ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಫಾಯಿ ಕರ್ಮಚಾರಿ ಬೇಡಿಕೆ: ಭರವಸೆಗೆ ಸೀಮಿತ

Last Updated 26 ಆಗಸ್ಟ್ 2021, 9:31 IST
ಅಕ್ಷರ ಗಾತ್ರ

ತುಮಕೂರು: ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಸಫಾಯಿ ಕರ್ಮಚಾರಿಗಳುತಮ್ಮ ಬೇಡಿಕೆ ಈಡೇರಿಸುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಅವರನ್ನು ಒತ್ತಾಯಿಸಿದರು.

ಸಫಾಯಿ ಕರ್ಮಚಾರಿಗಳ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಕುಂದುಕೊರತೆ ಸಭೆಯಲ್ಲಿ ಸಫಾಯಿ ಕರ್ಮಚಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು. ಸೂಕ್ತ ವಸತಿ ಸೌಲಭ್ಯ ಕಲ್ಪಿಸಿ, ಸೇವೆ ಕಾಯಂ ಮಾಡಬೇಕು, ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಮನವಿಗೆ ಸ್ಪಂದಿಸಿದ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್, ‘ಬೇಡಿಕೆ, ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಉನ್ನತಮಟ್ಟದಲ್ಲಿ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಚಿಕ್ಕನಾಯಕನಹಳ್ಳಿ, ಪಾವಗಡ ತಾಲ್ಲೂಕಿನಲ್ಲಿ ಸಫಾಯಿ ಕರ್ಮಚಾರಿಗಳಿಗೆ ಕಾಡು, ಬೆಟ್ಟದ ಬಂಡೆಯ ಮೇಲೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬೆಟ್ಟದ ಮೇಲೆ ಜೀವನ ನಡೆಸುವುದು ಕಷ್ಟ.
ಹಾಗಾಗಿ ನಮಗೆ ನಗರದಲ್ಲಿ ಗುರುತಿಸಿ
ರುವ ಪ್ರದೇಶದಲ್ಲಿ ವಸತಿ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ‘ಪರಿಶೀಲಿಸಿ ಸೂಕ್ತ ಪ್ರದೇಶದಲ್ಲಿ ವಸತಿ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ಕೊರಟಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಚಾಲಕರು, ‘ಹಲವು ವರ್ಷಗಳಿಂದಲೂ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ವೇತನ ಹೆಚ್ಚಳಮಾಡಿ, ನಿವೇಶನ ವ್ಯವಸ್ಥೆ ಮಾಡಬೇಕು’ ಎಂದು ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ‘ಹೊರಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಆಶ್ರಯ ಸಮಿತಿ ಮೂಲಕ ಮನೆ ನೀಡಲು ಅವಕಾಶವಿದೆ. ಸ್ಥಳೀಯ ಅಧಿಕಾರಿಗಳು ಸೌಲಭ್ಯ ದೊರಕಿಸಿಕೊಡಬೇಕು’ ಎಂದು ಸೂಚಿಸಿದರು.

‘2011ರಿಂದ 2017ರವರೆಗೆ ಪೌರ ಕಾರ್ಮಿಕರ ಪಿಎಫ್ ಹಣ ಕಡಿತವಾಗಿದ್ದರೂ ಭವಿಷ್ಯ ನಿಧಿಗೆ ಜಮೆಯಾಗಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಅಧಿಕಾರಿಗಳು ಸಮರ್ಪಕ ಮಾಹಿತಿ ಕೊಡುತ್ತಿಲ್ಲ’ ಎಂದು ಪೌರ ಕಾರ್ಮಿಕರು ಅಧ್ಯಕ್ಷರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಕಡಿತಗೊಳ್ಳುವ ಹಣವನ್ನು ಭವಿಷ್ಯ ನಿಧಿಗೆ ಸಮರ್ಪಕವಾಗಿ ವರ್ಗಾಯಿಸಬೇಕು. ಸಂಬಳ ಜಮೆಯಾದ ಹತ್ತು ದಿನಗಳ ಒಳಗೆ ಹಣ ಕಡಿತವಾಗಿರುವ ಮಾಹಿತಿಯನ್ನು ಮೊಬೈಲ್‍ಗೆ ರವಾನಿಸಬೇಕು’ ಎಂದು ಸೂಚಿಸಿದರು.

ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಹನುಮಂತಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಉಪಸ್ಥಿತರಿದ್ದರು.

ಸಭೆಯ ಬಳಿಕ ವೆಂಕಟೇಶನ್ ಅವರು ನಗರದ ಸಂತೇಪೇಟೆಯ ಅರವಿಂದ ನಗರದ ಪೌರಕಾರ್ಮಿಕರ ನಿವಾಸಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT