ತುಮಕೂರು: ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಸರ್ಕಾರ ಗಂಭೀರವಾಗಿ ಪರಿಶೀಲನೆ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಮಧುಗಿರಿ ಮಟ್ಟಣದಲ್ಲಿ ಬುಧವಾರ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್), ರಾಜ್ಯದ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಕ್ಷೀರ ಭಾಗ್ಯ ಯೋಜನೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡುವಂತೆ ಸಚಿವರಾದ ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ಒತ್ತಾಯಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ, ‘ಈಗಾಗಲೇ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಿದ್ದು, ಅಲ್ಲಿಗೆ ಹಣ ಕೊಡಲು ಸಾಧ್ಯವಾಗುತ್ತಿಲ್ಲ. ಇನ್ನೂ ಹೊಸ ಜಿಲ್ಲೆ ಘೋಷಣೆ ಮಾಡಿ ಹಣ ನೀಡುವುದು ಕಷ್ಟಕರವಾಗುತ್ತದೆ. ಮುಂದಿನ ದಿನಗಳಲ್ಲಿ ಬೇಡಿಕೆಯನ್ನು ಪರಿಶೀಲಿಸಿ ಹೊಸ ಜಿಲ್ಲೆ ಘೋಷಣೆ ಬಗ್ಗೆ ನಿರ್ಧರಿಸಲಾಗುವುದು. ಮಧುಗಿರಿ ಜಿಲ್ಲೆ ಮಾಡುವುದಕ್ಕೆ ನಿಮ್ಮ ಜಿಲ್ಲೆಯಲ್ಲೇ ವಿರೋಧವಿದೆ. ತಿಪಟೂರು ಶಾಸಕ ಕೆ.ಷಡಕ್ಷರಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಮಧುಗಿರಿಗೆ ತಾಯಿ, ಮಕ್ಕಳ ಆಸ್ಪತ್ರೆಗೆ ಬೇಡಿಕೆ ಸಲ್ಲಿಸಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಮಂಜೂರು ಮಾಡಿಕೊಡಲಾಗುವುದು. ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಮಾಡಲಾಗುವುದು. ಈಗಾಗಲೇ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಘೋಷಣೆ ಮಾಡಲಾಗಿದ್ದು, ಅದು ಜಾರಿಯಾಗಿಲ್ಲ. ಮುಂದೆ ಅನುಷ್ಠಾನಕ್ಕೆ ತರಲಾಗುವುದು. ನಮ್ಮ ಸರ್ಕಾರ ಬಂದ ನಂತರ ಮಧುಗಿರಿ ಅಭಿವೃದ್ಧಿ ಯೋಜನೆಗಳಿಗೆ ₹155 ಕೋಟಿ ನೀಡಲಾಗಿದೆ ಎಂದರು.
ಮಕ್ಕಳಿಗೆ ಹಾಲು: ಕ್ಷೀರ ಭಾಗ್ಯ ಯೋಜನೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ 64 ಲಕ್ಷ ಮಕ್ಕಳಿಗೆ ಹಾಲು ನೀಡಲಾಗುತ್ತಿದೆ. ಇದರಿಂದ ಕೆಎಂಎಫ್‌ನಲ್ಲಿ ಹೆಚ್ಚುವರಿಯಾಗಿ ಉಳಿಯುವ ಹಾಲಿಗೆ ಮಾರುಕಟ್ಟೆ ಸಿಕ್ಕಂತಾಗಿದ್ದು, ಹಾಲು ಉತ್ಪಾದಕರಿಗೂ ಸಹಕಾರಿಯಾಗಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದ ನಂತರ ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗಿ ಮಾರುಕಟ್ಟೆ ಸಮಸ್ಯೆಯಾಗಿತ್ತು. ಆ ಸಮಯದಲ್ಲಿ ಉಳಿಯುತ್ತಿದ್ದ ಹಾಲನ್ನು ಮಕ್ಕಳಿಗೆ ಕೊಟ್ಟು ಪೌಷ್ಟಿಕತೆ ಹೆಚ್ಚಿಸಲು ನಿರ್ಧರಿಸಲಾಯಿತು. ಇದರಿಂದ ಕೆಎಂಎಫ್, ರೈತರು, ಮಕ್ಕಳಿಗೆ ನೆರವಾಯಿತು ಎಂದು ಹಿಂದೆ ಯೋಜನೆ ಜಾರಿ ಮಾಡಿದ್ದನ್ನು ನೆನಪಿಸಿಕೊಂಡರು.
ಕ್ಷೀರ ಭಾಗ್ಯ ಯೋಜನೆ ಜಾರಿಗೆ ಹತ್ತು ವರ್ಷದ ಹಿಂದೆ ಸಹಕಾರ ನೀಡಿದ ಅಂದಿನ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಅಂದಿನ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಪ್ರೇಮನಾಥ್ ಅವರನ್ನು ಅಭಿನಂದಿಸಲಾಯಿತು. ಕೆಎಂಎಫ್ ಅಧ್ಯಕ್ಷ ಎಲ್.ಬಿ.ಪಿ.ಭೀಮನಾಯ್ಕ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಕೆ.ಷಡಕ್ಷರಿ, ಎಸ್.ಆರ್.ಶ್ರೀನಿವಾಸ್, ಡಾ.ಎಚ್.ಡಿ.ರಂಗನಾಥ್, ಎಚ್.ವಿ.ವೆಂಕಟೇಶ್, ನಂಜೇಗೌಡ, ಆರ್.ರಾಜೇಂದ್ರ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿ.ಪಂ ಸಿಇಒ ಜಿ.ಪ್ರಭು ಇತರರು ಉಪಸ್ಥಿತರಿದ್ದರು. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಸ್ವಾಗತಿಸಿದರು.
ಮಧುಗಿರಿ ಜಿಲ್ಲೆಗೆ ಸಚಿವರ ಬೇಡಿಕೆ ಮಧುಗಿರಿಯನ್ನು ಹೊಸ ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು. ಮಧುಗಿರಿ ಉಪವಿಭಾಗದ ನಾಲ್ಕು ತಾಲ್ಲೂಕುಗಳು ತೀವ್ರ ಬರಕ್ಕೆ ಸಿಲುಕಿವೆ. ಯಾವುದೇ ನೀರಾವರಿ ಯೋಜನೆಗಳು ಇಲ್ಲ. ಕನಿಷ್ಠ ಶೇಂಗಾ ಬೆಳೆಯುವುದು ಕಷ್ಟಕರವಾಗಿದೆ. ಕುಡಿಯುವ ನೀರಿಗೂ ಬರವಿದೆ. ಒಣ ಪ್ರದೇಶದ ವ್ಯಾಪ್ತಿಯಲ್ಲಿ ಜಿಲ್ಲಾ ಕೇಂದ್ರ ಮಾಡಿದರೆ ಈ ಭಾಗದ ತಾಲ್ಲೂಕುಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮನವಿ ಮಾಡಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ವೇಗ ಕುಂಠಿತಗೊಂಡು 9ನೇ ಸ್ಥಾನಕ್ಕೆ ಕುಸಿದಿತ್ತು. ಮುಂದಿನ ದಿನಗಳಲ್ಲಿ ರಾಜ್ಯವನ್ನು ಪ್ರಗತಿಯಲ್ಲಿ ಮೊದಲ ಸ್ಥಾನಕ್ಕೆ ತರಲಾಗುವುದು. ಗ್ಯಾರಂಟಿ ಯೋಜನೆಗಳಿಗೆ ₹36 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದ್ದು ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುವುದು ಎಂದರು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಹ ಜಿಲ್ಲಾ ಕೇಂದ್ರದ ಬೇಡಿಕೆಯನ್ನು ಮುಖ್ಯಮಂತ್ರಿ ಮುಂದಿಟ್ಟರು. ತಾಯಿ ಮಗು ಆಸ್ಪತ್ರೆಗೆ ಜಮೀನು ಒದಗಿಸಿಕೊಟ್ಟಿದ್ದು ಆಸ್ಪತ್ರೆ ಮಂಜೂರು ಮಾಡಿಕೊಡುವಂತೆ ಮನವಿ ಮಾಡಿದರು.
ಷಡಕ್ಷರಿ ವಿರೋಧ ಸಚಿವರಾದ ಜಿ.ಪರಮೇಶ್ವರ ಕೆ.ಎನ್.ರಾಜಣ್ಣ ಹೊಸ ಜಿಲ್ಲೆಗೆ ಬೇಡಿಕೆ ಇಡುತ್ತಿದ್ದಂತೆ ವೇದಿಕೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ಬಂದ ತಿಪಟೂರು ಶಾಸಕ ಕೆ.ಷಡಕ್ಷರಿ ವಿರೋಧ ವ್ಯಕ್ತಪಡಿಸಿದರು. ತಿಪಟೂರು ಜಿಲ್ಲೆ ಮಾಡುವಂತೆ ಬೇಡಿಕೆ ಸಲ್ಲಿಸಿದರು. ಈ ಸಮಯದಲ್ಲಿ ವೇದಿಕೆಯಲ್ಲೇ ಜಿಲ್ಲೆಯ ಸಚಿವರು ಹಾಗೂ ಷಡಕ್ಷರಿ ನಡುವೆ ಬಿರುಸಿನ ಮಾತುಕತೆ ನಡೆಯಿತು. ನಂತರ ಷಡಕ್ಷರಿ ಕುಳಿತಿದ್ದ ಬಳಿಗೆ ಹೋಗಿ ರಾಜಣ್ಣ ಇತರರು ಮನವೊಲಿಸುವ ಪ್ರಯತ್ನ ಮಾಡಿದರು. ಅದಕ್ಕೆ ಷಡಕ್ಷರಿ ಒಪ್ಪಲಿಲ್ಲ. ಸಿದ್ದರಾಮಯ್ಯ ಮಾತನಾಡುತ್ತಿದ್ದ ಸಮಯದಲ್ಲಿ ಅವರ ಸನಿಹಕ್ಕೆ ಬಂದ ರಾಜಣ್ಣ ಜಿಲ್ಲೆ ಘೋಷಣೆಗೆ ಒತ್ತಡ ಹಾಕಿದರು. ಸಚಿವರು ಸಾಕಷ್ಟು ಪ್ರಯತ್ನ ಶ್ರಮ ವಹಿಸಿದರೂ ಮುಖ್ಯಮಂತ್ರಿ ಹೊಸ ಜಿಲ್ಲೆ ಘೋಷಣೆ ಮಾಡಲಿಲ್ಲ. ಪರಿಶೀಲನೆಯ ಭರವಸೆ ಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.