ಕುಣಿಗಲ್: ತಾಲ್ಲೂಕಿನ ಸಂತೆಮಾವತ್ತೂರು ಗ್ರಾಮಪಂಚಾಯಿತಿಯಿಂದ ಸಂತೆಮಾವತ್ತೂರು ಗೊಲ್ಲರಹಟ್ಟಿಯ ಬಳಿ ಸರ್ವೆ ನಂಬರ್ 54ರ ಸರ್ಕಾರಿ ಗೋಮಾಳ ಜಾಗದಲ್ಲಿ ಗ್ರಾಮಸ್ಥರ ವಿರೋಧದ ನಡುವೆ ಘನ ಮತ್ತು ದ್ರವ ತ್ಯಾಜ್ಯ ಘಟಕ ಸ್ಥಾಪಿಸಲು ಯತ್ನಿಸುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ರಾಜ್ಯ ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿ ಅಧ್ಯಕ್ಷ ಜಿ.ಕೆ ನಾಗಣ್ಣ ಮಾತನಾಡಿ, ಸಂತೆಮಾವತ್ತೂರು ಗೊಲ್ಲರಹಟ್ಟಿಯ ಜನರು ಅಲೆಮಾರಿ ಕಾಡುಗೊಲ್ಲ ಬುಡಕಟ್ಟು ಜನರಾಗಿದ್ದು, ಇಲ್ಲಿ ಪ್ರತ್ಯೇಕ ಹಟ್ಟಿ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರು ಕುರಿ ಮತ್ತು ದನ ಕಾಯುವುದನ್ನೇ ಮುಖ್ಯ ಕಸುಬಾಗಿಸಿಕೊಂಡು ಪರಂಪರಾಗತವಾಗಿ ಈ ವೃತ್ತಿಯನ್ನು ಮಾಡುತ್ತಾ ಬಂದಿದ್ದಾರೆ. ಇವರು ಕುರಿ ಮತ್ತು ದನ ಮೇಯಿಸಲು ಸರ್ಕಾರಿ ಗೋಮಾಳ ಮತ್ತು ಹುಲ್ಲುಗಾವಲುಗಳೇ ಆಧಾರ. ಇಂತಹ ಹುಲ್ಲುಗಾವಲು ಪ್ರದೇಶವನ್ನು ಸರ್ಕಾರ ಬೇರೆ ಬೇರೆ ಉದ್ದೇಶಗಳಿಗಾಗಿ ಹಂಚಿಕೆ ಮಾಡಿದರೆ ಕಾಡುಗೊಲ್ಲರಂತಹ ಬುಡಕಟ್ಟು ಸಮುದಾಯಗಳು ಶಾಶ್ವತವಾಗಿ ತಮ್ಮ ನೆಲೆ ಕಳೆದುಕೊಳ್ಳುತ್ತವೆ
ಎಂದರು.
ಸಂತೆಮಾವತ್ತೂರು ಗೊಲ್ಲರ
ಹಟ್ಟಿಯ ಜನರು ಪುರಾತನ ಕಾಲದಿಂ
ದಲೂ ಸರ್ವೆ ನಂಬರ್ 54ರ ಸರ್ಕಾರಿ ಗೊಮಾಳ ಜಾಗದಲ್ಲಿ ತಮ್ಮ ಬುಡಕಟ್ಟಿನ ಕುಲದೇವರಾದ ಜುಂಜಪ್ಪ ಮತ್ತು ಎತ್ತಪ್ಪ ದೇವರುಗಳ ಗುಡ್ಡೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ, ಹಿರಿಯರ ಹಬ್ಬ ಆಚರಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಇಂತಹ ಧಾರ್ಮಿಕ ಭಾವನಾತ್ಮಕ ಸಂಬಂಧ ಬೆಸೆದುಕೊಂಡಿರುವ ಸ್ಥಳದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಹೊರಟಿರುವುದು ಸರಿಯಲ್ಲ.ಆದ್ದರಿಂದ ಸ್ಥಳೀಯ ಗ್ರಾಮ
ಪಂಚಾಯತಿ ಯಾವುದೇ ಸಾರ್ವಜನಿ
ಕರಿಗೆ ತೊಂದರೆ ಆಗದಂತಹ ಜಾಗ
ವನ್ನು ಗುರುತಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಬೆಸ್ತ ಸಮುದಾಯದ ಮುಖಂಡ ಧನಂಜಯ್ಯ ವಿ.ಎಸ್, ರಂಗಸ್ವಾಮಿ, ಭೈರಯ್ಯ, ದೊಡ್ಡಯ್ಯ ಶಿವಲಿಂಗಯ್ಯ, ವಾಸು, ಶೋಭಾ, ಪಾರ್ವತಮ್ಮ ವೆಂಕಟೇಶ್, ಶ್ರೀನಿವಾಸು ಇದ್ದರು.
ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.