ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಾಮಿನ ಗೋಧಿಗೆ ಹುಳುಬಾಧೆ?

ಆಗಸ್ಟ್ ಕೊನೆಯಲ್ಲಿ ಸಂಗ್ರಹ; ಮೂರು ತಿಂಗಳು ಮಾತ್ರ ಬಾಳಿಕೆ
Last Updated 8 ನವೆಂಬರ್ 2020, 6:01 IST
ಅಕ್ಷರ ಗಾತ್ರ

ತುಮಕೂರು: 1ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಪಾಹಾರ ಯೋಜನೆಯಡಿ ವಿತರಿಸಲು ಜಿಲ್ಲೆಯ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಫ್‌ಸಿಎಸ್‌ಸಿ) ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿರುವ ಗೋಧಿ ಹಾಳಾಗುವ ಆಂತಕ ಎದುರಾಗಿದೆ.

ಉಪಾಹಾರ ಯೋಜನೆ ಅಧಿಕಾರಿಗಳು ಅಗತ್ಯವಿರುವ ಆಹಾರಧಾನ್ಯಗಳ ಪಟ್ಟಿ ಸಂಗ್ರಹಿಸಿ, ‌ಧಾನ್ಯ ಪೂರೈಸುವಂತೆ ಕೆಎಫ್‌ಸಿಎಸ್‌ಸಿಗೆ ಸೂಚಿಸಿದ್ದರು. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿರುವ ಗೋದಾಮುಗಳಿಗೂ ಕೆಎಫ್‌ಸಿಎಸ್‌ಸಿ ಧಾನ್ಯ ಪೂರೈಸಿದೆ.

ಜಿಲ್ಲೆಯ 10 ತಾಲ್ಲೂಕುಗಳ ಕೆಎಫ್‌ಸಿಎಸ್‌ಸಿ ಗೋದಾಮುಗಳಲ್ಲಿ 17,111 ಟನ್ ಅಕ್ಕಿ, 2,967 ಟನ್ ಗೋಧಿ ಮತ್ತು 8,729 ಟನ್ ತೊಗರಿ ಬೇಳೆ ದಾಸ್ತಾನಿದೆ.

ಕೋವಿಡ್‌ ಕಾರಣಕ್ಕೆ ಶಾಲೆಗಳಿಗೆ ರಜೆ ನೀಡಲಾಯಿತು. ಮಧ್ಯಾಹ್ನ ಉಪಾಹಾರ ಸ್ಥಗಿತಗೊಳಿಸಿ ಆಹಾರಧಾನ್ಯಗಳನ್ನು ವಿತರಿಸಲು ನಿರ್ಧರಿಸಲಾಯಿತು. ಈಗಾಗಲೇ ಏಪ್ರಿಲ್‌ ಮತ್ತು ಮೇ ತಿಂಗಳ ಆಹಾರ ಧಾನ್ಯಗಳನ್ನು ಪೋಷಕರನ್ನು ಕರೆಯಿಸಿ ಶಿಕ್ಷಕರು ವಿತರಿಸಿದ್ದಾರೆ. ‌‌ನಂತರ ಆಹಾರಧಾನ್ಯಗಳನ್ನು ವಿತರಿಸಿಲ್ಲ. ಇದರಿಂದ ಗೋದಾಮುಗಳಲ್ಲಿಯೇ ಧಾನ್ಯಗಳು ದಾಸ್ತಾನು ಇದೆ.

‘ಜಿಲ್ಲೆಯಲ್ಲಿ ಆಗಸ್ಟ್ ಅಂತ್ಯದ ವೇಳೆಗೆ ಅಕ್ಕಿ, ಗೋಧಿ ಮತ್ತು ತೊಗರಿ ಬೇಳೆ ಗೋದಾಮುಗಳನ್ನು ಸೇರಿದೆ. ಈ ಆಹಾರ ಪದಾರ್ಥಗಳನ್ನು ಹಾಳಾಗದ ರೀತಿಯಲ್ಲಿ ಮೂರು ತಿಂಗಳ ಕಾಲ ಸಂಗ್ರಹಿಸಿ ಇಡಬಹುದು. ಆದರೆ ಗೋಧಿಗೆ ಕಪ್ಪು ಹುಳುಗಳು ಬೀಳುವ ಸಾಧ್ಯತೆ ಇದೆ. ಈ ಕಪ್ಪು ಹುಳುಗಳು ಪಸರಿಸಿ ಇಡೀ ದಾಸ್ತಾನಿಗೆ ಕಂಟಕ ಆಗಬಹುದು. ಸಣ್ಣ ಪ್ರಮಾಣದಲ್ಲಿ ಈ ಕಪ್ಪು ಹುಳುಗಳು ಬಿದ್ದರೂ ಸಂರಕ್ಷಣೆ ಕಷ್ಟ ಸಾಧ್ಯ’ ಎಂದು ಜಿಲ್ಲೆಯ ಕೆಎಫ್‌ಸಿಎಸ್‌ಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಒಂದು ವೇಳೆ ಕಪ್ಪು ಹುಳು ಬಿದ್ದರೆ ಗೋಧಿಯನ್ನು ಮತ್ತೆ ಸ್ವಚ್ಛಗೊಳಿಸಬೇಕು. ಪಾಲಿಶ್ ಮಾಡಿಸಬೇಕು. ಮತ್ತೂ ಖರ್ಚು ವೆಚ್ಚಗಳು ಆಗುತ್ತವೆ. ಆಗಸ್ಟ್ ಅಂತ್ಯದಲ್ಲಿ ಸಂಗ್ರಹಿಸಿದ ಕಾರಣ ಸದ್ಯ ಯಾವುದೇ ತೊಂದರೆಗಳು ಇಲ್ಲ. ಶಾಲೆಗಳು ಯಾವಾಗ ಆರಂಭವಾಗುತ್ತವೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ಶಾಲೆ ಆರಂಭ ತಡವಾದರೆ ದಾಸ್ತಾನಿರುವ ಆಹಾರ ಧಾನ್ಯಗಳ ಬಳಕೆಗೆ ಸರ್ಕಾರ ಬೇರೆ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ನಷ್ಟವಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಏಪ್ರಿಲ್ ಮತ್ತು ಮೇ ತಿಂಗಳ ಆಹಾರಧಾನ್ಯಗಳನ್ನು ಮಕ್ಕಳ ಪೋಷಕರಿಗೆ ವಿತರಿಸಲಾಗಿದೆ. ಪಡಿತರ ವಿತರಣೆಗೂ ಇದೇ ಅಕ್ಕಿ ಮತ್ತು ಗೋಧಿ ಬಳಸುವರು. ಆದ್ದರಿಂದ ಅಕ್ಕಿ, ಗೋಧಿ ಹುಳ ಆಗುವ ಸಾಧ್ಯತೆ ಇಲ್ಲ. ನಾವು ಬಳಸಿಕೊಳ್ಳಲು ಸಾಧ್ಯವಿಲ್ಲ ಅಂದರೆ ಅದನ್ನು ಪಡಿತರ ಅಂಗಡಿಗಳಿಗೆ ನೀಡಬಹುದು. ಆದರೆ ತೊಗರಿ ಬೇಳೆ ಬಿಸಿಯೂಟಕ್ಕೆ ಮೀಸಲಾಗಿದೆ. ಆದ್ದರಿಂದ ಇದರ ಬಳಕೆ ಬಗ್ಗೆ ಸರ್ಕಾರ ಕ್ರಮವಹಿಸಬೇಕು’ ಎಂದು ಶಿಕ್ಷಣ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT