ತುಮಕೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ಜಿಲ್ಲಾ ಬೀಡಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಬೀಡಿ ಉದ್ಯಮದಲ್ಲಿ ತೊಡಗಿಸಿಕೊಂಡು ಕೆಲಸ ಕಳೆದುಕೊಂಡವರಿಗೆ ಆರ್ಥಿಕ ನೆರವು ನೀಡಬೇಕು. ಬೀಡಿ ಕಾರ್ಮಿಕರಿಗೆ ಏಕ ರೂಪದಲ್ಲಿ ರಾಷ್ಟ್ರೀಯ ಕನಿಷ್ಠ ವೇತನ ನೀಡಬೇಕು, ಮಾರುವ– ಕೊಳ್ಳುವ ಉಪಗುತ್ತಿಗೆ ವ್ಯವಸ್ಥೆ ರದ್ದುಪಡಿಸಬೇಕು. ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಬೀಡಿ ಉದ್ಯಮದಲ್ಲಿ ಸೆಸ್ ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರಿಗೆ ಗುರುತಿನ ಚೀಟಿ, ಆರೋಗ್ಯ ಸೌಲಭ್ಯ, ವಿಶೇಷ ಪ್ಯಾಕೇಜ್, ಕನಿಷ್ಠ ವೇತನ ನೀಡಬೇಕು. ಲಾಗ್‍ಬುಕ್, ಬೋನಸ್, ಪಿಎಫ್ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕನಿಷ್ಠ ಪಿಂಚಣಿ ಮಾಸಿಕ ₹3 ಸಾವಿರ ತಕ್ಷಣವೇ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ‘ಜಿಲ್ಲೆಯಲ್ಲಿ ಕೃಷಿ ಕೂಲಿಕಾರರ ನಂತರ ಅತಿ ಹೆಚ್ಚು ಬೀಡಿ ಕಾರ್ಮಿಕರಿದ್ದಾರೆ. ಸರ್ಕಾರ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ದಶಕಗಳಿಂದ ಇದೇ ವೃತ್ತಿ ನಂಬಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದರು.
ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು, ಜಿಲ್ಲಾ ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷೆ ಶಹತಾಜ್, ಉಪಾಧ್ಯಕ್ಷ ಅಬ್ದುಲ್ ಮುನಾಪ್, ಸಹ ಕಾರ್ಯದರ್ಶಿ ಶಾಹಿಸ್ತ ಪರ್ವಿನ್ ಭಾಗವಹಿಸಿದ್ದರು.