ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾದಲ್ಲಿ ಸತ್ಯನಾರಾಯಣ ಸ್ಥಾನ ತುಂಬುವವರು ಯಾರು? ಜೆಡಿಎಸ್‌ನಲ್ಲಿ ಕುತೂಹಲದ ಚರ್ಚೆ

ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗುವರು ಎಂಬ ಕುತೂಹಲ
Last Updated 29 ಆಗಸ್ಟ್ 2020, 2:43 IST
ಅಕ್ಷರ ಗಾತ್ರ

ಶಿರಾ: ಶಾಸಕರಾಗಿದ್ದ ಬಿ.ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಸ್ಥಾನವನ್ನು ಜೆಡಿಎಸ್ ಪಕ್ಷದಲ್ಲಿ ತುಂಬುವವರು ಯಾರು ಎನ್ನುವ ಪ್ರಶ್ನೆ ಈಗ ತಾಲ್ಲೂಕಿನ ಜನರಲ್ಲಿ ಮೂಡಿದೆ.

ಮುಂದಿನ ದಿನಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಜೆಡಿಎಸ್‌ನಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. 1989ರಿಂದ 2018ರ ವರೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಹಾಗೂ ಜನತಾದಳದಿಂದ ಸತತವಾಗಿ 7 ಬಾರಿಸ್ಪರ್ಧಿಸುವ ಮೂಲಕ ಬಿ.ಸತ್ಯನಾರಾಯಣ ಪ್ರಶ್ನಾತೀತ ನಾಯಕರಾಗಿದ್ದರು. ಆದರೆ,
ಈಗ ಅವರಿಲ್ಲದೆ ಚುನಾವಣೆ ನಡೆಯುತ್ತಿದೆ.

ಅಧಿಕಾರದ ಅವಧಿಯನ್ನು ಪೂರ್ಣಗೊಳಿಸದ ಕಾರಣ ಸತ್ಯನಾರಾಯಣ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕು ಎನ್ನುವ ಕೂಗು ಒಂದು ಕಡೆ ಕೇಳಿ ಬರುತ್ತಿದೆ. ಮತ್ತೊಂದು ಕಡೆ 7 ಬಾರಿ ಅವಕಾಶ ನೀಡಲಾಗಿದೆ. 3 ಬಾರಿ ಶಾಸಕರಾಗಿ, 2 ಬಾರಿ ಸಚಿವರಾಗಿ ಅಧಿಕಾರ ಅನುಭವಿಸಿದ್ದಾರೆ. ಆದ್ದರಿಂದ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆಯೂ ವ್ಯಕ್ತವಾಗಿದೆ.

ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಅಥವಾ ಪುತ್ರ ಬಿ.ಎಸ್.ಸತ್ಯಪ್ರಕಾಶ್ ಅವರಿಗೆ ಟಿಕೆಟ್ ನೀಡಿದರೆ ಅನುಕಂಪದ ಅಲೆಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಬಹುದು ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಆರ್.ಉಮೇಶ್, ಮುಖಂಡ ಕಲ್ಕೆರೆ ರವಿಕುಮಾರ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜತೆಗೆ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಪುತ್ರ ಸಿ.ಎಂ.ರಾಜೇಶ್ ಗೌಡ ಹೆಸರು ಸಹ ಮುನ್ನೆಲೆಗೆ ಬಂದಿದೆ. ಅವರು ಇದುವರೆಗೂ ಯಾವುದೇ ಪಕ್ಷದ ಜತೆ ಗುರುತಿಸಿಕೊಳ್ಳದೆ 3 ವರ್ಷದಿಂದ ತಾಲ್ಲೂಕಿನಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಅವರು ಕಾಂಗ್ರೆಸ್ ಅಥವಾ ಜೆಡಿಎಸ್‌ನಿಂದ ಟಿಕೆಟ್ ಕೇಳಬಹುದು ಎಂದು ಹೇಳಲಾಗುತ್ತಿದೆ.

‘ಸತ್ಯಣ್ಣ ವಿಧಾನಸಭೆ ಚುನಾವಣೆಯಲ್ಲಿ ಸೋತು 10 ವರ್ಷ ಮನೆಯಲ್ಲಿದ್ದ ಸಮಯದಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್ ಪಕ್ಷದ ಬಾಗಿಲು ತೆರೆದುಕೊಂಡು ಸ್ವಂತ ಹಣ ಖರ್ಚುಮಾಡಿ ಪಕ್ಷ ಸಂಘಟಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಪಕ್ಷಕ್ಕೆ ಆಸರೆಯಾಗಿದ್ದು, ತಳಮಟ್ಟದ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಅವರಿಗೆ ಟಿಕೆಟ್ ನೀಡಿದರೆ ಉತ್ತಮ ವಾತಾವರಣ ನಿರ್ಮಾಣವಾಗಿ ಅನುಕೂಲವಾಗಲಿದೆ’ ಎನ್ನುವ ಮಾತುಗಳು ಪಕ್ಷದ ಬಳಗದಲ್ಲಿ ಕೇಳಿಬರುತ್ತಿವೆ.

ಸಿ.ಆರ್.ಉಮೇಶ್ ಈಗಾಗಲೇ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಅಧಿಕಾರ ನಡೆಸಿದ ಅನುಭವ ಇರುವುದರಿಂದ ಟಿಕೆಟ್ ನೀಡಬೇಕು ಎಂದು ಕೆಲವರು ವಾದಿಸುತ್ತಿದ್ದಾರೆ. ಇನ್ನು ಕಲ್ಕೆರೆ ರವಿಕುಮಾರ್ ಕೊರೊನಾ ಸಮಯದಲ್ಲಿ ಪಕ್ಷಾತೀತವಾಗಿ ಪಡಿತರ ಕಿಟ್ ವಿತರಣೆ ಮಾಡಿದ್ದಾರೆ. ಸಮಾಜ ಸೇವೆಯಲ್ಲಿ ಕಳೆದ 15 ವರ್ಷದಿಂದ ತೊಡಗಿಸಿಕೊಂಡಿದ್ದು, ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿರುವುದರಿಂದ ಅವಕಾಶ ನೀಡಿದರೆ ಅಹಿಂದ
ಬೆಂಬಲ ದೊರೆಯಲಿದೆ ಎಂಬ ಚರ್ಚೆ ನಡೆದಿದೆ.

ಒಟ್ಟಿನಲ್ಲಿ ಜೆಡಿಎಸ್ ಟಿಕೆಟ್‌ ಯಾರಿಗೆ ಎನ್ನುವ ಕುತೂಹಲ ಮೂಡಿದ್ದು, ವರಿಷ್ಠ ಎಚ್.ಡಿ.ದೇವೇಗೌಡ ಕೃಪಾಶೀರ್ವಾದ ಯಾರಿಗೆ ದೊರೆಯಲಿದೆ ಎಂಬ ಕುತೂಹಲ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT