ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾದ ಪ್ರಾಮಾಣಿಕರು: ಸ್ವಾಮೀಜಿ ವಿಷಾದ

ಶಿವಕುಮಾರ ಸ್ವಾಮೀಜಿ ಸ್ಮರಣೆ; 117ನೇ ಜಯಂತಿ ಆಚರಣೆ, ಗುರುವಂದನೆ
Published 2 ಏಪ್ರಿಲ್ 2024, 4:56 IST
Last Updated 2 ಏಪ್ರಿಲ್ 2024, 4:56 IST
ಅಕ್ಷರ ಗಾತ್ರ

ತುಮಕೂರು: ಸಮಾಜದಲ್ಲಿ ಪ್ರಾಮಾಣಿಕರ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದು ಅಪಾಯದ ಸೂಚನೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ವಿಷಾದಿಸಿದರು.

ಸಿದ್ಧಗಂಗಾ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ 117ನೇ ವರ್ಷದ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ಪ್ರಾಮಾಣಿಕರ ಸಂಖ್ಯೆ ಕಡಿಮೆ ಆಗುತ್ತಿರುವುದನ್ನು ವಿಷಾದದಿಂದಲೇ ಹೇಳಬೇಕಾಗಿದೆ. ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ಬಿಟ್ಟು ದೇಶದ ಪ್ರಗತಿಗೆ ಬದ್ಧತೆ ಹೊಂದಿದ ಯುವ ಪಡೆಯೊಂದು ನಿರ್ಮಾಣವಾಗಬೇಕಿದೆ. ಆ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಾಗಲಿದೆ ಎಂದು ಸಲಹೆ ಮಾಡಿದರು.

ಶಿವಕುಮಾರ ಸ್ವಾಮೀಜಿಯ ತ್ರಿವಿಧ ದಾಸೋಹವನ್ನು ಮೆಲುಕು ಹಾಕಿದರು. ಸ್ವಾಮೀಜಿಯ ಬದುಕೇ ಒಂದು ರೀತಿಯಲ್ಲಿ ಪ್ರಯೋಗ ಶಾಲೆಯಂತಿತ್ತು. ಅವರ ಬದುಕು ಜನಸಾಮಾನ್ಯರಲ್ಲಿ ವಿಸ್ಮಯ, ಆಶ್ಚರ್ಯವನ್ನು ಉಂಟು ಮಾಡಿತ್ತು. ವಿಶ್ರಾಂತಿಯನ್ನೇ ಮರೆತು ನಿರಂತರವಾಗಿ ಸಮಾಜ ಸೇವೆಗೆ ಮೀಸಲಿಟ್ಟಿದ್ದರು. ಜನಕಲ್ಯಾಣದ ಜತೆಗೆ ಧರ್ಮ ಜಾಗೃತಿ ಮೂಡಿಸುವ ಮೂಲಕ ಸಮಾಜವನ್ನು ಸರಿ ದಾರಿಯಲ್ಲಿ ಮುನ್ನಡೆಸಿದ್ದರು. ಎಲ್ಲರ ಬಾಯಲ್ಲೂ ನಡೆದಾಡುವ ದೇವರಾಗಿ ಉಳಿದುಕೊಂಡಿದ್ದಾರೆ ಎಂದು ಸ್ಮರಿಸಿದರು.

ಸ್ವಾಮೀಜಿ ಲೌಕಿಕ, ಆಧ್ಯಾತ್ಮಿಕವನ್ನು ಸಮನ್ವಯಗೊಳಿಸಿ ಬದುಕಿದ್ದವರು. ಜನರ ಪ್ರೀತಿ, ಅಭಿಮಾನಕ್ಕೆ ಪಾತ್ರರಾಗಿದ್ದರು. ಮೊದಲು ಅನ್ನ ದಾಸೋಹ, ನಂತರ ಜ್ಞಾನ ದಾಸೋಹ ಎಂಬ ನಂಬಿಕೆ ಹೊಂದಿದ್ದರು. ಲಕ್ಷಾಂತರ ಜನರಿಗೆ ಜ್ಞಾನ ದಾಸೋಹಿ ಆಗಿದ್ದರು. ಜನರ ಒಳಿತಿಗಾಗಿ ಜೀವನವನ್ನೇ ಸಮರ್ಪಿಸಿಕೊಂಡಿದ್ದರು ಎಂದು ಹೇಳಿದರು.

ಸಿದ್ಧಲಿಂಗ ಸ್ವಾಮೀಜಿ, ‘ಶಿವಕುಮಾರ ಸ್ವಾಮೀಜಿ 111 ವರ್ಷಗಳ ಕಾಲ ಬದುಕಿದ್ದು, ಅದರಲ್ಲಿ 85 ವರ್ಷಗಳ ಕಾಲ ಸ್ವಾಮೀಜಿಯಾಗಿ ಸೇವೆ ಸಲ್ಲಿಸಿದ್ದಾರೆ. ಉದ್ಧಾನ ಶಿವಯೋಗಿಗಳು ಒಡ್ಡಿದ ಕಠಿಣ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ. ಮಠದ ಕಿರಿಯ ಸ್ವಾಮೀಜಿಯಾಗಿದ್ದಾಗ ಹತ್ತು ವರ್ಷಗಳ ಕಾಲ ಹಿರಿಯ ಸ್ವಾಮೀಜಿ ನಡೆಸಿದ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ, ನಂತರ ಮಠವನ್ನು ಮುನ್ನಡೆಸಿದ್ದಾರೆ’ ಎಂದು ನೆನಪು ಮಾಡಿಕೊಂಡರು.

ಕರ್ಪೂರದಂತೆ ಕರಗಿ ಸಮಾಜಕ್ಕೆ ಬೆಳಕು ನೀಡಿದ್ದಾರೆ. ಹಗಲು– ರಾತ್ರಿ ದುಡಿದು, ಕಾಯಕ ಮಾಡಿ ಮಠ ಬೆಳೆಸಿದ್ದಾರೆ. ಪಾದಯಾತ್ರೆ ಮಾಡಿ, ಭಿಕ್ಷೆ ಬೇಡಿ ತಂದ ಪದಾರ್ಥಗಳಲ್ಲಿ ಅಡುಗೆ ಮಾಡಿ ಮಕ್ಕಳಿಗೆ ಪ್ರಸಾದ ಬಡಿಸಿದ್ದಾರೆ. ಮೊದಲು ಹೊಟ್ಟೆಯ ಹಸಿವು ನೀಗಿಸಿ, ನಂತರ ನೆತ್ತಿಯ ಹಸಿವು ನೀಗಿಸಿದವರು ಎಂದು ಸ್ವಾಮೀಜಿಯ ಸಾಧನೆಯನ್ನು ಬಿಚ್ಚಿಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಮುಂಡರಗಿ ಮಠದ ಅನ್ನದಾನೇಶ್ವರಿ ಸ್ವಾಮೀಜಿ, ‘ಛಾಯೆಯ ಮಾಯೆಗೆ ಒಳಗಾಗದೆ ಕಾಯಕ ನಂಬಿ, ಮಾಯೆಯಯನ್ನು ದೂರ ತಳ್ಳಿ ಬದುಕಿದವರು ಶಿವಕುಮಾರ ಸ್ವಾಮೀಜಿ. ವಿಶ್ವದ ಯುಗ ಪುರುಷ, ನಾಡಿಗೆ ಬೆಳಕಾದವರು. ಈ ಯುಗದ ಮಹಾ ಚೇತನ. ಅಳತೆ, ಪರಿಮಿತಿಯನ್ನು ಮೀರಿ ಮುನ್ನಡೆದವರು’ ಎಂದು ಸ್ವಾಮೀಜಿ ಸಾಧನೆಯನ್ನು ಕೊಂಡಾಡಿದರು.

ಧಾರವಾಡ ಮರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ‘ಬಸವಣ್ಣ ಮೊದಲ ಬಾರಿಗೆ ಕಲ್ಯಾಣ ಕ್ರಾಂತಿ ಮಾಡಿದರೆ, 6ನೇ ಕಲ್ಯಾಣ ಕ್ರಾಂತಿಯನ್ನು ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಮಾಡಿದರು. ಇಂತಹ ಮಹಾನ್ ಪುರುಷನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಮನುಷ್ಯರಾಗಿ ಬದುಕಬೇಕು’ ಎಂದು ಸಲಹೆ ಮಾಡಿದರು.

ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜ, ‘ರಾಜ್ಯದಲ್ಲಿ ಪುಟ್ಟರಾಜ ಗವಾಯಿ ಹಾಗೂ ಶಿವಕುಮಾರ ಸ್ವಾಮೀಜಿ ಎರಡು ಕಣ್ಣುಗಳಿದ್ದಂತೆ. ನಾಡು, ಸಮಾಜದ ಬಡ ಮಕ್ಕಳಿಗಾಗಿ ದುಡಿದಿದ್ದಾರೆ. ಭೂ ಲೋಕದಲ್ಲಿ ಧರ್ಮ ನಶಿಸುತ್ತಿದ್ದ ಸಂದರ್ಭದಲ್ಲಿ ಇಂತಹ ಮಹಾತ್ಮರು ಹುಟ್ಟಿ ಬಂದಿದ್ದಾರೆ. ಸ್ವಾಮೀಜಿ ಜನರ ಹೃದಯದಲ್ಲಿ ನೆಲೆಸಿದ್ದಾರೆ’ ಎಂದು ಹೇಳಿದರು.

ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಶಿವಸಿದ್ಧೇಶ್ವರ ಸ್ವಾಮೀಜಿ ನುಡಿನಮನ ಸಲ್ಲಿಸಿದರು. ಸಿ.ಸೋಮಶೇಖರ್ ನಿರೂಪಿಸಿದರು.

ಗದ್ದುಗೆ ಪೂಜೆ

ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಸೋಮವಾರ ಮುಂಜಾನೆ ಪೂಜೆ ಸಲ್ಲಿಸುವ ಮೂಲಕ ಸ್ವಾಮೀಜಿ ಜಯಂತಿಗೆ ಚಾಲನೆ ನೀಡಲಾಯಿತು. ಸಿದ್ಧಲಿಂಗ ಸ್ವಾಮೀಜಿ ಉತ್ತರಾಧಿಕಾರಿ ಶಿವಸಿದ್ಧೇಶ್ವರ ಸ್ವಾಮೀಜಿ ಪೂಜೆ ಸಲ್ಲಿಸಿ ಗುರುವನ್ನು ನೆನಪು ಮಾಡಿಕೊಂಡರು. ಮಠದ ಆವರಣದಲ್ಲಿ ಸ್ವಾಮೀಜಿ ಪುತ್ಥಳಿಯ ಮೆರವಣಿಗೆ ನಡೆಯಿತು. ಹಲವು ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ನಿತ್ಯ ದಾಸೋಹ

ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಕಣ್ತುಂಬಿಕೊಳ್ಳಲು ಬಂದಿದ್ದ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಮಠದ ವಿವಿಧೆಡೆ ದಾಸೋಹ ನಡೆಯಿತು. ಬೆಳಗ್ಗೆ ಉಪಾಹಾರ ಮಧ್ಯಾಹ್ನ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯರಾತ್ರಿಯ ವರೆಗೂ ಮಠದಲ್ಲಿ ದಾಸೋಹ ಮುಂದುವರಿಸಿತ್ತು.

ಕುಗ್ಗಿದ ಭಕ್ತರ ಸಂಖ್ಯೆ

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಠದಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ ಮುಂಭಾಗವೂ ಜನ ದಟ್ಟಣೆ ಕಾಣಿಸಲಿಲ್ಲ. ಪ್ರತಿ ವರ್ಷವೂ ಮಠದ ಆವರಣದಲ್ಲಿ ಕಾಲಿಡಲೂ ಜಾಗ ಸಿಗುತ್ತಿರಲಿಲ್ಲ. ಜಿಲ್ಲೆಯಷ್ಟೇ ಅಲ್ಲದೆ ರಾಜ್ಯದ ವಿವಿಧೆಗಳಿಂದೂ ಭಕ್ತರು ಬರುತ್ತಿದ್ದರು. ಈ ಬಾರಿ ಅಂತಹ ವಾತಾವರಣ ಕಂಡು ಬರಲಿಲ್ಲ. ಬೇಸಿಗೆ ಬಿಸಿಲಿನ ಝಳ ಚುನಾವಣೆ ನೀತಿ ಸಂಹಿತೆ ಜಾರಿ ಮೊದಲಾದ ಕಾರಣಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಮಠದತ್ತ ಬರಲಿಲ್ಲ.

ಶಿವಕುಮಾರ ಸ್ವಾಮೀಜಿ ಪುತ್ಥಳಿ ಮೆರವಣಿಗೆ
ಶಿವಕುಮಾರ ಸ್ವಾಮೀಜಿ ಪುತ್ಥಳಿ ಮೆರವಣಿಗೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT