ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ವಿಜ್ಞಾನ ಕಾಲೇಜಿನಲ್ಲಿ ರೋಸ್ಟರ್ ಉಲ್ಲಂಘನೆ

ತುಮಕೂರು ವಿಶ್ವವಿದ್ಯಾಲಯದ ವಿಜ್ಞಾನ ಪದವಿ ಕಾಲೇಜು
Last Updated 6 ಅಕ್ಟೋಬರ್ 2020, 2:50 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಆಡಳಿತ ವ್ಯಾಪ್ತಿಗೆ ಒಳಪಡುವ ವಿಜ್ಞಾನ ಪದವಿ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ದಾಖಲಾತಿ ವೇಳೆ ರೋಸ್ಟರ್ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪರಿಶಿಷ್ಟ ಜಾತಿ ಮತ್ತು ಪಂಡಗಡದ ವಿದ್ಯಾರ್ಥಿಗಳ ದಾಖಲಾತಿಗಾಗಿ ನಿಲ್ಲಿಸಿರುವ ಶೇಕಡಾವಾರು ಪ್ರಮಾಣ (ಕಟ್‌ ಆಫ್‌), ಜನರಲ್‌ ಮೆರಿಟ್ ವಿದ್ಯಾರ್ಥಿಗಳಿಗೆ ನಿಲ್ಲಿಸಿರುವ ಕಟ್‌ಆಫ್‌ಗಿಂತಲೂ ಹೆಚ್ಚಾಗಿದೆ!

ಅಲ್ಲದೆ ಜನರಲ್‌ ಮೆರಿಟ್‌ಗೆ ನಿಲ್ಲಿಸಿರುವ ಅಂಕಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದರೂ ಅವರನ್ನು ಜನರಲ್‌ ಮೆರಿಟ್‌ನಡಿ ಪರಿಗಣಿಸಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ ಕೋಟಾದಡಿ ದಾಖಲಿಸಿಕೊಳ್ಳಲಾಗಿದೆ. ಇದು ರೋಸ್ಟರ್ ನಿಯಮಗಳ ಉಲ್ಲಂಘನೆಯಾಗಿದೆ. ಸೀಟ್ ಬ್ಲಾಕ್ ದಂದೆಗಾಗಿಯೇ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎನ್ನುವ ಆರೋಪ ವ್ಯಕ್ತವಾಗಿದೆ.

ಪಿಸಿಎಂ ಕೋರ್ಸ್‌ಗೆ 192 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಅವಕಾಶವಿದೆ. ಮೊದಲ ಹಂತದಲ್ಲಿಯೇ 511 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಜನರಲ್ ಮೆರಿಟ್‌ ಅನ್ನು ಶೇ 71ಕ್ಕೆ ನಿಲ್ಲಿಸಲಾಗಿದೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಶೇ 73.5, ಪಂಗಡಕ್ಕೆ ಶೇ 79 ಕಟ್‌ ಆಫ್‌ ಪರ್ಸೆಂಟೇಜ್ ನಿಲ್ಲಿಸಲಾಗಿದೆ. ಉಳಿದ ಪ್ರವರ್ಗಗಳಿಗೂ ಜನರಲ್ ಮೆರಿಟ್‌ಗಿಂತ ಹೆಚ್ಚಿನ ಶೇಕಡವಾರು ನಿಗದಿಗೊಳಿಸಲಾಗಿದೆ.

ರೋಸ್ಟರ್ ಉಲ್ಲಂಘನೆಯ ಬಗ್ಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವಿ.ರಮೇಶ್, ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ, ತುಮಕೂರು ವಿಶ್ವವಿದ್ಯಾಲಯ ಕುಲಪತಿ, ರಿಜಿಸ್ಟ್ರಾರ್‌, ರಾಜ್ಯ ಪರಿಶಿಷ್ಟ ಜಾತಿ ಮತ್ತುಪಂಗಡಗಳ ಆಯೋಗ, ಸಮಾಜ ‌ಕಲ್ಯಾಣ ಇಲಾಖೆ ಆಯುಕ್ತರಿಗೂ ದೂರು ಸಲ್ಲಿಸಿದ್ದರು.

‘ಕಾಲೇಜಿನಲ್ಲಿ ನಿಯಮಬಾಹಿರವಾಗಿ ಪ್ರವೇಶ ಪ್ರಕ್ರಿಯೆ ನಡೆಸಲಾಗಿದೆ. ಇದನ್ನು ವಿ.ವಿ ಗಮನಕ್ಕೂ ತರಲಾಗಿದೆ. ಆದರೂ ಸೂಕ್ತ ಕ್ರಮಕೈಗೊಂಡಿಲ್ಲ. ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಪ್ರಾಂಶುಪಾಲರು ಮತ್ತು ಅವರ ತಂಡ ಉದ್ದೇಶ ಪೂರ್ವಕವಾಗಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ದೊರೆಯಬೇಕಾದ ಅವಕಾಶಗಳನ್ನು ತಪ್ಪಿಸಿದೆ’ ಎಂದು ರಮೇಶ್ ಆರೋಪಿಸುತ್ತಾರೆ.

‘ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಕ್ಕು ಕಸಿಯಲಾಗಿದೆ. ಬಡ ವಿದ್ಯಾರ್ಥಿಗಳು ಹೆಚ್ಚು ಹಣ ನೀಡಿ ಖಾಸಗಿ ಕಾಲೇಜುಗಳಿಗೆ ದಾಖಲಾಗುವ ಸನ್ನಿವೇಶವನ್ನು ಸೃಷ್ಟಿಸಲಾಗಿದೆ’ ಎಂದು ದೂರಿದರು.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT