ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥ ಸ್ಥಿತಿಯಲ್ಲಿ ಸಿದ್ಧಿ ವಿನಾಯಕ ಮಾರುಕಟ್ಟೆ

Last Updated 12 ಆಗಸ್ಟ್ 2021, 7:30 IST
ಅಕ್ಷರ ಗಾತ್ರ

ತುಮಕೂರು: ಒಂದು ಕಾಲದಲ್ಲಿ ನಗರದ ಜನರಿಗೆ ಹಣ್ಣು, ತರಕಾರಿ, ಹೂವು, ಇತರೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದ ಸಿದ್ಧಿ ವಿನಾಯಕ ಮಾರುಕಟ್ಟೆ ಈಗ ಅನಾಥ ಸ್ಥಿತಿ ತಲುಪಿದೆ.

ಈ ಸ್ಥಳವನ್ನು ಏನು ಮಾಡಬೇಕು ಎಂಬ ಚಿಂತೆ ಮಹಾನಗರ ಪಾಲಿಕೆ, ಎಪಿಎಂಸಿಯನ್ನು ಕಾಡುತ್ತಿದೆ. ಗಿಡ ಗಂಟಿಗಳು ಬೆಳೆದು ಇಡೀ ಜಾಗ ಕಲುಷಿತಗೊಂಡಿದ್ದು, ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಮಂಡಿಪೇಟೆ ಸುತ್ತಮುತ್ತಲಿನ ಜನರು ಶೌಚಾಲಯವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಾಗ ದಶಕದಿಂದ ಜನರ ಅನುಕೂಲಕ್ಕೆ ಬಳಕೆಯಾಗದೆ ಖಾಲಿ ಬಿದ್ದಿದೆ.

ಅಂತರಸನಹಳ್ಳಿಯಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೂ ಮುನ್ನ ಇಲ್ಲಿ ಹಣ್ಣು, ತರಕಾರಿ ಮಾರಾಟ ಮಾಡಲಾಗುತಿತ್ತು. ನಗರಕ್ಕೆ ಇಲ್ಲಿಂದಲೇ ತರಕಾರಿ ಪೂರೈಕೆ ಆಗುತ್ತಿತ್ತು. ಚಿಲ್ಲರೆ, ಸಗಟು ವ್ಯಾಪಾರ ಜೋರಾಗಿತ್ತು. ಇಡೀ ಪ್ರದೇಶ ಜನಜಂಗುಳಿಯಿಂದ ತುಂಬಿರುತಿತ್ತು. ಮಾರುಕಟ್ಟೆಯನ್ನು ಅಂತರಸನಹಳ್ಳಿಗೆ ಸ್ಥಳಾಂತರಿಸಿದ ನಂತರ ಯಾವುದೇ ಚಟುವಟಿಕೆಗಳು ನಡೆಯದೆ ಪಾಳು ಬಿದ್ದಿದೆ.

ತುಮಕೂರು ಮಹಾನಗರ ಪಾಲಿಕೆಯಾಗಿ ದಶಕ ಕಳೆದಿದ್ದು, ನಗರ ಪ್ರದೇಶ ಬೆಳೆಯುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗಿದೆ. ಈಗ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿದ್ದು, ಅಭಿವೃದ್ಧಿಯಲ್ಲಿ ಮತ್ತಷ್ಟು ವೇಗ ಪಡೆದುಕೊಂಡಿದೆ. ಬೆಂಗಳೂರಿಗೆ ಕೂಗಳತೆ ದೂರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ವಸಂತನರಸಾಪುರ ಕೈಗಾರಿಕಾ ಪ್ರದೇಶ ತೀವ್ರ ಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಇದರಿಂದಾಗಿ ನಗರ ಪ್ರದೇಶ ವಿಸ್ತಾರವನ್ನು ಮತ್ತಷ್ಟು ಹೆಚ್ಚಿಸಿದೆ. ಎಲ್ಲಾ ರೀತಿಯಲ್ಲೂ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದೆ.

ನಗರ ಬೆಳೆದಂತೆಜನ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದ್ದು, ಇಡೀ ನಗರಕ್ಕೆ ಅಂತರಸನಹಳ್ಳಿ ಮಾರುಕಟ್ಟೆ ಬಿಟ್ಟರೆ ಮತ್ತೊಂದು ತರಕಾರಿ ಮಾರುಕಟ್ಟೆ ಇಲ್ಲವಾಗಿದೆ. ಹೊರ ವಲಯದಲ್ಲಿ ಇರುವುದರಿಂದ ಇತರ ಭಾಗಗಳ ಜನರು ಅಲ್ಲಿಗೆ ಹೋಗುವುದು ತುಸು ಕಷ್ಟಕರವಾಗಿದೆ. ಕಡಿಮೆ ಬೆಲೆಗೆ ಹಣ್ಣು, ತರಕಾರಿ ಕೊಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ವರ್ತಕರು ಮಾತ್ರ ತೆರಳಿ ತರಕಾರಿ ತಂದು ಚಿಲ್ಲರೆಯಾಗಿ ಮಾರಾಟ ಮಾಡುತ್ತಾರೆ. ಅಂತರಸನಹಳ್ಳಿ ಮಾರು
ಕಟ್ಟೆಗೆ ಹೋಲಿಸಿದರೆ ಚಿಲ್ಲರೆಯಾಗಿ ಖರೀದಿಸುವಾಗ ಬೆಲೆ ದುಪ್ಪಟ್ಟಾಗಿ
ರುತ್ತದೆ. ಮಾರುಕಟ್ಟೆ ನಿರ್ಮಿಸಿದ್ದೇ ಸಾರ್ವಜನಿಕರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಹಣ್ಣು, ತರಕಾರಿ, ಹೂವು ಸಿಗುವಂತೆ ಮಾಡುವ ಉದ್ದೇಶದಿಂದ. ಆದರೆ ಈಗ ಹೆಚ್ಚಿನ ಜನರಿಗೆ ನೆರವಾಗುತ್ತಿಲ್ಲ.

ನಗರದ ನಾಲ್ಕು ಭಾಗಗಳಲ್ಲಿ ಹಣ್ಣು, ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಗೆ ಈವರೆಗೂ ಸ್ಪಂದನೆ ಸಿಕ್ಕಿಲ್ಲ. ಆಗಾಗ ಆಡಳಿತ ಪ್ರಭುಗಳು ನಾಲ್ಕು ದಿಕ್ಕುಗಳಲ್ಲೂ ಮಾರುಕಟ್ಟೆ ನಿರ್ಮಿಸುವುದಾಗಿ ಹೇಳುತ್ತಲೇ ಬಂದಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಇತರೆಡೆ ನಿರ್ಮಿಸುವುದು ಹೋಗಲಿ, ಸಿದ್ಧಿ ವಿನಾಯಕ ಮಾರುಕಟ್ಟೆಯನ್ನೇ ಸರಿಯಾಗಿ ಬಳಕೆ ಮಾಡಿಕೊಂಡಿದ್ದರೆ, ನಗರದ ಜನರಿಗೆ ಹೃದಯ ಭಾಗದಲ್ಲೇ ಹಣ್ಣು, ತರಕಾರಿ ಸಿಗುವಂತೆ ಮಾಡಬಹುದಿತ್ತು. ಇದರಿಂದ ಸಾರ್ವಜನಿಕರು, ವರ್ತಕರು, ರೈತರಿಗೂ ಅನುಕೂಲವಾಗುತಿತ್ತು.

ಸಾರ್ವಜನಿಕರಿಗೆ ನೆರವಾಗುವಂತಹ ಯೋಜನೆ ರೂಪಿಸಿ ಅನುಕೂಲ ಮಾಡಿಕೊಡುವ ಬದಲು ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲು ಸ್ಮಾರ್ಟ್ ಸಿಟಿಯಲ್ಲಿ ಯೋಜನೆ ರೂಪಿಸಲಾಯಿತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ನಂತರ ಯೋಜನೆ ಕೈಬಿಡಲಾಗಿದ್ದು, ದಿನಗಳು ಕಳೆದಂತೆ ಕೊಳಚೆ ಗುಂಡಿ ಸ್ವರೂಪ ಪಡೆದುಕೊಳ್ಳುತ್ತಿದೆ. ಬಹುಮಹಡಿ ವಾಹನ ನಿಲ್ದಾಣ, ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವುದನ್ನು ಜನರು ವಿರೋಧಿಸಿದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕೆಲಸ ಪೂರ್ಣಗೊಂಡರೆ ಅಲ್ಲಿ ವಾಹನ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶ ಸಿಗುತ್ತದೆ. ಇಲ್ಲಿ ಮತ್ತೆ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟರೆ ಬಳಕೆಯಾಗುವುದಿಲ್ಲ. ವಾಣಿಜ್ಯ ಮಳಿಗೆ ನಿರ್ಮಿಸುವುದರಿಂದ ಸಾಮಾನ್ಯರಿಗೆ ಯಾವುದೇ ನೆರವಾಗುವುದಿಲ್ಲ ಎಂಬುದು ವಿರೋಧಕ್ಕೆ ಪ್ರಮುಖ ಕಾರಣ.

ಸ್ಥಳೀಯ ಶಾಸಕರು, ಪಾಲಿಕೆ, ಎಪಿಎಂಸಿ ಸಮನ್ವಯದಿಂದ ಸರಿಯಾದ ನಿರ್ಧಾರ ಕೈಗೊಂಡರೆ ಈಗಲೂ ಇದಕ್ಕೆ ಕಾಯಕಲ್ಪ ಕೊಟ್ಟು ಸಾರ್ವಜನಿಕರ ಉಪಯೋಗಕ್ಕೆ ಸಮರ್ಪಿಸಬಹುದಾಗಿದೆ. ವಾಣಿಜ್ಯ ಕಟ್ಟಡದ ಜತೆಗೆ ಸ್ವಲ್ಪ ಭಾಗದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ಮಾಡಿಕೊಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ರೈತರು ತಾವು ಬೆಳೆದ ಉತ್ಪನ್ನಗಳನ್ನು ತಂದು ನೇರವಾಗಿ ಜನರಿಗೆ ಮಾರಾಟ ಮಾಡಲು ಅವಕಾಶ ಇಲ್ಲವಾಗಿದೆ. ಇದೇ ಜಾಗ– ಅವಕಾಶವನ್ನು ಬಳಸಿಕೊಂಡು ರೈತರ ಮಾರುಕಟ್ಟೆಯಾಗಿ ರೂಪಿಸಿದರೆ ಕೃಷಿಕ ವರ್ಗಕ್ಕೆ ನೆರವಾದಂತಾಗುತ್ತದೆ. ಸ್ಮಾರ್ಟ್ ಸಿಟಿ, ಮುಖ್ಯಮಂತ್ರಿಗಳ ವಿಶೇಷ ಅನುದಾನವನ್ನು ಬಳಸಿಕೊಂಡರೆ ಮತ್ತೆ ಮಾರುಕಟ್ಟೆ ನಿರ್ಮಾಣ ಮಾಡುವುದು ಕಷ್ಟಕರವಾಗಲಾರದು.

ಸಾರ್ವಜನಿಕರು, ರೈತರಿಗೆ ಸಹಕಾರಿಯಾಗುವ ರೀತಿಯಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂಬುದು ನಗರದ ಜನರ ಒತ್ತಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT