ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದಿಲ್ಲದೆ ದಾಖಲೆ ಮಾಡುತ್ತಿದೆ ದತ್ತುಕೇಂದ್ರ

ಕುಣಿಗಲ್‌: ವಾಣಿಗೆರೆಯ ಆಶ್ರಯ ತಾಣಕ್ಕೀಗ ಎರಡು ವರ್ಷದ ಸಂಭ್ರಮ
Last Updated 7 ಡಿಸೆಂಬರ್ 2020, 5:16 IST
ಅಕ್ಷರ ಗಾತ್ರ

ಕುಣಿಗಲ್: ಅನಾಥ ಮಕ್ಕಳನ್ನು ರಕ್ಷಿಸಿ, ಪಾಲನೆ– ಪೋಷಣೆ ಮಾಡುತ್ತಿರುವ ತಾಲ್ಲೂಕಿನ ವಾಣಿಗೆರೆಯ ದಯಾಕಿರಣ ದತ್ತುಕೇಂದ್ರ ಆರಂಭವಾದ ಎರಡೇ ವರ್ಷದಲ್ಲಿ ಅತಿಹೆಚ್ಚು ಪರಿತ್ಯಕ್ತ ಶಿಶುಗಳ ರಕ್ಷಣೆ, ಪೋಷಣೆ, ದತ್ತು ನೀಡಿಕೆಯಲ್ಲಿ ರಾಜ್ಯಕ್ಕೆ ಪ್ರಥಮಸ್ಥಾನ ಪಡೆದಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವ ಹಿಸುತ್ತಿರುವ ದಯಾಕಿರಣ ಆರಂಭಕ್ಕೂ ಮುನ್ನಾ ಅನಾಥ ಶಿಶುಗಳನ್ನು ರಾಮನಗರ ದತ್ತು ಕೇಂದ್ರಕ್ಕೆ ಕಳುಹಿಸಲಾಗುತ್ತಿತ್ತು. ಮಕ್ಕಳನ್ನು ದತ್ತು ಪಡೆಯಲು ಬಯಸುವ ಜಿಲ್ಲೆಯ ಪೋಷಕರು ರಾಮನಗರ, ಹಾಸನ ಮತ್ತು ಬೆಂಗಳೂರು ಕೇಂದ್ರಗಳಿಗೆ ಮನವಿ ಸಲ್ಲಿಸಬೇಕಾಗಿತ್ತು. ಈಗ ಜಿಲ್ಲೆಯಲ್ಲೇ ಅದು ಸಾಧ್ಯವಾಗಿದೆ. ಇದಕ್ಕೆ ಪ್ರಮುಖ ಕಾರಣಕರ್ತರು ಜಿಲ್ಲಾ ಮಕ್ಕಳ ಸಂಕ್ಷಣಾಧಿಕಾರಿ ವಾಸಂತಿ ಉಪ್ಪಾರ್.

ದಯಾಕಿರಣ ದತ್ತುಕೇಂದ್ರದಲ್ಲಿ ಎರಡು ವರ್ಷದಲ್ಲಿ 61 ನವಜಾತ ಶಿಶುಗಳನ್ನು ಸಂರಕ್ಷಿಸಿ, ಪೋಷಿಸಲಾಗಿದೆ. 34 ಮಕ್ಕಳನ್ನು ಮಕ್ಕಳಿಲ್ಲದ ದಂಪತಿಗೆ ದತ್ತು ನೀಡಲಾಗಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಈ ಸಂಸ್ಥೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 52 ಪೋಷಕರು ನೋಂದಣಿ ಮಾಡಿಸಿಕೊಂಡು ಮಕ್ಕಳಿಗಾಗಿ ಕಾಯತ್ತಿದ್ದಾರೆ.

ಹುಟ್ಟುತ್ತಲೇ ಪೋಷಕರಿಗೆ ಬೇಡವಾಗಿ, ಪೊದೆಗಳಲ್ಲಿ, ಚರಂಡಿಯ ಮಗ್ಗುಲಲ್ಲಿ, ಬೇಲಿಯ ಮುಳ್ಳುಗಿಡದಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದ ಮಕ್ಕಳು ಈ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಕೇಂದ್ರದಲ್ಲಿನ ಒಂದೊಂದು ಮಗುವಿನ ಹಿಂದೆಯೂ ಮನಕಲಕುವ ಕತೆಗಳಿವೆ. ತುಮಕೂರಿನ ಆರ್‌ಟಿಒ ಕಚೇರಿ ದೇವಾಲಯದ ಮುಂದೆ ಬಿದ್ದಿದ್ದ ಆ ಕಂದಮ್ಮನನ್ನು ಕೆಂಪಿರುವೆಗಳು ಮುತ್ತಿದ್ದವು. ದಾಬಸ್‌ಪೇಟೆಯ ಕೈಗಾರಿಕಾ ವಲಯದ ಶೆಡ್ ಮುಂಭಾಗದ ಕಾರ್ಖಾನೆ ತ್ಯಾಜ್ಯದ ಡಬ್ಬದಲ್ಲಿ ಬಿದ್ದು, ಉಸಿರಾಡಲಾಗದೆ ಅರಚುತ್ತಿದ್ದ ಮಗುವಿಗೆ ದಯಾಕಿರಣ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

ರೈಲ್ವೆಹಳಿ ಬಳಿ ದೊರೆತ ಗಂಡುಶಿಶು ರಾತ್ರಿಪೂರ್ತಿ ಹುಳುಗಳಿಂದ ಕಚ್ಚಿಸಿಕೊಂಡು ತೀವ್ರವಾಗಿ ಗಾಯಗೊಂಡಿತ್ತು. 15 ದಿನಗಳ ಚಿಕಿತ್ಸೆ ಬಳಿಕ ಮಗು ಚೇತರಿಸಿಕೊಂಡು ಸದೃಢವಾಗಿದೆ. 20 ಅಡಿ ಆಳದ ಬಾವಿಯಲ್ಲಿ ಬಿಸಾಕಿದ್ದ ಗಂಡು ಮಗು, ಶೌಚಾಲಯದಲ್ಲಿ ಸಿಕ್ಕ ಪುಟ್ಟ ಕಂದಮ್ಮ ಈಗ ಆರೋಗ್ಯವಂತವಾಗಿ ಬೆಳೆಯುತ್ತಿವೆ.

ಮಹಿಳೆಯೊಬ್ಬರು ಒಂದು ತಿಂಗಳ ಗರ್ಭಿಣಿ ಇರುವಾಗಲೇ ಆಕೆಯ ಗಂಡ ಮೃತಪಟ್ಟಿದ್ದರು. ಭವಿಷ್ಯದ ದಿನಗಳನ್ನು ನೆನೆದು ಆತಂಕಗೊಂಡು ಆಕೆ ನಡುದಾರಿಯಲ್ಲೇ ದಯಾಕಿರಣದ ವ್ಯವಸ್ಥಾಪಕ ರಮೇಶ್ ಕೈಗಿಟ್ಟು ಹೋಗಿದ್ದರು. 44 ವರ್ಷದ ಮಹಿಳೆಗೆ ವಯಸ್ಸಿಗೆ ಬಂದ ಇಬ್ಬರು ಹೆಣ್ಣುಮಕ್ಕಳಿದ್ದರು. 16 ವರ್ಷದ ಬಳಿಕ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಹಿರಿಯ ಪುತ್ರಿಯರ ಭವಿಷ್ಯದ ಮೇಲೆ ಬೀರುವ ಪರಿಣಾಮಕ್ಕಂಜಿ ಮಗುವನ್ನು ಕೇಂದ್ರದ ವಶಕ್ಕೆ ನೀಡಿದ ಘಟನೆ ಮರೆಯಲಾಗುವುದಿಲ್ಲ ಎಂದು ವ್ಯವಸ್ಥಾಪಕ ವಿವರಿಸುತ್ತಾರೆ.

ದಯಾಕಿರಣ ಸಂಸ್ಥೆಯಿಂದ ರಾಜ್ಯ ಮಾತ್ರವಲ್ಲದೆ ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ, ಕೇರಳ, ಪಶ್ಚಿಮಬಂಗಾಳದಿಂದಲೂ ಪೋಷಕರು ಬಂದು ಮಕ್ಕಳನ್ನು ದತ್ತು ಪಡೆದಿದ್ದಾರೆ. ವಿದೇಶಿ ದಂಪತಿಗಳು ಮಕ್ಕಳನ್ನು ದತ್ತು ಪಡೆಯಲು ಉತ್ಸುಕರಾಗಿದ್ದು, ನೋಂದಣಿಯನ್ನೂ ಮಾಡಿಸಿಕೊಂಡಿದ್ದಾರೆ. ಅಂಗವಿಕಲ ಮಕ್ಕಳಿಗೂ ಆದ್ಯತೆ ನೀಡಿದ್ದಾರೆ. ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಮಗುವನ್ನು ಕರೆದೊಯ್ಯಲಿದ್ದಾರೆ. ಒಂದು ಮಗು ಈಗಾಗಲೇ ವಿದೇಶಿ ಪೋಷಕರ ಮಡಿಲು ಸೇರಿವೆ.

ಉಚಿತ ವೈದ್ಯಕೀಯ ಸೇವೆ: ಮಕ್ಕಳ ತಜ್ಞ ಮಂಜುನಾಥ್ ದಯಾಕಿರಣ ದತ್ತು ಕೇಂದ್ರದ ಮಕ್ಕಳಿಗೆ ಚಿಕಿತ್ಸೆ ಅಗತ್ಯವಾದಗಲೆಲ್ಲಾ ವಾಣಿಗೆರೆಗೆ ಧಾವಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT