ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಸಿದ್ಧಲಿಂಗೇಶ್ವರ ಸ್ವಾಮಿ ತೇರು

ರಥೋತ್ಸವಕ್ಕೆ ಸಿದ್ಧಲಿಂಗ ಸ್ವಾಮೀಜಿ ಚಾಲನೆ, ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಭಾಗಿ
Last Updated 23 ಫೆಬ್ರುವರಿ 2020, 10:36 IST
ಅಕ್ಷರ ಗಾತ್ರ

ತುಮಕೂರು: ಇಲ್ಲಿನ ಸಿದ್ಧಗಂಗಾ ಮಠದಲ್ಲಿ ಶನಿವಾರ ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು.

ಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಹಳೆಯ ಮಠದ ಬಳಿ ಹೋಮ, ಪೂರ್ಣಾಹುತಿ ನಡೆಸಿದ ಬಳಿಕ ರಥದ ಗಾಲಿಗೆ ತೆಂಗಿನಕಾಯಿ ಒಡೆದು ಹಾಗೂ ಸ್ವಾಮಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಸೇರಿದಂತೆ ವಿವಿಧ ಮಠಾಧೀಶರುಗಳು, ಗಣ್ಯರು, ಭಕ್ತರು ಭಾಗವಹಿಸಿದ್ದರು. ಹರಹರ ಮಹಾದೇವ, ಓಂ ನಮಃ ಶಿವಾಯ ಎನ್ನುವ ಜೈಕಾರಗಳೊಂದಿಗೆ ರಥ ಎಳೆದರು.

ಇದಕ್ಕೂ ಮುನ್ನ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ ಕಚೇರಿ ಮುಂಭಾಗದಿಂದ ವೀರಗಾಸೆ, ನಂದಿಧ್ವಜ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿ ರಥಕ್ಕೆ ಸಿದ್ಧಲಿಂಗೇಶ್ವರಸ್ವಾಮಿಯನ್ನು ಕೂರಿಸಲಾಯಿತು. ಮಧ್ಯಾಹ್ನ 12ಕ್ಕೆ ಸರಿಯಾಗಿ ರಥೋತ್ಸವಕ್ಕೆ ಚಾಲನೆ ದೊರೆಯಿತು.

ರಥವನ್ನು ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಲಶ, ಕನ್ನಡಿ ಹಾಗೂ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕರಿಸಲಾಗಿತ್ತು. ರಥಸಾಗಿದ ದಾರಿಯುದ್ದಕ್ಕೂ ನಂದಿಧ್ವಜ, ಕರಡಿ ಮಜಲು, ನಾಗಸ್ವರ, ವೀರಗಾಸೆ, ಪಟಕುಣಿತ, ಡೋಲುಕುಣಿತ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳ ಪ್ರದರ್ಶನ ಭಕ್ತ ಸಮೂಹವನ್ನು ಆಕರ್ಷಿಸಿತು.

ನಾಡಿನ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಸುಡು ಬಿಸಿಲು ಲೆಕ್ಕಿಸದೆ ರಥೋತ್ಸವದಲ್ಲಿ ಭಾಗವಹಿಸಿದರು. ಇಷ್ಟಾರ್ಥ ಸಿದ್ದಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಿದರು. ಶಿವರಾತ್ರಿ ಜಾಗರಣೆಗಾಗಿ ಸಹಸ್ರಾರು ಭಕ್ತರು ರಾತ್ರಿಯೇ ಮಠಕ್ಕೆ ಬಂದಿದ್ದರು. ಬೆಳಿಗ್ಗೆ ರಥೋತ್ಸವದಲ್ಲಿ ಭಾಗಿಯಾದರು.

ಮುಂಜಾಗ್ರತಾ ಕ್ರಮವಾಗಿ ಜಾತ್ರಾ ಸ್ಥಳದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಜನಜಂಗುಳಿ ಇರುವಾಗ ಭಕ್ತರ ನಡುವೆ ಸೇರಿಕೊಂಡು ಹಣ ಮತ್ತು ಒಡವೆಗಳನ್ನು ದೋಚುವ ಜೇಬುಗಳ್ಳರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಧ್ವನಿವರ್ಥಕಗಳಲ್ಲಿ ತಿಳಿಸಲಾಗುತ್ತಿತ್ತು.

***

ಜನಪದ ಕಲಾತಂಡಗಳ ಮೆರುಗು

ರಥದ ಮೆರವಣಿಗೆ ಸಾಗುತ್ತಿದ್ದ ಬೀದಿಯ ಉದ್ದಕ್ಕೂ ನಾದಸ್ವರ, ವೀರಗಾಸೆ, ಡೊಳ್ಳು ಕುಣಿತದಂತಹ ಜನಪದ ಕಲಾತಂಡಗಳು ಕಳೆ ತುಂಬಿದವು. ರಥೋತ್ಸವದ ವೇಳೆಯಲ್ಲಿ ಬಿರು ಬಿಸಿಲು ಇದ್ದ ಕಾರಣ ಭಕ್ತರಿಗೆ ವಿವಿಧ ಸಂಘ ಸಂಸ್ಥೆಗಳು ಪಾನಕ, ಮಜ್ಜಿಗೆಯಂತಹ ತಂಪು ಪಾನೀಯಗಳನ್ನು ನೀಡಿದರು. ಮಠದಿಂದ ಭಕ್ತರಿಗೆ ಪ್ರಸಾದ, ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT