ಬುಧವಾರ, ಜನವರಿ 26, 2022
23 °C
ರಾಜ್ಯ ಮಟ್ಟದ ಜನಜಾಗೃತಿ ಅಭಿಯಾನದಲ್ಲಿ ಸಿದ್ದರಾಮಯ್ಯ ಕುಟುಕು

ಮೋದಿ ವರ್ಚಸ್ಸು ಮಾಯ: ಜನಜಾಗೃತಿ ಅಭಿಯಾನದಲ್ಲಿ ಸಿದ್ದರಾಮಯ್ಯ ಕುಟುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಮಾಯವಾಗಿದ್ದರೂ ಬಿಜೆಪಿಯವರು ಇನ್ನೂ ಅವರ ಹೆಸರು ಜಪಿಸುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದರು.

ಕಾಂಗ್ರೆಸ್ ನೇತೃತ್ವದ ಸರ್ಕಾರ ಈವರೆಗೆ ದೇಶದಲ್ಲಿ ಜಾರಿಗೊಳಿಸಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವ ಸಲುವಾಗಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಜನಜಾಗೃತಿ ಅಭಿಯಾನಕ್ಕೆ ನಗರದಲ್ಲಿ ಭಾನುವಾರ ಚಾಲನೆ ನೀಡಿ ಮಾತನಾಡಿದರು.

‘ಇನ್ನೂ ಮೋದಿ ಹೆಸರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಉಳಿದ ನಾಯಕರಿಗೆ ಧಮ್ ಇಲ್ಲವೆ’ ಎಂದು ಪ್ರಶ್ನಿಸಿದರು. ಒಳ್ಳೆಯ ಕಾಲ ಬರುತ್ತದೆ ಎಂದು ಹೇಳಿದ್ದರು. ಆ ಮೂಲಕ ವೋಟು ಕೊಡಿ ಎಂದು ಕೇಳಿದ್ದರು. ನಂತರ ಬೆಲೆ ಏರಿಕೆ ಮಾಡಿ ‘ದುಬಾರಿ ಕಾಲ’ ನಿರ್ಮಿಸಿದ್ದಾರೆ. ಇಂತಹ ಕೆಲಸ ಮಾಡಲು ನಾಚಿಕೆ ಆಗುವುದಿಲ್ಲವೆ? ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಕೈಗೊಂಡಿರುವ ‘ಜನಸ್ವರಾಜ್ಯ’ ಯಾತ್ರೆಯನ್ನೂ ಲೇವಡಿ ಮಾಡಿದರು. ‘ಶಂಖು, ಜಾಗಟೆ ಬಾರಿಸಿಕೊಂಡು, ಕೊಂಬು, ಕಹಳೆ ಊದಿಕೊಂಡು ಹೊರಟಿದ್ದಾರೆ. ಕೊಂಬು, ಕಹಳೆಗಿದ್ದ ಬೆಲೆಯನ್ನು ಕಳೆಯುತ್ತಿದ್ದಾರೆ. ನಾಲ್ಕು ತಂಡ ಮಾಡಿಕೊಂಡು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಗ್ರಾಮ ಸ್ವರಾಜ್ಯ, ಅಧಿಕಾರ ವಿಕೇಂದ್ರೀಕರಣಕ್ಕೆ ವಿರೋಧ ಇದ್ದವರು ಈಗ ಯಾತ್ರೆ ಮಾಡಿ ವೋಟು ಕೇಳುತ್ತಿದ್ದಾರೆ. ಮಾನ ಮರ್ಯಾದೆ ಇಲ್ಲದವರು, ಲಜ್ಜೆಗೆಟ್ಟವರು’ ಎಂದು ಟೀಕಾ ಪ್ರಹಾರ ನಡೆಸಿದರು.

ಮನಮೋಹನ್ ಸಿಂಗ್ ಸರ್ಕಾರದ ಸಮಯದಲ್ಲಿ ಪೆಟ್ರೋಲ್, ಅಡುಗೆ ಅನಿಲದ ಬೆಲೆ ನಾಲ್ಕೈದು ರೂಪಾಯಿ ಏರಿಕೆಯಾದರೆ ಶೋಭಾ ಕರಂದ್ಲಾಜೆ ಸಿಲಿಂಡರ್ ಹೊತ್ತುಕೊಂಡು ಬೀದಿಗೆ ಬರುತ್ತಿದ್ದರು. ಈಗ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಲೆ ಏರಿಕೆಯಾಗಿದ್ದರೂ ಬಾಯಿ ಬಿಡುತ್ತಿಲ್ಲ. ‘ಈಗ ಎಲ್ಲಿದ್ದೀಯ ತಾಯಿ’ ಎಂದು ಶೋಭಾ ಅವರನ್ನು ಕೆಣಕಿದರು.

ಕೃಷಿ ಕಾಯ್ದೆಗಳನ್ನು ಮೊದಲೇ ವಾಪಸ್ ಪಡೆದಿದ್ದರೆ 700 ರೈತರ ಜೀವ ಉಳಿಸಬಹುದಿತ್ತು. ಮೃತ ರೈತರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ಕೊಡಬೇಕು, ಚಳವಳಿಗಾರರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ಬೇಷರತ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಒಂದು ವರ್ಷ ಸತತವಾಗಿ ಹೋರಾಟ ನಡೆಸಿದ ರೈತರಿಗೆ ದೊಡ್ಡ ನಮಸ್ಕಾರ ಎಂದು ಕೈಮುಗಿದರು.

ಶಾಸಕ ಡಾ.ಜಿ.ಪರಮೇಶ್ವರ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಶಾಸಕರಾದ ವೆಂಕಟರಮಣಪ್ಪ, ಡಾ.ರಂಗನಾಥ್, ಮುಖಂಡರಾದ ಟಿ.ಬಿ.ಜಯಚಂದ್ರ, ಎಸ್.ಪಿ.ಮುದ್ದಹನುಮೇಗೌಡ, ಷಫಿಅಹ್ಮದ್, ಕೆ.ಎನ್.ರಾಜಣ್ಣ, ಕೆ.ಷಡಕ್ಷರಿ, ರಫಿಕ್ ಅಹಮ್ಮದ್, ಸೋಮ್ಲಾ ನಾಯಕ್, ಲಕ್ಕಪ್ಪ, ಆರ್.ರಾಮಕೃಷ್ಣ, ಮುರಳೀಧರ ಹಾಲಪ್ಪ ಇತರರು ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು