ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ | ಅಸಮರ್ಪಕ ವಿದ್ಯುತ್ ಸರಬರಾಜು: ಪ್ರತಿಭಟನೆ

Published 25 ಫೆಬ್ರುವರಿ 2024, 14:06 IST
Last Updated 25 ಫೆಬ್ರುವರಿ 2024, 14:06 IST
ಅಕ್ಷರ ಗಾತ್ರ

ಗುಬ್ಬಿ: ಜನ, ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದ ಬೆಸ್ಕಾಂ ವಿರುದ್ಧ ಎನ್.ಮತ್ತಿಘಟ್ಟ, ಬೆಣಚಿಗೆರೆ, ಬಾಗೂರು ಹಾಗೂ ನಿಟ್ಟೂರಿನ ಸುತ್ತಮುತ್ತಲಿನ ರೈತರು ಭಾನುವಾರ ನಿಟ್ಟೂರಿನ ಎಂಎಸ್‌ಎಸ್ ಮುಂಭಾಗ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಬೇಸಿಗೆಯಲ್ಲಿ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪುರೈಸಬೇಕಾಗಿರುವ ಇಲಾಖೆ ಅಧಿಕಾರಿಗಳು ವ್ಯವಸ್ಥಿತವಾಗಿ ಕ್ರಮಕೈಗೊಳ್ಳದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಾ ರೈತರ ಜತೆ ಚೆಲ್ಲಾಟವಾಡುತ್ತಿದ್ದಾರೆ. ಬರಗಾಲ ಪೀಡಿತವಾಗಿದ್ದರೂ ಸಮರ್ಪಕವಾಗಿ ವಿದ್ಯುತ್ತನ್ನು ನೀಡದಿದ್ದರೆ ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದ ರೈತರು ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಪತ್ರೆ ದಿನೇಶ್ ಮಾತನಾಡಿ, ‘ವಿದ್ಯುತ್ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಯಾವಾಗ ವಿದ್ಯುತ್ ನೀಡುತ್ತಾರೋ, ತೆಗೆಯುತ್ತಾರೋ ಒಂದು ತಿಳಿಯದಾಗಿದೆ. ವಿದ್ಯುತ್ ತಂತಿ ತುಂಡಾಗಿದೆ, ಹೆಚ್ಚಿನ ಹೊರೆಯಾಗಿದೆ ಎಂಬ ಕಾರಣ ನೀಡಿ ವಿದ್ಯುತ್‌ ಕಡಿತಗೊಳಿಸುತ್ತಾರೆ. ಇದರ ಬಗ್ಗೆ ಯಾವ ಅಧಿಕಾರಿಗಳೂ ಸಮರ್ಪಕವಾದ ಉತ್ತರ ನೀಡದೆ ಇರುವುದು ಖಂಡನೀಯ’ ಎಂದರು

‘ಇದೇ ಸ್ಥಿತಿ ಮುಂದುವರೆದಲ್ಲಿ ತಾಲ್ಲೂಕಿನಲ್ಲಿ ತೆಂಗು ಮತ್ತು ಅಡಿಕೆ ಬೆಳೆಯನ್ನೇ ನಂಬಿಕೊಂಡಿರುವ ರೈತರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ಅಧಿಕಾರಿಗಳು ರೈತರ ಬಗ್ಗೆ ಕನಿಷ್ಠ ಸೌಜನ್ಯ ತೋರಿಸಿ ಅಗತ್ಯವಿರುವಷ್ಟು ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸುತ್ತಮುತ್ತಲಿನ ರೈತರು ಒಗ್ಗೂಡಿ ಎಂಎಸ್ಎಸ್ ಸ್ಟೇಷನ್‌ಗೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ದಿಗ್ಬಂಧನ ಹಾಕಲಾಗುವುದು’ ಎಂದು ಎಚ್ಚರಿಸಿದರು.

ರೈತ ಗಂಗಾಧರ್, ನರಸಿಂಹಮೂರ್ತಿ, ಜಯಣ್ಣ, ಚನ್ನಬಸವಯ್ಯ, ರಾಜಕುಮಾರ್, ಮಲ್ಲಿಕಾರ್ಜುನ, ಸಂಗಮೇಶ್ ಹಾಗೂ ಸುತ್ತಮುತ್ತಲಿನ ರೈತರು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT