ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸದ ಅವಧಿ ಹೆಚ್ಚಳ ವಿರೋಧಿಸಿ ಪ್ರತಿಭಟನೆ

Last Updated 26 ಮೇ 2020, 14:42 IST
ಅಕ್ಷರ ಗಾತ್ರ

ತುಮಕೂರು: ರಾಜ್ಯ ಸರ್ಕಾರ ಕೆಲಸದ ಅವಧಿಯನ್ನು ದಿನಕ್ಕೆ 8ರಿಂದ 10 ಗಂಟೆಗೆ ಹಾಗೂ ವಾರದಲ್ಲಿ 48ರಿಂದ 60 ಗಂಟೆಗಳಿಗೆ ಹೆಚ್ಚಿಸುವ ಆದೇಶ ಹೊರಡಿಸಿರುವುದನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಮಂಗಳವಾರ ಪ್ರತಿಭಟನೆ ನಡೆಸಿತು. ಆದೇಶದ ಪ್ರತಿಯನ್ನು ಸುಟ್ಟು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ‘ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರವಾಗಿ ಸಡಿಲಗೊಳಿಸುವ ಪ್ರಯತ್ನ ಇದಾಗಿದೆ. ಕೆಲಸದ ಅವಧಿ ಹೆಚ್ಚಳ ಮಾಡುವುದು ಅವೈಜ್ಞಾನಿಕ. ಇದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ನಿರ್ಣಯಕ್ಕೆ ವಿರುದ್ಧವಾಗಿದೆ. 10 ಗಂಟೆಗಳ ಕೆಲಸದ ಅವಧಿ ಹೆಚ್ಚಳ ಆದೇಶವನ್ನು ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಹೇಳಿದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ‘ಸರ್ಕಾರಕ್ಕೆ ವಲಸೆ ಕಾರ್ಮಿಕರ ಕುರಿತು ಕಾಳಜಿ ಇಲ್ಲ. ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರ ಬದಲಿಸಿ ದುಡಿಯುವವರಿಗೆ ಅನ್ಯಾಯ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸದೆ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

ಎಐಯುಟಿಯುಸಿ ಸಂಘಟನೆಯ ಮಂಜುಳ ಮಾತನಾಡಿ,ಸಂವೇದನೆ ಇಲ್ಲದಂತೆ ಸರ್ಕಾರಗಳು ವರ್ತಿಸುತ್ತಿವೆ ಎಂದರು. ಕಟ್ಟಡ ಕಾರ್ಮಿಕರ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಉಮೇಶ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಂಗಧಾಮಯ್ಯ, ಗೌರವಾಧ್ಯಕ್ಷ ಗೋವಿಂದರಾಜು, ಶಂಕರಪ್ಪ, ಖಲೀಲ್, ಎಐಟಿಯುಸಿ ಕಾಂತರಾಜು, ನಾಗಣ್ಣ ಉಪಸ್ಥಿತರಿದ್ದರು.

‘ಕನಿಷ್ಠ ವೇತನ, ತುಟ್ಟಿ ಭತ್ಯೆ: ವಿನಾಯಿತಿ ಬೇಡ’
ರಾಜ್ಯ ಸರ್ಕಾರವು ಕನಿಷ್ಠ ವೇತನ ಪಾವತಿ ಹಾಗೂ ಏಪ್ರಿಲ್‌ 1ರಿಂದ ಹೆಚ್ಚಾಗಿರುವ ತುಟ್ಟಿ ಭತ್ಯೆಯನ್ನು ಕಾರ್ಮಿಕರಿಗೆ ಪಾವತಿ ಮಾಡುವುದರಿಂದ ಮಾಲೀಕರಿಗೆ ವಿನಾಯಿತಿ ನೀಡುವ ಕುರಿತು ಚರ್ಚೆ ಮಾಡಲು ತ್ರಿಪಕ್ಷೀಯ ಸಭೆಯೊಂದನ್ನು ಕರೆದಿದೆ.

ರಾಜ್ಯದಲ್ಲಿ ಬಿಎಂಎಸ್‍ ಸಂಘಟನೆ ಹೊರತುಪಡಿಸಿ ಉಳಿದ ಎಲ್ಲಾ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಈ ವಿಚಾರದಲ್ಲಿ ವಿನಾಯಿತಿ ನೀಡುವ ನಿರ್ಧಾರ ಕೈಗೊಂಡರೆ ಕಾರ್ಮಿಕರಿಗೆ ತೀವ್ರ ಸಂಕಷ್ಟ ಎದುರಾಗಲಿದೆ. ಸರ್ಕಾರ ದುಡಿಯುವವರ ಪರ ನಿಲ್ಲದೆ ಇರುವುದು ಖಂಡನಾರ್ಹ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT