ಬುಧವಾರ, ಜೂನ್ 3, 2020
27 °C
ಸಿದ್ಧಗಂಗಾ ಮಠದ 2,000 ಮಕ್ಕಳಿಗೆ ಸಿಹಿ ಊಟ; ಗದ್ದುಗೆಯಲ್ಲಿ ರುದ್ರಾಭಿಷೇಕ

ತುಮಕೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಜನ್ಮದಿನ ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಶಿವಕುಮಾರ ಸ್ವಾಮೀಜಿ 113ನೇ ಜನ್ಮದಿನದ ಕಾರ್ಯಕ್ರಮ ಸಿದ್ಧಗಂಗಾ ಮಠದಲ್ಲಿ ಬುಧವಾರ ಸರಳವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.

ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಮಠಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಅದ್ಧೂರಿ ಆಚರಣೆಯನ್ನು ಮಠದ ಆಡಳಿತ ಮಂಡಳಿ ರದ್ದು ಮಾಡಿತ್ತು. ನಿತ್ಯದಂತೆ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಪೂಜೆ ನೆರವೇರಿಸಲಾಯಿತು. ಮುಂಜಾನೆ ಸಿದ್ದಲಿಂಗ ಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿಸಿ ಗದ್ದುಗೆಗೆ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಜಯಂತಿ: ಕನ್ನಡದಲ್ಲೇ ಟ್ವೀಟ್ ಮಾಡಿ ಗೌರವಿಸಿದ ಮೋದಿ

ನಂತರ ಸಾಮಾಜಿಕ ಅಂತರ ಕಾಯ್ದುಕೊಂಡು ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಲಾಯಿತು. ಪ್ರತಿ ವರ್ಷ ಏ.1ರಂದು ಮಠಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಸಿಹಿ ಖಾದ್ಯಗಳನ್ನು ಪ್ರಸಾದ ರೂಪದಲ್ಲಿ ಉಣಬಡಿಸಲಾಗುತ್ತಿತ್ತು. ಈ ಸಲ ಯಾರೊಬ್ಬರೂ ಗದ್ದುಗೆ ದರ್ಶನಕ್ಕೆ ಬಂದಿರಲಿಲ್ಲ. ಮಧ್ಯಾಹ್ನ ಮಠದಲ್ಲಿರುವ 2 ಸಾವಿರ ವಿದ್ಯಾರ್ಥಿಗಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಧ್ಯಾನ ಮಂದಿರದಲ್ಲಿ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ‘ಎಂದೂ ಕಂಡರಿಯದ ಸ್ಥಿತಿಯಲ್ಲಿ ನಾವಿದ್ದೇವೆ. ಯಾರೊಬ್ಬರನ್ನೂ ಮುಟ್ಟದಂತಹ ಸನ್ನಿವೇಶ ಇದೆ. ದೇಶಕ್ಕೆ ಎದುರಾಗಿರುವ ಈ ಗಂಡಾಂತರ ದೂರವಾಗಲಿ ಎಂದು ಪ್ರಾರ್ಥಿಸಲಾಗಿದೆ’ ಎಂದು ಹೇಳಿದರು.

ಜನರಲ್ಲಿ ಭಯ, ಆತಂಕ ಮನೆ ಮಾಡಿದೆ. ವಿದೇಶಗಳಿಂದ ಬಂದವರು ನಮ್ಮ ದೇಶಕ್ಕೆ ಕೊರೊನಾ ಸೋಂಕು ತಂದಿದ್ದಾರೆ. ಇದರ ನಿಗ್ರಹಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಜನಸಾಮಾನ್ಯರು ಸಹ ಮನೆಯಲ್ಲಿದ್ದು ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

‘ಪೂಜ್ಯರ ಭೌತಿಕ ದರ್ಶನ ನಮಗೆ ಇಲ್ಲ. ಆದರೆ ಭಾವನಾತ್ಮಕವಾದ ಭಕ್ತಿಯೊಂದಿಗೆ ಸ್ಮರಣೆ ಮಾಡುವ ಮೂಲಕ ನಮ್ಮ ಬದುಕನ್ನು ಹಸನು ಮಾಡಿಕೊಳ್ಳೋಣ’ ಎಂದು ಆಶಿಸಿದರು.

ಶಿವಕುಮಾರ ಸ್ವಾಮೀಜಿ ಎಂದೂ ಜನ್ಮದಿನ ಆಚರಿಸಿಕೊಂಡವರಲ್ಲ. ಭಕ್ತರ ಒತ್ತಾಯದ ಮೇರೆಗೆ ಹುಟ್ಟುಹಬ್ಬ ಆಚರಣೆಯನ್ನು ಗುರುವಂದನಾ ಮಹೋತ್ಸವವಾಗಿ ಆಚರಿಸಲಾಗುತ್ತಿತ್ತು ಎಂದರು.

ಶ್ರೀಗಳು ವೈಯಕ್ತಿವಾಗಿ ಏನನ್ನೂ ಬಯಸದೆ ಸಮಾಜಕ್ಕಾಗಿ ದುಡಿದರು. ಸಮಾಜಕ್ಕೆ ಬದುಕನ್ನು ಮುಡುಪಾಗಿಟ್ಟರು. ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ ಸ್ವಾಮೀಜಿ, ಲಕ್ಷಾಂತರ ಮಕ್ಕಳ ಬದುಕು ಹಸನು ಮಾಡಿದ್ದಾರೆ ಎಂದು ಸ್ಮರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು