ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಗಂಟೆ ಲೆಕ್ಕದಲ್ಲಿ ಶುಲ್ಕ, ಹಣವಿದ್ದರೆ ಮಾತ್ರ ಕ್ರೀಡಾಂಗಣಕ್ಕೆ ಬನ್ನಿ

ಕ್ರೀಡಾಪಟುಗಳು, ಕ್ರೀಡಾ ಪ್ರೇಮಿಗಳ ತೀವ್ರ ವಿರೋಧ
Last Updated 20 ಆಗಸ್ಟ್ 2022, 4:53 IST
ಅಕ್ಷರ ಗಾತ್ರ

ತುಮಕೂರು: ಸ್ಮಾರ್ಟ್ ಸಿಟಿ ವತಿಯಿಂದ ನಗರದಲ್ಲಿ ನಿರ್ಮಿಸಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣಕ್ಕೆ ಹಣವಿದ್ದರಷ್ಟೇ ಪ್ರವೇಶ! ಅದೂ ಗಂಟೆಗಳ ಲೆಕ್ಕದಲ್ಲಿ ಶುಲ್ಕ ನೀಡಲು ಸಿದ್ಧರಿದ್ದರಷ್ಟೇ ಪ್ರವೇಶ ನೀಡಲಾಗುತ್ತದೆ.

ಕ್ರೀಡಾಂಗಣ ನಿರ್ಮಿಸಿರುವುದು ನಮ್ಮಗಳ ತೆರಿಗೆ ಹಣದಲ್ಲಿ. ಈಗ ನೋಡಿದರೆ ಬಳಕೆ ಶುಲ್ಕ (ಪೇ ಅಂಡ್ ಯೂಸ್) ವಿಧಿಸಲಾಗುತ್ತಿದೆ. ಈ ಸರ್ಕಾರಕ್ರೀಡಾ ಕ್ಷೇತ್ರದಿಂದಲೂ ಆದಾಯ ಮಾಡಿಕೊಳ್ಳಬೇಕೆ? ಇದು ಆದಾಯ ತಂದುಕೊಡುವ ಇಲಾಖೆಯೆ? ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ, ಅಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ, ದೇಶದ ಹಿರಿಮೆ ಸಾರುವಂತೆ ಮಾಡಬೇಕಾದ ಸರ್ಕಾರ ಹಣ ವಸೂಲಿ ಹೆಸರಿನಲ್ಲಿ ಕ್ರೀಡಾ ಕ್ಷೇತ್ರವನ್ನೇ ಮಾರಾಟಕ್ಕೆ ಇಟ್ಟಿದೆ ಎಂಬ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಗಂಟೆಗಳ ಲೆಕ್ಕದಲ್ಲಿ ಬಳಕೆ ಶುಲ್ಕ ವಿಧಿಸುವುದಕ್ಕೆ ಕ್ರೀಡಾಪಟುಗಳು, ಕ್ರೀಡಾ ಪ್ರೇಮಿಗಳು, ಕ್ರೀಡಾ ತರಬೇತುದಾರರು, ಸಾರ್ವಜನಿಕರು, ಸಂಘ ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಶುಕ್ರವಾರ ಬೆಳಿಗ್ಗೆ ಎಂ.ಜಿ.ಕ್ರೀಡಾಂಗಣದಲ್ಲಿ ಸಭೆ ನಡೆಸಿ ‘ಕ್ರೀಡಾಂಗಣ ಬಳಕೆ ಶುಲ್ಕ ವಿಧಿಸಬಾರದು. ಸರ್ಕಾರ ತನ್ನ ಆದೇಶ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್, ‘ಪ್ರಸ್ತುತ ಕ್ರೀಡಾ ಚಟುವಟಿಕೆಗಳೇ ಕಡಿಮೆಯಾಗಿ, ಪ್ರೋತ್ಸಾಹ ನೀಡುವುದು ಕಡಿಮೆಯಾಗಿದೆ. ಇಂತಹ ಸಮಯದಲ್ಲಿ ಕ್ರೀಡೆಗೆ ತಗುಲುವ ವೆಚ್ಚ ಭರಿಸುವುದು ದೊಡ್ಡ ಹೊರೆಯಾಗಲಿದೆ. ನಗರದಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಎಂ.ಜಿ.ಕ್ರೀಡಾಂಗಣ ಬಿಟ್ಟರೆ ಸ್ಥಳಾವಕಾಶ ಇಲ್ಲವಾಗಿದೆ. ಇಲ್ಲೂ ಶುಲ್ಕ ವಿಧಿಸಿದರೆ ಅಭ್ಯಾಸದಿಂದ ದೂರ ಉಳಿಯಲಿದ್ದಾರೆ. ಕೊನೆಗೆ ಕ್ರೀಡಾ ಚಟುವಟಿಕೆಗಳೇ ಸ್ಥಗಿತಗೊಳ್ಳುತ್ತವೆ. ಶುಲ್ಕ ವಿಧಿಸುವ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹರಾಜು, ‘ಸರ್ಕಾರಕ್ಕೆ ಒಬ್ಬ ಕ್ರೀಡಾಪಟುವನ್ನು ಹುಟ್ಟು ಹಾಕಲು ಸಾಧ್ಯವಾಗಿಲ್ಲ. ಆದರೆ ಈಗ ಶುಲ್ಕ ವಿಧಿಸಿ ಇನ್ನಷ್ಟು ವಿಮುಖರಾಗುವಂತೆ ಮಾಡುತ್ತಿದೆ’ ಎಂದರು.

ಹಳೆಯ ಕ್ರೀಡಾಂಗಣ ಒಡೆದು ಹಾಕಿದ ಸಮಯದಲ್ಲಿ ಇಲ್ಲಿ ಅಭ್ಯಾಸ ಮಾಡುತ್ತಿದ್ದ ಕ್ರೀಡಾಪಟುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ನಾಲ್ಕು ವರ್ಷಗಳ ಕಾಲ ಅಭ್ಯಾಸಕ್ಕಾಗಿ ಊರೆಲ್ಲಾ ಅಲೆಯುವಂತಾಯಿತು. ಸ್ಟೇಡಿಯಂ ನಿರ್ಮಾಣವೂ ವೈಜ್ಞಾನಿಕವಾಗಿಲ್ಲ. ಬೇಕಾಬಿಟ್ಟಿ ಕಟ್ಟಲಾಗಿದೆ. ಇದರ ನಡುವೆ ಶುಲ್ಕ ನಿಗದಿಮಾಡಿ ಕ್ರೀಡಾಪಟುಗಳು ಸ್ಟೇಡಿಯಂ ಹತ್ತಿರ ಸುಳಿಯದಂತೆ ಮಾಡಲು ಮುಂದಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ಕ್ರೀಡಾಪಟು ಟಿ.ಕೆ.ಆನಂದ, ‘ಅಭ್ಯಾಸ ನಡೆಸುವುದು ಎಷ್ಟು ಕಷ್ಟ ಎಂಬುದು ತಿಳಿದಿದೆ. ಇಂದಿನ ಸೆಮಿಸ್ಟರ್ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಕ್ರೀಡಾ ಕ್ಷೇತ್ರಕ್ಕೆ ಬರುವುದೇ ಕಷ್ಟ ಎಂಬಂತಹ ಸ್ಥಿತಿ ಇದೆ. ಶುಲ್ಕ ನೀಡುವ ಸ್ಥಿತಿ ನಿರ್ಮಾಣವಾದರೆ ಕ್ರೀಡಾ ಕ್ಷೇತ್ರಕ್ಕೆ ಪೆಟ್ಟು ಬೀಳಲಿದೆ’ ಎಂದು ಎಚ್ಚರಿಸಿದರು.

ಕ್ರೀಡಾ ತರಬೇತುದಾರ ಪ್ರದೀಪ್, ಹೊಸಳ್ಳಪ್ಪ, ರೆಡ್ ಕ್ರಾಸ್ ಸಂಸ್ಥೆಯ ಸದಸ್ಯ ಎಸ್.ನಾಗಣ್ಣ, ಕ್ರೀಡಾಪಟುಗಳಾದ ಹರೀಶ್ ಬಾಬು, ವಿನಯ್, ಬಾಲರಾಜು, ನರೇಶ್ ಕುಮಾರ್, ಮರಿತಿಮ್ಮಯ್ಯ, ಪ್ರಭಾಕರ್ ಆರ್ಚಾಯ, ರಮೇಶ್, ಮಂಜುನಾಥ್,ಅನಿಲ್ ಮತ್ತಿತರರು ಭಾಗವಹಿಸಿದ್ದರು.

ಶುಲ್ಕದ ವಿವರ:ಒಂದು ಗಂಟೆಗೆ ಕ್ರೀಡಾಂಗಣ ಬಳಕೆಗೆ ಸರ್ಕಾರ ನಿಗದಿಪಡಿಸಿರುವ ಶುಲ್ಕ.ಟೆನಿಸ್ ₹40, ಜಿಮ್ ₹30, ಬ್ಯಾಡ್ಮಿಂಟನ್ ₹50, ಟೇಬಲ್ ಟೆನಿಸ್ ₹25, ಅಥ್ಲೆಟಿಕ್ ₹30, ಬ್ಯಾಸ್ಕೇಟ್ ಬಾಲ್ ₹15, ಫುಟ್‌ಬಾಲ್ ₹10, ವಾಲಿಬಾಲ್ ₹10, ಕಬ್ಬಡಿ ₹10, ಕೊಕ್ಕೊ ₹10, ಸ್ಕೇಟಿಂಗ್ ₹15, ಜಾಗಿಂಗ್ ₹10 ನಿಗದಿಪಡಿಸಲಾಗಿದೆ. ಗುರುತಿನ ಚೀಟಿಯ ಶುಲ್ಕವಾಗಿ ₹50 ನೀಡಬೇಕು.

ಕೆರೆ ಪ್ರವೇಶಕ್ಕೆ ಶುಲ್ಕ ನಿಗದಿ:ಈಗಾಗಲೇ ನಗರದ ಅಮಾನಿಕೆರೆಗೆ ಪ್ರವೇಶ ನೀಡಲು ಶುಲ್ಕ ವಿಧಿಸಲಾಗುತ್ತಿದೆ. ವಾಯು ವಿಹಾರ, ವಾಕಿಂಗ್‌, ಕೆರೆ ವೀಕ್ಷಣೆಗೆ ಬರುವವರು ಶುಲ್ಕ ಪಾವತಿಸಬೇಕಾಗಿದೆ. ಮಕ್ಕಳಿಗಾಗಿ ಕೆರೆಯ ಒಂದು ಭಾಗದಲ್ಲಿ ಆಟಿಕೆಗಳನ್ನು ಅಳವಡಿಸಿದ್ದು, ಅಲ್ಲಿಗೆ ಹೋಗಬೇಕಾದರೂ ಮಕ್ಕಳೂ ಶುಲ್ಕ ನೀಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT