ಭಾನುವಾರ, ಮಾರ್ಚ್ 29, 2020
19 °C
ಕೋವಿಡ್ ಭೀತಿ; ಮನೆಗಳ ಒಳಗೆ ಆಟ ಪಾಠಗಳಿಗೆ ಸೀಮಿತವಾಗಬೇಕಿದೆ ಚಿಣ್ಣರು

ಬೇಸಿಗೆ ಶಿಬಿರಗಳಿಗೆ ಕರಿನೆರಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಕೋವಿಡ್–19’ ಭೀತಿಯ ಪರಿಣಾಮ ಮಕ್ಕಳ ಬೇಸಿಗೆ ಶಿಬಿರಗಳ ಮೇಲೂ ಬಿದ್ದಿದೆ. ಈ ವೇಳೆಗಾಗಲೇ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಂಘ ಸಂಸ್ಥೆಗಳು, ಖಾಸಗಿ ಶಾಲೆಗಳು, ಕೆಲ ಸರ್ಕಾರಿ ಶಾಲೆಗಳು ಬೇಸಿಗೆ ಶಿಬಿರಕ್ಕೆ ಚಟುವಟಿಕೆಗಳನ್ನು ಆರಂಭಿಸುತ್ತಿದ್ದವು. ಶಿಬಿರಗಳ ರೂಪುರೇಷೆಗಳ ಬಗ್ಗೆ ಪ್ರಚಾರಕೈಗೊಳ್ಳುತ್ತಿದ್ದವು. ಆದರೆ ಈ ಬಾರಿ ಕೋವಿಡ್ ಕಾರಣಕ್ಕೆ ಶಿಬಿರದ ಬಗ್ಗೆ ಧ್ವನಿಯೇ ಕೇಳಿ ಬರುತ್ತಿಲ್ಲ.

ನಮ್ಮ ಸಂಸ್ಥೆಯಿಂದ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ, ಸಂಗೀತ, ನೃತ್ಯ, ಗ್ರಾಮೀಣ ಆಟಗಳು, ಚಾರಣ ಚಟುವಟಿಕೆಗಳನ್ನು ನಡೆಸುತ್ತೇವೆ. ಮೊದಲು ಬಂದ ಮಕ್ಕಳಿಗೆ ಆದ್ಯತೆ. ಇಲ್ಲವೆ ಇಂತಿಷ್ಟು ಮಕ್ಕಳಿಗೆ ಮಾತ್ರ ಪ್ರವೇಶ ಎಂದು ಅಂದ ಚಂದವಾದ ಕರಪತ್ರಗಳನ್ನು ಹಂಚಲಾಗುತ್ತಿತ್ತು. ಈ ಬಗ್ಗೆ ಸುದ್ದಿ ಮಾಡುವಂತೆ ಶಿಬಿರಗಳ ಸಂಘಟಕರು ಪತ್ರಿಕೆಗಳ ಕಚೇರಿಗೆ ಎಡತಾಕುತ್ತಿದ್ದರು. ಆದರೆ ಈ ಬಾರಿ ಇಂತಹ ಬೆಳವಣಿಗೆಗಳು ಕಾಣುತ್ತಿಲ್ಲ.

ಈಗಾಗಲೇ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವಂತೆ ಮಕ್ಕಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಿದ್ದಾರೆ. ಹೆಚ್ಚು ಜನಸಂದಣಿಯುಳ್ಳ ಜಾತ್ರೆಗಳಿಗೆ ಪೋಷಕರು ಮಕ್ಕಳನ್ನು ಕರೆದುಕೊಂಡು ಹೋಗುವ ಮನಸ್ಸು ಮಾಡುತ್ತಿಲ್ಲ. ಹೀಗೆ ಕೋವಿಡ್ ಕಾರಣದಿಂದ ನಾನಾ ರೀತಿಯಲ್ಲಿ ಭಯಭೀತರಾಗಿರುವ ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ತೀವ್ರ ನಿಗಾವಹಿಸುತ್ತಿದ್ದಾರೆ.

ಕೋವಿಡ್ ಕಾರಣಕ್ಕೆ ಮಕ್ಕಳನ್ನು ಶಿಬಿರಕ್ಕೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ಬೇಸಿಗೆ ಶಿಬಿರಗಳ ಸಂಘಟಕರ ಅಭಿಪ್ರಾಯ. ಕೋವಿಡ್ ಬಗ್ಗೆ ಬರುತ್ತಿರುವ ವರದಿಗಳನ್ನು ನೋಡಿ ಪೋಷಕರು ಯಾವ ಬೇಸಿಗೆ ಶಿಬಿರಗಳ ಗೊಡವೆಯೂ ಬೇಡ ಎನ್ನುವ ನಿರ್ಧಾರಕ್ಕೆ ಬಂದಂತೆ ಇದೆ. ಶಿಬಿರ ಹೇಗೆ ನಡೆಯುತ್ತದೆ ಅಲ್ಲಿನ ಕಾರ್ಯಕ್ರಮಗಳೇನು ಎನ್ನುವುದನ್ನು ಪೋಷಕರು ಬೇಸಿಗೆ ಆರಂಭದಲ್ಲಿಯೇ ತಿಳಿಯುತ್ತಿದ್ದರು. ಆದರೆ ಈಗ ಸುಮ್ಮನಿದ್ದಾರೆ.

ಇದು ಜಿಲ್ಲಾ ಕೇಂದ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ತಾಲ್ಲೂಕು ಕೇಂದ್ರಗಳಲ್ಲಿ ಶಿಬಿರಗಳನ್ನು ನಡೆಸುತ್ತಿದ್ದವರೂ ಶಿಬಿರ ಸಂಘಟಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.

***

ಭಯಬೇಡ; ಮುನ್ನೆಚ್ಚರಿಕೆ ಇರಲಿ

‘ಎಲ್ಲ ಸೋಂಕುಗಳು ಯಾವ ರೀತಿ ಹರಡುತ್ತವೆಯೋ ಅದೇ ರೀತಿಯಲ್ಲಿಯೇ ಕೋವಿಡ್ ಹರಡುತ್ತಿದೆ. ಆದರೆ ಜಿಲ್ಲೆಯಲ್ಲಿ ಪ್ರಕರಣಗಳೇನೂ ಆಗಿಲ್ಲ. ಭಯಬೇಡ. ಮುನ್ನೆಚ್ಚರಿಕೆ ಅಗತ್ಯ’ ಎನ್ನುತ್ತಾರೆ ಮಕ್ಕಳ ತಜ್ಞ ಡಾ.ಅಶೋಕ್.

ವಿದೇಶಗಳಿಂದ ಬಂದವರ ಸಂಪರ್ಕಕ್ಕೆ ಮಕ್ಕಳು ಸೇರಿದಂತೆ ಯಾರೂ ತಕ್ಷಣಕ್ಕೆ ಹೋಗುವುದು ಉತ್ತಮವಲ್ಲ. ಸಾಧ್ಯವಾದಷ್ಟು ಜನದಟ್ಟಣೆಯ ಸಂಪರ್ಕಗಳನ್ನು ನಿಯಂತ್ರಿಸಬೇಕು ಎಂದರು.

ಬೇಸಿಗೆಯಲ್ಲಿ ಮುಖ್ಯವಾಗಿ ಮಕ್ಕಳಿಗೆ ವಾಂತಿ, ಭೇದಿ ಬಾಧಿಸುತ್ತದೆ. ಕಾಲರ ಸಹ ಬರುತ್ತದೆ. ಆದ್ದರಿಂದ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ನಿಗಾ ಇಡಬೇಕು. ಅವರನ್ನು ತಂಪಾಗಿಡುವುದು ಬಹುಮುಖ್ಯ ಎಂದು ಹೇಳಿದರು.

***

ತೀವ್ರತೆ ನೋಡಿ ನಿರ್ಧಾರ

‘ಬೇಸಿಗೆ ಶಿಬಿರ ಆರಂಭಕ್ಕೆ ಸಂಬಂಧಿಸಿದಂತೆ ಮಾರ್ಚ್ 14ರಂದು ವಿಜ್ಞಾನ ಕೇಂದ್ರದಲ್ಲಿ ಸಭೆ ಕರೆಯಲಾಗಿದೆ. ಇಲ್ಲಿ ವಿದ್ಯಾರ್ಥಿಗಳ ನೋಂದಣಿ, ಸಿದ್ಧತೆ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ನಂತರ ಶಿಬಿರ ಆರಂಭಿಸುವ ಬಗ್ಗೆ ಮಾಹಿತಿ ನೀಡಲಾಗುವುದು. ಒಂದು ವೇಳೆ ಕೋವಿಡ್ ತೀವ್ರತೆ ಹೆಚ್ಚಿದರೆ ಶಿಬಿರ ಮಾಡಬೇಕೊ ಬೇಡವೋ ಎನ್ನುವುದನ್ನು ನಿರ್ಧರಿಸುತ್ತೇವೆ’ ಎಂದು ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಬಿ.ಮರುಳಯ್ಯ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)