ಶನಿವಾರ, ಡಿಸೆಂಬರ್ 7, 2019
21 °C
ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಆದರ್ಶ ಕುಮಾರ್ ನೇಮಕ

ಪ್ರಶಸ್ತಿ ಪಡೆಯುವ ಮುನ್ನವೇ ಭೂಬಾಲನ್ ಬದಲಾವಣೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಉತ್ತಮ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಸ್ತಿ ಪಡೆಯುವ ಮುನ್ನವೇ ಟಿ.ಭೂಬಾಲನ್ ವರ್ಗಾವಣೆ ಮಾಡಿರುವುದು ನಾಗರಿಕರಲ್ಲಿ ಹಲವು ಪ್ರಶ್ನೆಗಳನ್ನು ಮತ್ತು ಅಚ್ಚರಿಯನ್ನು ಮೂಡಿಸಿದೆ.

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎನ್‌.ಆರ್.ಆದರ್ಶಕುಮಾರ್ ಅವರನ್ನು ತುಮಕೂರು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ. ಆದರ್ಶ ಕುಮಾರ್ ಈ ಹಿಂದೆ ಟೂಡಾ ಆಯುಕ್ತರು ಮತ್ತು ಹಿಂದಿನ ನಗರಸಭೆ ಪ್ರಭಾರ ಆಯುಕ್ತರಾಗಿ ಕೆಲಸ ಮಾಡಿದ್ದರು.

ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಭೂಬಾಲನ್ ಅವರಿಗೆ ಹೆಚ್ಚುವರಿಯಾಗಿ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ನೀಡಲಾಗಿತ್ತು. ಇತ್ತೀಚೆಗೆ ಅವರು ಪ್ರಶಸ್ತಿ ಪಡೆದಿದ್ದಾಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸ್ಮಾರ್ಟ್‌ಸಿಟಿ ಲಿಮಿಟೆಡ್ ಅಧ್ಯಕ್ಷೆ ಶಾಲಿನಿ ರಜನೀಶ್ ಸಹ ಪ್ರಶಂಸಿಸಿದ್ದರು.

‘ಸ್ಮಾರ್ಟ್‌ಸಿಟಿ ಹೊಸ ಪರಿಕಲ್ಪನೆ. ರಾಷ್ಟ್ರೀಯ ಮಟ್ಟದಲ್ಲಿ ಅಧಿಕಾರಿಗಗಳಿಗೆ ಸಭೆಗಳು ಇರುತ್ತವೆ. ಹೆಚ್ಚು ಸಮರ್ಥ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬೇಕಾದರೆ ಐಎಎಸ್ ಅಧಿಕಾರಿಯೇ ಹುದ್ದೆಗೆ ಬರಬೇಕಿದೆ. ಇಲ್ಲದಿದ್ದರೆ ರಾಜಕಾರಣಿಗಳು ಮತ್ತು ಪಟ್ಟಭದ್ರರ ಕೈ ಮೇಲಾಗುತ್ತದೆ. ಐಎಎಸ್ ಅಧಿಕಾರಿ ಇಲ್ಲಿ ಕನಿಷ್ಠ ಎರಡು ವರ್ಷವಾದರೂ ಕೆಲಸ ಮಾಡಬೇಕು’ ಎಂದು ಸಾಮಾಜಿಕ ಹೋರಾಟಗಾರ ಆರ್.ವಿಶ್ವನಾಥನ್ ಹೇಳಿದರು.

‘ಭೂಬಾಲನ್ ಕೆಲವು ಗುತ್ತಿಗೆದಾರರಿಗೆ ದಂಡ ಹಾಕಿದ್ದರು. ಗುತ್ತಿಗೆದಾರರ ಅಕ್ರಮಗಳಿಗೆ ಕಡಿವಾಣ ಬಿದ್ದಿತ್ತು. ಕೆಲ ರಾಜಕೀಯ ವ್ಯಕ್ತಿಗಳ ವ್ಯವಹಾರಕ್ಕೂ ತಡೆಯಾಗಿದ್ದರು. ರಾತ್ರಿ ಎಂಟು ಗಂಟೆಯಾದರೂ ಕಚೇರಿಯಲ್ಲಿಯೇ ಇರುತ್ತಿದ್ದರು. ಎಲ್ಲ ಕಾಮಗಾರಿಗಳ ಮೇಲೆ ನಿಗಾ ಇಟ್ಟಿದ್ದರು. ಇವರು ಇದ್ದರೆ ನಮ್ಮ ಮಾತು ನಡೆಯುವುದಿಲ್ಲ, ನಮ್ಮ ಮನೆಗಳಿಗೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಸ್ಮಾರ್ಟ್‌ಸಿಟಿ ಹುದ್ದೆಯಿಂದ ತೆರವುಗೊಳಿಸಲಾಗಿದೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತರು ಇಮ್ರಾನ್ ಪಾಷಾ ತಿಳಿಸಿದರು.

ಶನಿವಾರ ನಡೆದ ದಿಶಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರು, ಭೂಬಾಲನ್ ಅವರಿಗೆ ಉತ್ತಮ ವ್ಯವಸ್ಥಾಪಕ ನಿರ್ದೇಶಕ ಪ್ರಶಸ್ತಿ ಬಂದಿದ್ದನ್ನು ‍ಪ್ರಸ್ತಾಪಿಸಿದರು. ಸಂಸದ ಜಿ.ಎಸ್.ಬಸವರಾಜು ಸೇರಿದಂತೆ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು. ಆದರೆ ಸಭೆ ಮುಗಿದ ಸ್ವಲ್ಪ ಹೊತ್ತಿಗೆ ಭೂಬಾಲನ್ ಅವರನ್ನು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು