ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧರಾಮೇಶ್ವರರು ಬೋವಿ ಸಮಾಜದ ಹೆಮ್ಮೆ: ಊರುಕೆರೆ ಉಮೇಶ್

Published 15 ಜನವರಿ 2024, 14:29 IST
Last Updated 15 ಜನವರಿ 2024, 14:29 IST
ಅಕ್ಷರ ಗಾತ್ರ

ತುಮಕೂರು: ಕಾಯಕವನ್ನೇ ಧರ್ಮವೆಂದು ನಂಬಿದ್ದ ಶಿವಯೋಗಿ ಸಿದ್ಧರಾಮೇಶ್ವರರು ಬೋವಿ ಸಮಾಜದ ಕುಲಗುರು ಎಂಬುದೇ ನಮ್ಮೆಲ್ಲರ ಹೆಮ್ಮೆ ಎಂದು ಬೋವಿ ಸಮಾಜದ ಮುಖಂಡ ಊರುಕೆರೆ ಉಮೇಶ್ ಹೇಳಿದರು.

ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸೋಮವಾರ ಜಿಲ್ಲಾ ಆಡಳಿತ, ಜಿಲ್ಲಾ ಬೋವಿ ಸಮಾಜ, ರಾಷ್ಟ್ರೀಯ ಒಸಿಸಿಐ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಿಜ ಶರಣ ಸಿದ್ಧರಾಮೇಶ್ವರರ 851ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕ್ತಿ’ ಎಂಬಂತೆ, ಸಿದ್ಧರಾಮೇಶ್ವರರು ಹಾಕಿಕೊಟ್ಟ ದಾರಿಯಲ್ಲಿ ಕಾಯಕವನ್ನೇ ದೇವರೆಂದು ನಂಬಿ ಮುನ್ನಡೆಯಬೇಕಿದೆ ಎಂದು ಸಲಹೆ ಮಾಡಿದರು.

ಬೋವಿ ಸಮುದಾಯದ ಮತ್ತೊಬ್ಬ ಮುಖಂಡ ಕಾಶಿ, ‘ಶ್ರೀಶೈಲ ಮಲ್ಲಿಕಾರ್ಜುನನ ಪರಮ ಭಕ್ತನಾಗಿ, ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಅತ್ಯಂತ ಎತ್ತರದ ಶೂನ್ಯ ಸಿಂಹಾಸನದ ಅಧ್ಯಕ್ಷರಾಗಿದ್ದ ಸೊನ್ನಲಗಿ ಸಿದ್ಧರಾಮೇಶ್ವರರು, 12ನೇ ಶತಮಾನದ ಶರಣ ಚಳುವಳಿಯ ಪ್ರಮುಖರು. ಇಂತಹವರು ನಮ್ಮ ಕುಲಗುರುಗಳು ಎಂಬುದೇ ನಾವೆಲ್ಲರೂ ಹೆಮ್ಮೆ ಪಡುವ ವಿಚಾರ’ ಎಂದು ತಿಳಿಸಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಂಜುನಾಥ್, ‘12ನೇ ಶತಮಾನದಲ್ಲಿ ಜಾತಿಯ ತಾರತಮ್ಯ ಕುರಿತು ಶಿವಯೋಗಿ ಸಿದ್ಧರಾಮೇಶ್ವರರು ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಸಮಾಜದ ಪರಿವರ್ತನೆಗಾಗಿ ಹಗಲಿರುಳು ಶ್ರಮಿಸಿ, ಎಲ್ಲಾ ಸಮಾಜಗಳ ಒಳಿತಿಗಾಗಿ ದುಡಿದವರು. ಅವರ ತತ್ವ, ಸಿದ್ಧಾಂತಗಳನ್ನು ಈಗಿನ ಯುವಜನತೆ ಮೈಗೂಡಿಸಿಕೊಂಡು ಕಾರ್ಯಪ್ರವೃತ್ತರಾದರೆ ಜಯಂತಿ ಆಚರಣೆ ಅರ್ಥಪೂರ್ಣವಾಗಲಿದೆ’ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ಲೋಕ ಕಲ್ಯಾಣಕ್ಕಾಗಿ ಕೆರೆ, ಕಟ್ಟೆಗಳನ್ನು ಕಟ್ಟಿದ ಸಿದ್ಧರಾಮೇಶ್ವರರು ನಿಜವಾದ ಅರ್ಥದಲ್ಲಿ ಕರ್ಮಯೋಗಿ, ಜ್ಞಾನಯೋಗಿಯಾಗಿದ್ದರು. ಜನರ ಅವಶ್ಯಕತೆ ತಿಳಿದು, ಸಕಲ ಜೀವರಾಶಿಗಳಿಗೂ ಅತಿ ಅಗತ್ಯವೆನಿಸುವ ಜೀವ ಜಲ ಸಂಗ್ರಹಿಸಲು ನಾಡಿನಾದ್ಯಂತ ಸಾವಿರಾರು ಕೆರೆಗಳನ್ನು ಕಟ್ಟಿಸಿದ್ದರು’ ಎಂದು ಸ್ಮರಿಸಿದರು.

ವೈಜ್ಞಾನಿಕತೆಗೆ ಮನುಷ್ಯ ತೆರೆದುಕೊಳ್ಳುವ ಮೊದಲೇ ಸಿದ್ದರಾಮೇಶ್ವರರು ನಿರ್ಮಿಸಿದ ಕೆರೆ ಕಟ್ಟೆಗಳು ಇಂದಿನ ತಂತ್ರಜ್ಞಾನಕ್ಕೆ ಸವಾಲಾಗಿ ನಿಂತಿವೆ. ಸರ್ವರಿಗೂ ಸಮಪಾಲು ಎಂಬಂತೆ ತಾವು ಕಟ್ಟಿದ ಕೆರೆ ಕಟ್ಟೆಗಳಲ್ಲಿ ಎಲ್ಲ ವರ್ಗದವರು ನೀರನ್ನು ಸಮಪಾಲು ಪಡೆಯುವಂತಹ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಎಲ್ಲರನ್ನು ಜೊತೆಯಾಗಿ ಕರೆದುಕೊಂಡು ಹೋಗುವ ಕಾಯಕ ಯೋಗಿಗಳ ಪ್ರತಿನಿಧಿಯಾಗಿ ಕಲ್ಯಾಣದ ಕ್ರಾಂತಿಯಲ್ಲಿ ಕಾಣುತ್ತಾರೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಬೋವಿ ಸಮಾಜದ ಕಾರ್ಯದರ್ಶಿ ವೆಂಕಟಸ್ವಾಮಿ, ಮಹಾನಗರ ಪಾಲಿಕೆ ಸದಸ್ಯ ಎಸ್.ಮಂಜುನಾಥ್, ಮಾಜಿ ಸದಸ್ಯ ವಿಶ್ವನಾಥ್, ಒಸಿಸಿಐ ಜಿಲ್ಲಾಧ್ಯಕ್ಷ ಪುರುಷೋತ್ತಮ್, ಬೋವಿ ಸಮಾಜದ ಮುಖಂಡರಾದ ವೆಂಕಟೇಶ್, ಗಿರಿಯಪ್ಪ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT