗೆ, ತಾಯಿ ಮತ್ತು ಮಗುವಿನ ಪ್ರತ್ಯೇಕ ವಿಭಾಗ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ನೂತನ ಐಸಿಯು ಘಟಕ, ನೂತನ ಲ್ಯಾಬ್ ಹಾಗೂ ₹ 3 ಕೋಟಿ ವೆಚ್ಚದಡಿ ಆಸ್ಪತ್ರೆಯ ಮೇಲ್ದರ್ಜೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ಆಸ್ಪತ್ರೆಯಲ್ಲಿ ಸರ್ಕಾರ ನೀಡಿಲ್ಲದ ಅನೇಕ ಉಪಕರಣಗಳನ್ನು ತಂದು ಆಸ್ಪತ್ರೆಯಲ್ಲಿ ಆಳವಡಿಸಿದ್ದೇವೆ. ಇನ್ನೂ ಕೇವಲ ಎರಡು ಉಪಕರಣಗಳು ಬಂದರೆ ಯಾವುದೇ ರೋಗಿಯನ್ನು ಹೊರಗೆ ಕಳುಹಿಸುವ ಅಗತ್ಯವಿರುವುದಿಲ್ಲ. ಬಡವರು ಸಂಪೂರ್ಣ ಅನುಕೂಲ ಪಡೆದುಕೊಳ್ಳಬಹುದಾಗಿದೆ ಎಂದರು.

ನೂತನವಾಗಿ ಪ್ರಾರಂಭವಾಗಿರುವ ಲ್ಯಾಬ್‍ ಅತ್ಯಾಧುನಿಕ ಗುಣಮಟ್ಟ ಹೊಂದಿದೆ. ವೈದ್ಯರಿಗೂ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗಲಿದೆ. ಪ್ರಸ್ತುತ ಸಾವಿರಾರು ಮಂದಿ ಆಸ್ಪತ್ರೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಎಲ್ಲಾ ವಿಭಾಗದಲ್ಲಿನ ವೈದ್ಯರು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ತಿಪಟೂರಿನ ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಚಿಕಿತ್ಸೆ ನೀಡುತ್ತಿದ್ದೇವೆ. ತಾಲ್ಲೂಕು ಮಟ್ಟದ ಆಸ್ಪತ್ರೆಯಲ್ಲಿ ಲಿಫ್ಟ್ ನೋಡುವುದರೆ ಅದು ತಿಪಟೂರಿನಲ್ಲಿ ಮಾತ್ರ. ಆಸ್ಪತ್ರೆಗೆ ಬರುವ ಅನುದಾನದ ಜೊತೆಗೆ ಶಾಸಕರ ನಿಧಿಯ ಹಣ ಬಳಸಿಕೊಂಡು ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಆಸ್ಪತ್ರೆ ಆವರಣದಲ್ಲಿಯೇ ಪ್ರತ್ಯೇಕವಾಗಿ ತಾಯಿ ಮತ್ತು ಮಗುವಿನ ಆಸ್ಪತ್ರೆ ಸ್ಥಾಪನೆ ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರವೇ, ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಎಂದರು.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್, ಡಾ.ರವಿಕುಮಾರ್, ಡಾ.ರಂಗನಾಥ್, ಡಾ.ಸುರೇಶ್, ಡಾ.ರಕ್ಷಿತ್ ಗೌಡ, ಡಾ.ಮಮತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT