ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ ಬರಪೀಡಿತ ತಾಲ್ಲೂಕು ಘೋಷಿಸಲು ಆಗ್ರಹ

Last Updated 21 ಸೆಪ್ಟೆಂಬರ್ 2021, 5:43 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಬೆಳೆ ವಿಫಲವಾಗಿದ್ದು, ರೈತರು ಸಂಕಷ್ಟದಲ್ಲಿರುವುದರಿಂದ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಿಸಿ ರೈತರ ನೋವಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ರೈತ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಆಗ್ರಹಿಸಿದ್ದಾರೆ.

ಶಾಶ್ವತ ಬರಪೀಡಿತ ಎನ್ನುವ ಹಣೆಪಟ್ಟಿಯನ್ನು ತಾಲ್ಲೂಕು ಹೊಂದಿದ್ದು, ರೈತರು ಮಳೆಯನ್ನು ನಂಬಿ ವ್ಯವಸಾಯ ಮಾಡುತ್ತಿದ್ದಾರೆ. ಮಳೆ ಇಲ್ಲದೆ ಶೇಂಗಾ, ರಾಗಿ, ತೊಗರಿ, ಸಿರಿಧಾನ್ಯಗಳಾದ ಕೊರಲೆ, ನವಣೆ, ಹಾರಕ ಬಿತ್ತನೆ ಮಾಡಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಜುಲೈ ಕೊನೆ ವಾರದಿಂದ ಸಪ್ಟಂಬರ್ ಎರಡನೇ ವಾರದವರೆಗೂ ಮಳೆಯಿಲ್ಲದೆ ಕೃಷಿ ಭೂಮಿ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಬೆಳೆಗಳು ಸಂಪೂರ್ಣವಾಗಿ ಒಣಗಿ ನಿಂತಿವೆ. ಒಳ್ಳೆಯ ಕಾಳು ಕಟ್ಟುವ ಸಮಯದಲ್ಲಿ ಮಳೆ ಬಾರದೆ ಶೇಂಗಾ ಬೆಳೆ ಬೆಂಕಿ ಸೀಡೆ ರೋಗಕ್ಕೆ ತುತ್ತಾಗಿದೆ. ರೈತರು ಈ ಬಾರಿ ಯಾವುದೇ ಫಲವನ್ನು ನಿರೀಕ್ಷೆ ಮಾಡದ ಸ್ಥಿತಿಯಲ್ಲಿದ್ದಾರೆ.

‘ಜಾನುವಾರುಗಳಿಗೆ ಮೇವು ಮತ್ತು ನೀರಿನ ಅಭಾವ ಉದ್ಭವಿಸಿದ್ದು, ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. 2019- 20ನೇ ಸಾಲಿನ ರೈತರು ಶೇಂಗಾ ಮತ್ತು ಇತರೆ ಬೆಳೆಗಳಿಗೆ ಕಟ್ಟಿದ ಬೆಳೆ ವಿಮೆ ಬರೆದಿದ್ದ ಕಾರಣದಿಂದ 2020-21 ಸಾಲಿನ ಬೆಳೆ ವಿಮೆಯನ್ನು ಕಟ್ಟಲು ರೈತರು ಆಸಕ್ತಿಯನ್ನು ವಹಿಸದ ಕಾರಣ ಶೇ 60ರಷ್ಟು ಮಂದಿ ಮಾತ್ರ ವಿಮೆ ಕಟ್ಟಿದ್ದಾರೆ. ಆದ್ದರಿಂದ ಈ ಕೂಡಲೇ ಸಂಬಂಧಪಟ್ಟ ಇಲಾಖೆಗಳು ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡುವ ಮೂಲಕ ಬರ ಪೀಡಿತ ಪ್ರದೇಶ ಎಂದು ಘೋಷಿಸಬೇಕು’ ಎಂದು ನಾದೂರು ಕೆಂಚಪ್ಪ ಆಗ್ರಹಿಸಿದರು.

‘ಶಾಸಕರು ಈ ಬಗ್ಗೆ ಸದನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು. ಆದರೆ ಶಾಸಕರು ಇದುವರೆಗೂ ಸದನದಲ್ಲಿ ಈ ಬಗ್ಗೆ ತುಟಿ ಬಿಚ್ಚದಿರುವುದು ನಮ್ಮ ರೈತರ ದೌರ್ಭಾಗ್ಯವಾಗಿದೆ. ಆದ್ದರಿಂದ ಈಗಲಾದರೂ ಸಹ ಶಾಸಕರು ರೈತರ ನೋವಿಗೆ ಸ್ಪಂದಿಸಿ ಸದನದಲ್ಲಿ ಇದರ ಬಗ್ಗೆ ಚರ್ಚೆ ನಡೆಸಿ ಕೃಷಿ ಸಚಿವರ
ಗಮನ ಸೆಳೆಯುವ ಮೂಲಕ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ಬೆಳೆ ವಿಮೆ ಕಟ್ಟಿರುವ ರೈತರಿಗೆ ತಕ್ಷಣ ವಿಮೆ ಪರಿಹಾರವನ್ನು ಬಿಡುಗಡೆ ಮಾಡಿ, ವಿಮೆ
ಮಾಡಿಸದ ರೈತರಿಗೆ ಎಕರೆವಾರು ನೀಡಬೇಕು’ ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT