ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ನಗರ ಅಭಿವೃದ್ಧಿಗೆ ಹಣ ಮೀಸಲು

ಮೆಟ್ರೊ ವಿಸ್ತರಣೆಗೆ ಚಾಲನೆ, ಕಾರ್ಯ ಸಾಧ್ಯತಾ ವರದಿ l ಜಿಲ್ಲೆ ವಿಭಜನೆ, ಸಿಗದ ಸ್ಪಂದನೆ
Published 17 ಫೆಬ್ರುವರಿ 2024, 6:42 IST
Last Updated 17 ಫೆಬ್ರುವರಿ 2024, 6:42 IST
ಅಕ್ಷರ ಗಾತ್ರ

ತುಮಕೂರು: ನಗರದ ಅಭಿವೃದ್ಧಿಗೆ ಅನುದಾನ ಮೀಸಲು, ತುಮಕೂರು ವರೆಗೆ ಮೆಟ್ರೋ ರೈಲು ವಿಸ್ತರಣೆಯಂತಹ ಪ್ರಮುಖ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಅವಕಾಶ ಸಿಕ್ಕಿದೆ.

ಕೊಬ್ಬರಿಗೆ ಪ್ರೋತ್ಸಾಹ ಧನ ಹೆಚ್ಚಳ, ಜಿಲ್ಲೆ ವಿಭಜಿಸಿ ಪ್ರತ್ಯೇಕ ಜಿಲ್ಲೆ ನಿರ್ಮಾಣದಂತಹ ಪ್ರಮುಖ ಬೇಡಿಕೆಗಳಿಗೆ ಸ್ಪಂದನೆ ಇಲ್ಲವಾಗಿದೆ. ತುಮಕೂರು ವಿ.ವಿ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಸೇರಿದಂತೆ ತುರ್ತು ಬೇಡಿಕೆಗಳಿಗೂ ಅನುದಾಗ ಒದಗಿಸಿಲ್ಲ.

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ₹2 ಸಾವಿರ ಕೋಟಿ ಅನುದಾನ ಒದಗಿಸಲಾಗಿದೆ. ತುಮಕೂರು ಮಹಾನಗರ ಪಾಲಿಕೆಯೂ ಸೇರಿದಂತೆ ಯಾವ ಪಾಲಿಕೆಗೆ ಎಷ್ಟು ಅನುದಾನ ನೀಡಲಾಗುತ್ತದೆ ಎಂದು ಸ್ಪಷ್ಟವಾಗಿ ನಮೂದಿಸಿಲ್ಲ.

ನಗರದ ಅಭಿವೃದ್ಧಿಗೆ ₹500 ಕೋಟಿ ವಿಶೇಷ ಅನುದಾನ ನೀಡುವಂತೆ ಸಚಿವ ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಒತ್ತಡ ಹಾಕಿದ್ದರು. ಅನುದಾನ ಯಾವ ರೀತಿ ಹಂಚಿಕೆಯಾಗಲಿದೆ ಎಂಬುದರ ಮೇಲೆ ನಗರದ ಅಭಿವೃದ್ಧಿಗೆ ಹಣ ಸಿಗಲಿದೆ. ಕನಿಷ್ಠ ₹200 ಕೋಟಿ ಅನುದಾನ ಸಿಗಬಹುದು ಎಂದು ಹೇಳಲಾಗುತ್ತಿದೆ.

ಬೆಂಗಳೂರಿಗೆ ಪರ್ಯಾಯವಾಗಿ ಮೂಲಸೌಕರ್ಯಗಳನ್ನು ಒಳಗೊಂಡ ಮತ್ತು ಉದ್ಯೋಗ ಅವಕಾಶಗಳನ್ನು ಸೃಜಿಸುವಂತಹ ಆಕರ್ಷಕ ನಗರಗಳನ್ನು ಅಭಿವೃದ್ಧಿಪಡಿಸುವ ಮೂಲಕ ಬೆಂಗಳೂರು ನಗರದ ಮೇಲಿನ ಒತ್ತಡ ತಗ್ಗಿಸಲು ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಇದರ ವ್ಯಾಪ್ತಿಯಲ್ಲಿ ಸೇರಿಸಿದ್ದು, ಈ ಯೋಜನೆ ಮೂಲಕ ನಗರದ ಅಭಿವೃದ್ಧಿಗೆ ಅನುದಾನ ಒದಗಿಸಲಾಗುತ್ತದೆ.

ಮೆಟ್ರೋ ವಿಸ್ತರಣೆ: ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ರೈಲು ವಿಸ್ತರಣೆ ಬೇಡಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿ, ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಆರಂಭಿಸಲು ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ಪ್ರಕಟಿಸಿದ್ದಾರೆ. ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲೂ ಈ ವಿಚಾರ ಪ್ರಸ್ತಾಪಿಸಿದ್ದು, ಈಗ ಬಜೆಟ್‌ನಲ್ಲಿ ಸೇರಿಸುವ ಮೂಲಕ ಮುಂದಿನ ದಿನಗಳಲ್ಲಿ ತುಮಕೂರು ವರೆಗೂ ಮೆಟ್ರೋ ರೈಲು ಸಂಚರಿಸುವ ಆಶಾಭಾವನೆ ಜಿಲ್ಲೆಯ ಜನರಲ್ಲಿ ಮೂಡುವಂತಾಗಿದೆ.

ಪ್ರಗತಿಯಲ್ಲಿರುವ ಹೇಮಾವತಿ ಯೋಜನೆಯ ವೈ–ನಾಲೆಯಡಿ 5.45 ಕಿ.ಮೀ ಹಾಗೂ ತುಮಕೂರು ಶಾಖಾ ನಾಲೆಯ 166.90 ಕಿ.ಮೀ ಉದ್ದದ ನಾಲೆಯ ಆಧುನೀಕರಣ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಲಾಗಿದೆ.

ನಗರದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದ ಸಂದರ್ಭದಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ‘ಇಂಟಿಗ್ರೇಟೆಡ್ ಟೌನ್‌ಶಿಪ್‌’ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಈಗ ಬಜೆಟ್‌ನಲ್ಲಿ ಸೇರಿಸುವ ಮೂಲಕ ಕೈಗಾರಿಕಾ ಕ್ಷೇತ್ರದ ವಿಸ್ತರಣೆ ಹಾಗೂ ಉದ್ಯೋಗ ಸೃಷ್ಟಿಗೂ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಯುವ ಜನತೆಯ ಕೌಶಲಾಭಿವೃದ್ಧಿಗಾಗಿ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ ಮತ್ತು ಕಿಯೋನಿಕ್ಸ್ ಸಹಯೋಗದೊಂದಿಗೆ ‘ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕೌಶಲ ಮತ್ತು ನಾವೀನ್ಯತಾ ಕೇಂದ್ರ’ ಸ್ಥಾಪಿಸಲು ಉದ್ದೇಶಿಸಲಾಗಿದೆ. ತುಮಕೂರು ಸೇರಿದಂತೆ ನಾಲ್ಕು ನಗರದಲ್ಲಿ ಇಂತಹ ಯೋಜನೆ ರೂಪಿಸಲು ಉದ್ದೇಶಿಸಿದ್ದು, ಇದಕ್ಕಾಗಿ ₹12 ಕೋಟಿ ಒದಗಿಸಲಾಗಿದೆ.

ಮಧುಗಿರಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ, ತುಮಕೂರಿನಲ್ಲಿ ‘ಸೀಜಿಂಗ್ ಯಾರ್ಡ್’ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ತುಮಕೂರಿನಲ್ಲಿ ನಿರ್ಮಾಣವಾಗುತ್ತಿರುವ ವಿಜ್ಞಾನ ಕೇಂದ್ರದ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಭರವಸೆ ನೀಡಲಾಗಿದೆ.

ಶ್ರೀರಂಗ ಪೈಪ್‌ ಲೈನ್ ಯೋಜನೆ; ಗುಬ್ಬಿ ತಾಲ್ಲೂಕು ಮಠದಹಳ್ಳಿ ಕೆರೆ ತುಂಬಿಸುವುದು; ಜಿಲ್ಲಾ ಮಟ್ಟದ ಇನ್‌ಕ್ಯುಬೇಷನ್ ಸೆಂಟರ್ ನಿರ್ಮಾಣ; ತುಮಕೂರು ನಗರ ಹೊರತುಪಡಿಸಿ ಜಿಲ್ಲೆಯ 10 ನಗರಗಳಿಗೆ ಅಮೃತ-2 ಯೋಜನೆಯಿಂದ ಕುಡಿಯುವ ನೀರು ಒದಗಿಸುವ ಯೋಜನೆ; ಮಿನಿ ಜವಳಿ ಪಾರ್ಕ್ ನಿರ್ಮಾಣ; ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಾಣದಂತಹ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ.

ಮೆಟ್ರೋ ರೈಲು
ಮೆಟ್ರೋ ರೈಲು

ಆರೋಗ್ಯ ಪ್ರಯೋಗಾಲಯ ಶಿರಾದಲ್ಲಿ ತಾಲ್ಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಭರವಸೆ ನೀಡಲಾಗಿದೆ. ಶಿರಾ ಸೇರಿದಂತೆ ಮೂರು ಕಡೆಗಳಲ್ಲಿ ಪ್ರಯೋಗಾಲಯ ಸ್ಥಾಪನೆಗೆ ₹11 ಕೋಟಿ ಅನುದಾನ ಒದಗಿಸಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪಿಸುವ ಮೂಲಕ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಉತ್ತಮ ಪ್ರಯೋಗಾಲಯ ಸೇವೆ ಲಭ್ಯವಾಗಲಿದೆ ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಅದರ ಭಾಗವಾಗಿ ಶಿರಾ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT