ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಲಂ ಜನರ ಬೇಡಿಕೆ: ಮನವಿ ಸಲ್ಲಿಕೆ

Published 11 ಜುಲೈ 2024, 15:07 IST
Last Updated 11 ಜುಲೈ 2024, 15:07 IST
ಅಕ್ಷರ ಗಾತ್ರ

ತುಮಕೂರು: ನಗರದ ಸ್ಲಂ ನಿವಾಸಿಗಳ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಮೂಲ ಸೌಕರ್ಯ ಹಾಗೂ ಡೆಂಗಿ ನಿಯಂತ್ರಣಕ್ಕೆ ಆಗ್ರಹಿಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ನಿಯೋಗ ಮನವಿ ಸಲ್ಲಿಸಿತು.

ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ‘ನಗರದ ಅಭಿವೃದ್ಧಿಗೆ ಗರಿಷ್ಠ ಮಾನವ ಸೇವೆ ನೀಡುತ್ತಿರುವ ಸ್ಲಂ ನಿವಾಸಿಗಳಿಗೆ ಕನಿಷ್ಠ ಸೌಲಭ್ಯ ನೀಡಿ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕೊಳೆಗೇರಿಗಳಿಗೆ ಅಗತ್ಯ ಸೌಕರ್ಯ ಒದಗಿಸಲು ಜನ ಸಂಖ್ಯೆ ಆಧಾರದಲ್ಲಿ ಬಜೆಟ್‍ನಲ್ಲಿ ಹಣ ಮೀಸಲಿಡಬೇಕು. ಸರ್ಕಾರ ಗುರುತಿಸಿರುವ ವಿಶೇಷ ವರ್ಗಗಳಿಗೆ ವಸತಿ ನೀಡಲು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಆಯುಕ್ತೆ ಬಿ.ವಿ.ಅಶ್ವಿಜ, ‘ವಿಶೇಷ ವರ್ಗಗಳಲ್ಲಿ 400 ಕುಟುಂಬಗಳ ಪೈಕಿ 240 ಅರ್ಹರನ್ನು ಗುರುತಿಸಿದ್ದು, ಆಶ್ರಯ ಸಮಿತಿಯಿಂದ ಅನುಮೋದನೆ ಪಡೆದು ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಲಾಗಿದೆ. ಮರಳೇನಹಳ್ಳಿ, ಸತ್ಯಮಂಗಲ ಬಳಿ 4 ಎಕರೆ ಭೂಮಿಯಲ್ಲಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಅಮೃತ್ ಯೋಜನೆಯಲ್ಲಿ ಎಸ್.ಎನ್.ಪಾಳ್ಯ, ಭಾರತಿ ನಗರದಲ್ಲಿ ಮಳೆ ನೀರು ತಡೆಗೋಡೆ ನಿರ್ಮಿಸಲಾಗುವುದು. ಕೊಳೆಗೇರಿಗಳ ಅಭಿವೃದ್ಧಿಗೆ ನೀಡಿರುವ ₹20 ಲಕ್ಷ ಸೆಸ್‍ ಹಣದಲ್ಲಿ ಕುಡಿಯುವ ನೀರು, ಬೀದಿ ದೀಪ, ತಾತ್ಕಾಲಿಕವಾಗಿ ಮಹಿಳಾ ಶೌಚಾಲಯ ನಿರ್ಮಿಸಿಕೊಡಲಾಗುವುದು. ಡೆಂಗಿ ಹರಡದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೋಡಿಹಳ್ಳದ 33 ಕುಟುಂಬ, ಇಸ್ಮಾಯಿಲ್ ನಗರ ಹಂದಿಜೋಗಿ ಸಮುದಾಯದ 40 ಕುಟುಂಬಗಳಿಗೆ ಹೊನ್ನೇನಹಳ್ಳಿ, ಅಣ್ಣೇನಹಳ್ಳಿಯಲ್ಲಿ ಪುನರ್ವಸತಿ ಕಲ್ಪಿಸಲಾಗುವುದು. ಅರಳೀಮರದ ಪಾಳ್ಯ ಕಾಲೊನಿ, ಎಸ್‍.ಎನ್.ಪಾಳ್ಯ, ಕ್ಯಾತ್ಸಂದ್ರದ ಎಳ್ಳರಬಂಡೆ ಸ್ಲಂಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಲ್ಲಿ ನೀರಿನ ಘಟಕ ಸ್ಥಾಪಿಸಲಾಗುವುದು. ದಿಬ್ಬೂರು ದೇವರಾಜ ಅರಸು ಬಡಾವಣೆಗೆ ಸೌಲಭ್ಯ ಕಲ್ಪಿಸಿ ಪಾಲಿಕೆಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಉಪ ಆಯುಕ್ತರಾದ ರುದ್ರಮುನಿ, ಗಿರೀಶ್, ಕೌನ್ಸಿಲ್ ಕಾರ್ಯದರ್ಶಿ ನಜ್ಮಾ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಎಂಜಿನಿಯರ್ ಚೇತನ್‍ಕುಮಾರ್, ಸಮಿತಿ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ಜಾಬೀರ್‌ ಖಾನ್, ಶಾರದಮ್ಮ, ಗಂಗಮ್ಮ, ತಿರುಮಲಯ್ಯ, ಕೃಷ್ಣಮೂರ್ತಿ, ಗಣೇಶ್, ಅನ್ನಪೂರ್ಣಮ್ಮ, ಧನಂಜಯ್, ಮಂಗಳಮ್ಮ, ಪೂರ್ಣಿಮಾ, ಸುಧಾ, ಟಿ.ಆರ್.ಮೋಹನ್ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT