ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಸಹಾಯಧನಕ್ಕೆ ಆಗ್ರಹಿಸಿ ಪ್ರತಿಭಟನೆ

Last Updated 1 ಡಿಸೆಂಬರ್ 2021, 7:19 IST
ಅಕ್ಷರ ಗಾತ್ರ

ತುಮಕೂರು: ಸಕಾಲದಲ್ಲಿ ಸಹಾಯಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಗಿರೀಶ್, ‘ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸಾಕಷ್ಟುಅನುದಾನವಿದ್ದರೂ ಸಹಾಯ ಧನವನ್ನು ಸಕಾಲದಲ್ಲಿ ನೀಡಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಕೋವಿಡ್ ನಂತರ ಪ್ರಾರಂಭವಾಗಿರುವ ಶಾಲಾ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಂಡಳಿಯು ಈವರೆಗೆ ಸಹಾಯ ಧನ ನೀಡಿಲ್ಲ. ಇದರಿಂದಾಗಿ ರಾಜ್ಯದಲ್ಲಿ 30 ಲಕ್ಷ ಸದಸ್ಯತ್ವ ಪಡೆದಿರುವ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ’ ಎಂದು ಆರೋಪಿಸಿದರು.

ಮಂಡಳಿಯಿಂದ ನೀಡುವ ಎಲ್ಲ ಯೋಜನೆಗಳು, ಸಹಾಯ ಧನ ಸಕಾಲದಲ್ಲಿ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಸಾವಿರಾರು ಕೋಟಿ ಅನುದಾನವಿದ್ದರೂ ಬಳಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುವ ಸಹಾಯ ಧನದ ಸೌಲಭ್ಯದ ಮೇಲ್ವಿಚಾರಣೆಯನ್ನು ಕಾರ್ಮಿಕ ಇಲಾಖೆ ಬದಲಿಗೆ ಶಿಕ್ಷಣ ಇಲಾಖೆಗೆ ವಹಿಸಲು ಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ಶಿಕ್ಷಣ ಇಲಾಖೆಗೆ ವಹಿಸಬಾರದು. ಇಂತಹ ಅವೈಜ್ಞಾನಿಕ ನಿರ್ಧಾರದಿಂದ ನೈಜ ಕಟ್ಟಡ ಕಾರ್ಮಿಕರ ಮಕ್ಕಳು ಅವಕಾಶ ವಂಚಿತರಾಗಲಿದ್ದಾರೆ ಎಂದರು.

ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನದ ಪರಿಶೀಲನೆ, ಅನುಮತಿ ನೀಡುವ ಅಧಿಕಾರವನ್ನು ಕಾರ್ಮಿಕ ನಿರೀಕ್ಷರ ಬಳಿಯೇ ಉಳಿಸಬೇಕು. ಹೊಣೆಗಾರಿಕೆಯಿಂದ ತೆಗೆದು ಹಾಕಿದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಿವೃತ್ತಿ ಹೊಂದಿದ ಕಟ್ಟಡ ಕಾರ್ಮಿಕರಿಗೆ ₹2 ಸಾವಿರ ಪಿಂಚಣಿ ನೀಡುವುದಾಗಿ ಘೋಷಣೆ ಮಾಡಿದ್ದರೂ ಈವರೆಗೂ ಜಾರಿಗೆ ತರಲಿಲ್ಲ. ಕಟ್ಟಡ ಕಾರ್ಮಿಕರ ಮಕ್ಕಳ ಮದುವೆಗೆ ನೀಡುತ್ತಿದ್ದ ಅನುದಾನ ಕಡಿತಗೊಳಿಸಿದ್ದು, ಹೆಚ್ಚಳ ಮಾಡಬೇಕು. ಪಿಂಚಣಿಗೆ ಅರ್ಜಿ ಸಲ್ಲಿಸಲು ಜೀವಂತ ಪ್ರಮಾಣ ಪತ್ರ ತರಬೇಕೆಂಬ ಅವೈಜ್ಞಾನಿಕ ನಿಯಮ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಮಿತಿ ಸದಸ್ಯರಾದ ದೇವರಾಜು, ನಾಗರತ್ನಮ್ಮ, ವೆಂಕಟೇಶ್, ಯಶೋದಮ್ಮ, ಕುಮಾರ್, ದೊಡ್ಡತಿಮ್ಮಯ್ಯ, ಮಂಜುನಾಥ್ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT