ಭಾನುವಾರ, ಆಗಸ್ಟ್ 1, 2021
26 °C
ವಡ್ಡರಹಟ್ಟಿ ಶಿಕ್ಷಕರ ಪರಿಶ್ರಮ: ಅಧಿಕಾರಿ, ಶಿಕ್ಷಣ ಸಚಿವರಿಂದ ಪ್ರಶಂಸೆ

ಕುಗ್ರಾಮದಲ್ಲಿ ಕಂಗೊಳಿಸುತ್ತಿದೆ ಸರ್ಕಾರಿ ಶಾಲೆ

ಗಂಗಾಧರ್ ವಿ.ರೆಡ್ಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಕೊಡಿಗೇನಹಳ್ಳಿ (ಮಧುಗಿರಿ ತಾ): ಮನಸ್ಸು ಮಾಡಿದರೆ ಕಸವನ್ನು ಕೂಡ ರಸ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ವಡ್ಡರಹಟ್ಟಿಯ ಸರ್ಕಾರಿ ಶಾಲೆ ಶಿಕ್ಷಕರು. ಶಾಲಾ ಕೊಠಡಿಗಳಿಗೆ ತಾವೇ ಬಣ್ಣ ಬಳಿದು, ಆವರಣದಲ್ಲಿ ಸುಂದರ ಗಿಡಗಳನ್ನು ಬೆಳೆಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಶಿಕ್ಷಕರ ಈ ಕಾರ್ಯಕ್ಕೆ ಅಧಿಕಾರಿ ಹಾಗೂ ಸಚಿವರಿಂದ ಪ್ರಶಂಸೆ ವ್ಯಕ್ತವಾಗಿದೆ.

ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ವಡ್ಡರಹಟ್ಟಿ ಕುಗ್ರಾಮ. ಇಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇದ್ದು, 1ರಿಂದ 7ನೇ ತರಗತಿಯಲ್ಲಿ 40 ಮಕ್ಕಳು ಕಲಿಯುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 150 ಮನೆಗಳಿದ್ದು, ಭೋವಿ ಸಮುದಾಯದವರು ವಾಸವಿದ್ದಾರೆ. ಈ ಗ್ರಾಮವೆಂದರೆ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ತಾತ್ಸಾರ ಮನೋಭಾವ.

ಈ ಮನೋಭಾವ ದೂರ ಮಾಡಲು ನಿಶ್ಚಯಿಸಿದ ಶಿಕ್ಷಕ ವರ್ಗ ವಿವಿಧ ಪ್ರಯೋಗಗಳನ್ನು ಕೈಗೊಂಡು ಯಶಸ್ವಿಯಾಗಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಶಿಕ್ಷಕರು ಶಾಲೆಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡರು. ಹಳೆಯದಾದ ಶಾಲೆಯನ್ನು ಹೊಸದು ಮಾಡಲು ಯೋಚಿಸಿದ ಮುಖ್ಯಶಿಕ್ಷಕಿ ಎನ್.ಪಿ.ಕೆಂಪರಾಜಮ್ಮ, ಶಿಕ್ಷಕರಾದ ಬಿ.ಪಾಪಣ್ಣ, ಎಸ್.ಎ.ಶ್ರೀನಿವಾಸ್ ಅವರು ಶಾಲಾಭಿವೃದ್ಧಿಯಲ್ಲಿ ಉಳಿದ ಹಣ ಮತ್ತು ಸ್ವಂತ ಹಣದಿಂದ ಬಣ್ಣ ಖರೀದಿಸಿದರು. ಬಣ್ಣ ಬಳಿಯುವವರು ದುಬಾರಿ ಹಣ ಕೇಳಿದ್ದರಿಂದ ಸ್ವತಃ ಶಿಕ್ಷಕರೇ ಕೊಠಡಿ, ಕಿಟಕಿ, ಬಾಗಿಲು, ಕಾಂಪೌಂಡ್‌ಗೆ ತಾವೇ ಬಣ್ಣ ಬಳಿದು ಸಿಂಗರಿಸಿದ್ದಾರೆ.

ಶಾಲೆಯ ಮಕ್ಕಳ ಪ್ರಗತಿ ಉತ್ತಮವಾಗಿದ್ದು, ಕ್ರೀಡೆ, ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಜಿಲ್ಲಾ ಹಾಗೂ ವಿಭಾಗಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಈ ಶಾಲೆಯ ಮತ್ತೊಂದು ವಿಶೇಷವೆಂದರೆ ವಿದ್ಯಾರ್ಥಿಗಳಿಗೆ ಯೋಗ ಕಲಿಕೆ. ಯೋಗ ಗುರು ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಪ್ರತಿ ದಿನ ಶಾಲಾ ಆರಂಭಕ್ಕಿಂತ ಮುಂಚೆ 15 ನಿಮಿಷ ಯೋಗಾಸನ ಮಾಡಿಸುತ್ತಾರೆ.

‘ವಿದ್ಯಾಗಮ ಶಿಕ್ಷಣ ಕಾರ್ಯಕ್ರಮದಡಿ ಶಾಲೆಯ ಮೂವರು ಶಿಕ್ಷಕರು ಗ್ರಾಮದ ದೇವಸ್ಥಾನ, ಅರಳಿಕಟ್ಟೆ, ಸಮುದಾಯ ಭವನಗಳಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಶಾಲೆಯಲ್ಲಿ ಭೌತಿಕ ಪರಿಸರ, ಆವರಣದಲ್ಲಿ ವಿವಿಧ ಬಗೆಯ ಸಸ್ಯರಾಶಿ ಮತ್ತು ಮೂಲ ಸೌಕರ್ಯಗಳನ್ನು ಉತ್ತಮಪಡಿಸಲು ಹಳೆ ವಿದ್ಯಾರ್ಥಿಗಳ, ಶಿಕ್ಷಕರ, ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರ ಸಹಕಾರವೇ ಕಾರಣ’ ಎಂದು ಮುಖ್ಯಶಿಕ್ಷಕಿ ಎನ್.ಪಿ.ಕೆಂಪರಾಜಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲೆಗೆ ಶಿಕ್ಷಕರೇ ಬಣ್ಣ ಬಳಿದು ಅಲಂಕರಿಸಿದ ವಿಷಯ ತಿಳಿದ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ರೇವಣಸಿದ್ದೇಶ್ವರ ಸ್ಥಳಕ್ಕೆ ಬಂದು ಶಿಕ್ಷಕರ ಕಾರ್ಯ ಮತ್ತು ಶಾಲೆಯ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈಚೆಗೆ ನಡೆದ ಎಸ್‌ಡಿಎಂಸಿ ಅಧ್ಯಕ್ಷರ ಜೂಮ್ ಮೀಟಿಂಗ್ ಸಂವಾದದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಶಾಲೆ ಶಿಕ್ಷಕರ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

***

ಸಂತಸ ತಂದಿದೆ

ಹಿಂದೆ ವಡ್ಡರಹಟ್ಟಿ ಎಂದು ಗ್ರಾಮದ ಹೆಸರು ಹೇಳಿದ ತಕ್ಷಣ ಸುತ್ತಮುತ್ತಲಿನ ಗ್ರಾಮಗಳ ಜನರು ನಗಾಡುತ್ತಿದ್ದರು. ಆದರೆ, ಇಂದು ಶಾಲೆಯ ಅಭಿವೃದ್ಧಿ, ಮಕ್ಕಳ ಜ್ಞಾನಾರ್ಜನೆ ಮತ್ತು ಗ್ರಾಮದ ಅಭಿವೃದ್ಧಿ ಕಂಡು ಅವರೆಲ್ಲ ಆಶ್ಚರ್ಯ ಪಡುತ್ತಿದ್ದಾರೆ. ನನ್ನೂರು, ನಮ್ಮ ಸರ್ಕಾರಿ ಶಾಲೆಯ ಪ್ರಗತಿ ಕಂಡು ನನಗೂ ಸಂತಸ ನೀಡಿದೆ.

ಡಿ.ಯಲ್ಲಪ್ಪ, ಎಸ್‌ಡಿಎಂಸಿ ಅಧ್ಯಕ್ಷ, ವಡ್ಡರಹಟ್ಟಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.