ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಪಿಎಫ್ ಹಣಕ್ಕೆ ಆಗ್ರಹಿಸಿ ಪ್ರತಿಭಟನೆ; ಸಿಐಟಿಯು ನೇತೃತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಸತ್ಯಮಂಗಲ ಕೈಗಾರಿಕಾ ಪ್ರದೇಶದ ಸ್ಕಾಟ್ ಗಾರ್ಮೆಂಟ್ಸ್ ಕಾರ್ಮಿಕರಿಗೆ ಭವಿಷ್ಯ ನಿಧಿ ಹಣ ಕೊಡಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

8ರಿಂದ 9 ವರ್ಷಗಳ ಕಾಲ ಸಾವಿರಾರು ಕಾರ್ಮಿಕರಿಂದ ದುಡಿಸಿಕೊಳ್ಳಲಾಗಿದೆ. ಇದ್ದಕಿದ್ದಂತೆ ಕಂಪನಿ ದಿವಾಳಿಯಾಗಿದೆ ಎಂದು ಕಾರ್ಮಿಕರಿಗೆ ವೇತನ ನೀಡಿಲ್ಲ. ಕಾರ್ಮಿಕರ ಸಂಬಳದಿಂದ ಕಡಿತ ಮಾಡಿದ ಭವಿಷ್ಯ ನಿಧಿ ಹಣವನ್ನು ಸಹ ಇಲಾಖೆಗೆ ಜಮಾ ಮಾಡದೆ ಆಡಳಿತ ಮಂಡಳಿಯವರು ವಂಚಿಸಿದ್ದಾರೆ ಎಂದು ಆರೋಪಿಸಿದರು.

1 ವರ್ಷ 6 ತಿಂಗಳ ಅವಧಿಯ ಭವಿಷ್ಯ ನಿಧಿ ಹಣವನ್ನು ಜಮೆ ಮಾಡಿಲ್ಲ. ಭವಿಷ್ಯ ನಿಧಿ ಆಯುಕ್ತರ ಕಚೇರಿಗೆ ಅಲೆದು ಸಾಕಾಗಿದೆ. ಪಿಎಫ್‌ ಖಾತೆಯಲ್ಲಿ ಇರುವ ಹಣದಲ್ಲಿ ಶೇ 50ರಷ್ಟು ಪಡೆದುಕೊಳ್ಳಲು ಸಾಧ್ಯ ಎಂದು ಆಯುಕ್ತರು ಹೇಳುತ್ತಿದ್ದಾರೆ. ಒಂದು ಸುತ್ತಿನ ಹಣ ಮಾತ್ರ ನೀಡಿದ್ದಾರೆ. ಉಳಿದ ಹಣ ನೀಡುತ್ತಿಲ್ಲ ಎಂದು ದೂರಿದರು.

ಕೋವಿಡ್ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡ ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಭವಿಷ್ಯ ನಿಧಿ ಆಯುಕ್ತರನ್ನು ಕರೆಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

ಪಿಂಚಣಿ ಪಾಲು ಹೊರತುಪಡಿಸಿ ಉಳಿದ ಹಣವನ್ನು ಒಂದು ವಾರದಲ್ಲಿ ನೀಡುವುದಾಗಿ ಕಾರ್ಮಿಕ ಭವಿಷ್ಯ ನಿಧಿ ಸಂಘಟನೆ ಲೆಕ್ಕಾಧಿಕಾರಿ ಮುಕುಂದಪ್ಪ, ಭವಿಷ್ಯ ನಿಧಿ ನಿರೀಕ್ಷಕ ಹರಿ ಭರವಸೆ ನೀಡಿದರು. ಉಪ ವಿಭಾಗಾಧಿಕಾರಿ ಅಜಯ್ ಮನವಿ ಸ್ವೀಕರಿಸಿದರು.

ಕಾರ್ಮಿಕರ ಹೋರಾಟ ಸಮಿತಿ ಸಂಚಾಲಕರಾದ ಕಾಂತಮ್ಮ, ಕಾನೂನು ಸಲಹೆಗಾರ ಸೈಯದ್ ಮುಜೀಬ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಷಣ್ಮಖಪ್ಪ, ಗಾರ್ಮೆಂಟ್ಸ್ ಕಾರ್ಮಿಕರ ಹೋರಾಟ ಸಮಿತಿಯ ಮಂಜುಳ, ನಾಗು, ಉಮಾ, ಭಾಗ್ಯ, ಕುಮಾರಿ ಇತರರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು