ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ ಎದುರು ನೋಡುತ್ತಿರುವ ಶಿರಾ ಬಿಜೆಪಿಯಲ್ಲಿ ಶಮನವಾಗದ ಭಿನ್ನಮತ

ಉಪ ಚುನಾವಣೆ ಸಮಯ; ಆತಂಕದಲ್ಲಿ ಕಾರ್ಯಕರ್ತರು
Last Updated 22 ಆಗಸ್ಟ್ 2020, 6:28 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕು ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಮತ ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮತ್ತು ಸದಸ್ಯರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸ್ಫೋಟಗೊಂಡಿದೆ.

ಶಾಸಕ ಬಿ.ಸತ್ಯನಾರಾಯಣ ನಿಧನದಿಂದ ತೆರವಾಗಿರುವ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿರುವ ಸಮಯದಲ್ಲಿ ಪಕ್ಷದಲ್ಲಿ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ.

ಬಿಜೆಪಿಯಲ್ಲಿ ಬಣ ರಾಜಕೀಯ ಬಿರುಸುಗೊಂಡಿದೆ. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಮೊದಲು ಬಿ.ಕೆ‌.ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿತ್ತು. ನಂತರ ಅಭ್ಯರ್ಥಿ ಬದಲಿಸುವಂತೆ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಿಂದಾಗಿ ಮಂಜುನಾಥ್ ಸ್ವರ್ಧೆಯಿಂದ ಹಿಂದೆ ಸರಿದ ಕಾರಣ ಎಸ್.ಆರ್.ಗೌಡ ಅವರಿಗೆ ಟಿಕೆಟ್ ನೀಡಲಾಯಿತು.

ಈ ಸಮಯದಲ್ಲಿ ಹೈಕಮಾಂಡ್ ಪಕ್ಷದಲ್ಲಿನ ಭಿನ್ನಮತವನ್ನು ಬಗೆಹರಿಸಲು ಮುಂದಾಗದ ಕಾರಣ ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಮತ ಈಗ ಸ್ಫೋಟಗೊಂಡಿದೆ. ಪ್ರಸ್ತುತ ಬಿಜೆಪಿಯಲ್ಲಿ ಬಿ.ಕೆ.ಮಂಜುನಾಥ್ ಬಣ, ಎಸ್.ಆರ್.ಗೌಡ ಬಣ, ಸಂಸದ ಎ.ನಾರಾಯಣಸ್ವಾಮಿ ಬಣಗಳಿದ್ದು ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಒಮ್ಮತದಿಂದ ಕೆಲಸ ಮಾಡಿದ ಕಾರಣ ಶಿರಾ ತಾಲ್ಲೂಕಿನಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬಂದರೂ ಸಂಸದರಾಗಿ ಆಯ್ಕೆಯಾದ ಎ.ನಾರಾಯಣಸ್ವಾಮಿ ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿಲ್ಲ. ತಮ್ಮದೇ ಬಣ ಸಕ್ರಿಯವಾಗುವಂತೆ ಮಾಡಿದ್ದು, ಕಾರ್ಯಕರ್ತರಲ್ಲಿ ಅಸಮಾಧಾನ ಹೆಚ್ಚಿಸಿದೆ.

ಬಿಜೆಪಿ ನಗರ ಮತ್ತು ಗ್ರಾಮಾಂತರ ಘಟಕದ ಅಧ್ಯಕ್ಷರ ಆಯ್ಕೆ ಸಮಯದಲ್ಲಿ ಬಿ.ಕೆ.ಮಂಜುನಾಥ್ ಮೇಲುಗೈ ಸಾಧಿಸಿ, ತನ್ನ ಬೆಂಬಲಿಗರಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಯಶಸ್ವಿಯಾದರು. ಆದರೆ ಎಪಿಎಂಸಿ, ಪಿಎಲ್‌ಡಿ ಬ್ಯಾಂಕ್, ಬಗರ್ ಹುಕುಂ ಸಮಿತಿಗೆ ನಾಮ ನಿರ್ದೇಶಕರ ನೇಮಕದ ಸಮಯದಲ್ಲಿ ಎಸ್.ಆರ್.ಗೌಡ ಮೇಲುಗೈ ಸಾಧಿಸಿ ತನ್ನ ಬೆಂಬಲಿಗರು ನೇಮಕವಾಗುವಂತೆ ನೋಡಿಕೊಂಡರು.

ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಇಬ್ಬರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಈ ಸಮಯದಲ್ಲಿ ಎಸ್.ಆರ್.ಗೌಡ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಒತ್ತಡ ತಂದು ತಮ್ಮ ಬೆಂಬಲಿಗರಿಗೆ ಅವಕಾಶ ಸಿಗುವಂತೆ ಮಾಡಿದರು. ಇದರಿಂದ ಮಂಜುನಾಥ್ ಬಣದವರು ಆಕ್ರೋಶಗೊಂಡಿದ್ದಾರೆ.

ವಿಧಾನಸಭೆ ಉಪಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಶುಕ್ರವಾರ ನಡೆದ ಅಧಿಕಾರ ಸ್ವೀಕಾರ ಸಮಾರಂಭದಿಂದ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಕೆ.ಮಂಜುನಾಥ್, ನಗರ ಮೋರ್ಚಾ ಅಧ್ಯಕ್ಷ ವಿಜಯರಾಜು, ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಮಾಜಿ ಅಧ್ಯಕ್ಷರಾದ ಮಾಲಿ ಮರಿಯಪ್ಪ, ಬಸವರಾಜು, ಪಡಿ ರಮೇಶ್, ಕೃಷ್ಣಮೂರ್ತಿ ದೂರವೇ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT