ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆರೆಯ ಕೂಗು: ಬಡ್ಡಿಹಳ್ಳಿ ಕೆರೆಗೆ ಮರುಜೀವ

ಕೆರೆ ಅಭಿವೃದ್ಧಿ, ಉಳಿವಿಗೆ ಮುಂದಾದ ಎನ್‌ಜಿಒ, ಒತ್ತುವರಿ ತೆರವಿಗೆ ಪಾಲಿಕೆ ನಿರ್ಲಕ್ಷ್ಯ
Published 2 ಜೂನ್ 2024, 6:06 IST
Last Updated 2 ಜೂನ್ 2024, 6:06 IST
ಅಕ್ಷರ ಗಾತ್ರ

ತುಮಕೂರು: ನಗರದ ಬಡ್ಡಿಹಳ್ಳಿ ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದು, ಕಾಮಗಾರಿ ಮುಂದುವರಿದಿದೆ. ಈ ಕೆರೆ ನಗರದ ಇತರೆ ಕೆರೆಗಳಿಗಿಂತ ಸ್ವಲ್ಪ ಉತ್ತಮ ಸ್ಥಿತಿಯಲ್ಲಿದೆ. ಆದರೆ ಕೊಳಚೆ ನೀರಿನ ಕಾಟ ಕಾಡುತ್ತಿದೆ.

ಕೆರೆಯ ಉಳಿವಿಗೆ ‘ಇಎಫ್‌ಐ’ ಎಂಬ ಖಾಸಗಿ ಸಂಸ್ಥೆ ಮುಂದೆ ಬಂದಿದೆ. ಕೆರೆಯನ್ನು ತುಂಬಿಕೊಂಡಿರುವ ತ್ಯಾಜ್ಯ, ಪ್ಲಾಸ್ಟಿಕ್‌, ಅಂತರಗಂಗೆ ಕಳೆ ಹೊರ ತೆಗೆದು ಸ್ವಚ್ಛತೆ ಮಾಡುವ ಕಾರ್ಯ ಆರಂಭವಾಗಿದೆ. ಕಳೆದ ಹಲವು ತಿಂಗಳುಗಳಿಂದ ಈ ಕೆಲಸ ನಡೆಯುತ್ತಿದ್ದು, 2 ಹಿಟಾಚಿ ವಾಹನ ಬಳಸಿ ಕೆರೆಯಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಹೊರಗೆ ಹಾಕಲಾಗುತ್ತಿದೆ.

ಬಡ್ಡಿಹಳ್ಳಿ ಕೆರೆ 44 ಎಕರೆ ವಿಸ್ತೀರ್ಣ ಹೊಂದಿದೆ. ಇದರಲ್ಲಿ 22.12 ಗುಂಟೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಒತ್ತುವರಿ ತೆರವಿಗೆ ಅಧಿಕಾರಿಗಳು ಮುಂದಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲ. ಒಟ್ಟು 6.8 ಎಂಸಿಎಫ್‌ಟಿ ನೀರಿನ ಸಂಗ್ರಹದ ಸಾಮರ್ಥ್ಯ ಇದೆ. ಎಲ್ಲ ಕೆರೆಗಳಂತೆ ಇಲ್ಲೂ ಕಲುಷಿತ ನೀರು ಸೇರಿಕೊಂಡಿದೆ.

ಒಂದು ಕಡೆ ಸ್ವಚ್ಛತೆಯ ಕೆಲಸ ನಡೆಯುತ್ತಿದ್ದರೆ, ಮತ್ತೊಂಡೆ ಕೆರೆಗೆ ತ್ಯಾಜ್ಯ ಸುರಿಯುವುದು, ಪ್ಲಾಸ್ಟಿಕ್‌ ಎಸೆಯುವುದು ನಿಲ್ಲುತ್ತಿಲ್ಲ. ಕಲುಷಿತ ನೀರು ಕೆರೆ ಸೇರುತ್ತಿರುವುದರಿಂದ ಕೆಟ್ಟ ವಾಸನೆ ಬೀರುತ್ತಿದೆ. ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಕಸವನ್ನು ರಾತ್ರೋರಾತ್ರಿ ಏರಿಯ ಬಳಿ ಎಸೆದು ಹೋಗುತ್ತಿದ್ದಾರೆ. ಇಲ್ಲಿ ಕಸದ ರಾಶಿಯೇ ಬಿದ್ದಿದೆ.

‘ಚರಂಡಿಗಳ ಮೂಲಕ ಕೆರೆಗೆ ನೀರು ಹರಿಯುವುದನ್ನು ತಡೆದು, ಮಳೆ ನೀರು ಮಾತ್ರ ಶೇಖರಣೆ ಆಗುವಂತೆ ನೋಡಿಕೊಳ್ಳಬೇಕು. ಕೆರೆಯ ಬಳಿ ವಾಕಿಂಗ್‌ ಪಾಥ್‌ ನಿರ್ಮಿಸಿ, ಸಂಜೆ– ಬೆಳಗ್ಗೆ ಸಾರ್ವಜನಿಕರ ವಾಯು ವಿಹಾರಕ್ಕೆ ಅನುವು ಮಾಡಿಕೊಡಬಹುದು. ಆದರೆ ಅಧಿಕಾರಿಗಳು ಇದಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ’ ಎಂದು ಬಡ್ಡಿಹಳ್ಳಿಯ ರಂಗಸ್ವಾಮಿ ಆರೋಪಿಸಿದರು.

ಕೆರೆಯ ನೀರು ಈ ಹಿಂದೆ ಬಡ್ಡಿಹಳ್ಳಿ, ಗೋಕುಲ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಜನರು ಕುಡಿಯಲು ಮತ್ತು ಇತರೆ ಕೆಲಸಗಳಿಗೆ ಬಳಸುತ್ತಿದ್ದರು. ದಿನಗಳು ಕಳೆದಂತೆ ನಗರದ ಕಲುಷಿತ ನೀರು ಸೇರುತ್ತಿದ್ದು, ಕೆರೆ ಭರ್ತಿಯಾದರೂ ಇದರಿಂದ ಯಾರಿಗೂ ಪ್ರಯೋಜನ ಇಲ್ಲದಂತಾಗಿದೆ. ನಗರದ ಕೆರೆಗಳ ಅಭಿವೃದ್ಧಿಗೆ ಪ್ರಮುಖವಾಗಿ ಅನುದಾನದ ಕೊರತೆ ಎದುರಾಗಿದೆ. ಇದುವರೆಗೆ ಯಾವುದೇ ಸರ್ಕಾರ ಕೆರೆಗಳ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಿಲ್ಲ. ಕೆರೆಯ ಉಳಿವಿಗೂ ಆದ್ಯತೆ ನೀಡಲಿಲ್ಲ. ಇದರಿಂದ ಎಲ್ಲ ಕೆರೆಗಳಲ್ಲಿ ಕಲುಷಿತ ನೀರು ತುಂಬಿಕೊಂಡಿದೆ ಎನ್ನುತ್ತಾರೆ.

‘ಸಂಬಂಧಪಟ್ಟವರು ತಕ್ಷಣ ಎಚ್ಚೆತ್ತುಕೊಂಡು ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರೆ ಈಗ ನೀರಿನ ಸಮಸ್ಯೆಯಾಗುತ್ತಿರಲಿಲ್ಲ. ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ’ ಎಂದು ಗೋಕುಲ ಬಡಾವಣೆಯ ಸದಾನಂದ ಅಭಿಪ್ರಾಯ ವ್ಯಕ್ತಪಡಿಸಿದರು.

ತುಮಕೂರಿನ ಬಡ್ಡಿಹಳ್ಳಿ ಕೆರೆಯ ತ್ಯಾಜ್ಯ ಹೊರ ತೆಗೆದಿರುವುದು
ತುಮಕೂರಿನ ಬಡ್ಡಿಹಳ್ಳಿ ಕೆರೆಯ ತ್ಯಾಜ್ಯ ಹೊರ ತೆಗೆದಿರುವುದು

ಚರಂಡಿ ನೀರು ತಡೆಗೆ ಕ್ರಮ

ಚರಂಡಿ ನೀರು ಕೆರೆ ಸೇರದಂತೆ ಕ್ರಮಕೈಗೊಳ್ಳಲಾಗುತ್ತದೆ. ಕೆರೆಯ ಅಭಿವೃದ್ಧಿಗೆ ಖಾಸಗಿ ಸಂಸ್ಥೆ ಕೈ ಜೋಡಿಸಿದೆ. ಸರ್ಕಾರದ ಯಾವುದೇ ಅನುದಾನ ಬಳಸದೆ ಕೆರೆಯಲ್ಲಿನ ತ್ಯಾಜ್ಯ ಅಂತರಗಂಗೆ ತೆಗೆಸುವ ಕೆಲಸವಾಗುತ್ತಿದೆ. ಸ್ವಚ್ಛತೆ ಬಿಟ್ಟರೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಪಾಲಿಕೆಯಿಂದ ಅನುದಾನ ನೀಡಿದರೆ ಇನ್ನೂ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಬಹುದು. ಬಿ.ಜಿ.ಕೃಷ್ಣಪ್ಪ ಮಾಜಿ ಮೇಯರ್‌ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT