ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಿ

ಕುಣಿಗಲ್‌ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಕ್ಕೊರಲ ಆಗ್ರಹ
Last Updated 18 ಸೆಪ್ಟೆಂಬರ್ 2020, 2:46 IST
ಅಕ್ಷರ ಗಾತ್ರ

ಕುಣಿಗಲ್: ಮಳೆಗಾಲ ಬಂದರೂ ತಾಲ್ಲೂಕಿನ ಕೆಲ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ವರ್ಷಪೂರ್ತಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡದೆ ಶಾಶ್ವತ ಪರಿಹಾರಕ್ಕೆ ಗಮನ ಹರಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಧ್ಯಕ್ಷೆ ನಾಗಮ್ಮ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರಾದ ವಿಶ್ವನಾಥ್, ಹರೀಶ್ ನಾಯಕ್, ದಿನೇಶ್ ಕುಮಾರ್, ಬರಗಾಲದಲ್ಲಿ ನೀರಿನ ಅಭಾವ ಇರುತ್ತದೆ. ಟ್ಯಾಂಕರ್ ಮೂಲಕ ಸರಬರಾಜು ಮಾಡಿದ್ದು ಸರಿ. ಈಗ ಕೊಳವೆಬಾವಿಗಳನ್ನು ಕೊರೆಸುವ, ಪೈಪ್‌ಲೈನ್ ಅಳವಡಿಸುವ ಮೂಲಕ ಶಾಶ್ವತ ಪರಿಹಾರಕ್ಕೆ ಗಮನ ಹರಿಸಬೇಕು ಎಂದರು.

ವಿದ್ಯುತ್ ಪರಿವರ್ತಕ ಅಳವಡಿಸುವ ವಿಚಾರವಾಗಿ ತಾಲ್ಲೂಕಿನಲ್ಲಿ ಬೆಸ್ಕಾಂ ಮತ್ತು ಗುತ್ತಿಗೆದಾರರ ನಡುವಿನ ಅಪವಿತ್ರ ಮೈತ್ರಿ ಇದೆ. ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ. ಹಣಕೊಟ್ಟವರಿಗೆ ಎಲ್ಲ ನಿಯಮಗಳನ್ನು ಮೀರಿ ಕ್ಷಣಾರ್ಧದಲ್ಲಿ ಸಂಪರ್ಕ ನೀಡುತ್ತಿದ್ದಾರೆ ಎಂದು ಸದಸ್ಯ ರಾಜು ಆರೋಪಿಸಿದರು.

ರೈತರಿಗೆ ಅಗತ್ಯ ರಸಗೊಬ್ಬರ ಪೂರೈಸುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸದಸ್ಯರಾದ ದಿನೇಶ್ ಮತ್ತು ಹರೀಶ್ ನಾಯಕ್ ಆರೋಪಿಸಿದಾಗ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯಶ್ರೀ, ರಸಗೊಬ್ಬರ ಸಮಸ್ಯೆ ತಾಲ್ಲೂಕಿನದ್ದಲ್ಲ, ಇಡೀ ರಾಜ್ಯದ ಸಮಸ್ಯೆ ಆಗಿದೆ ಎಂದು ತಿಳಿಸಿದರು.

ಸಿಬ್ಬಂದಿಯೇ ಪ್ರಬಲ: ತಾಲ್ಲೂಕಿನಲ್ಲಿ ಜಾನುವಾರುಗಳ ಸಾವು ಹೆಚ್ಚುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ವಿಶ್ವನಾಥ್ ಆರೋಪಿಸಿದರು. ಆಗ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಶಶಿಕಾಂತ್ ಬೂದಿಹಾಳ್, ‘ನಾನು 650 ಕಿಮೀ ದೂರದಿಂದ ಬಂದು ಕೆಲಸ ಮಾಡುತ್ತಿದ್ದೇನೆ. ತಾಲ್ಲೂಕಿನಲ್ಲಿರುವ ಅಟೆಂಡರ್ ಮತ್ತು ಸಿಬ್ಬಂದಿ 6 ಕಿ.ಮೀ ದೂರಕ್ಕೆ ಹೋಗಿ ಕೆಲಸ ಮಾಡುತ್ತಿಲ್ಲ. ಸಮಸ್ಯೆ ಇರುವ ಕಡೆ ನಿಯೋಜಿಸಿದರೆ ತಾಲ್ಲೂಕಿನ ಮೂರು ಪಕ್ಷಗಳ ಮುಖಂಡರು ಅವರ ಬೆಂಬಲಕ್ಕೆ ನಿಲ್ಲುವರು. ಅಟೆಂಡರ್ ಮತ್ತು ಕೆಳ ಹಂತದ ಸಿಬ್ಬಂದಿ ತುಂಬ ಪ್ರಬಲವಾಗಿದ್ದಾರೆ. ಕೆಲಸ ಮಾಡಿಸುವುದು ಕಷ್ಟವಾಗಿದೆ
ಎಂದರು.

ಉಪಾಧ್ಯಕ್ಷೆ ವರಲಕ್ಷ್ಮಿ ರಂಗಧಾಮಯ್ಯ, ಕಾರ್ಯ ನಿರ್ವಾಹಣಾಧಿಕಾರಿ ಶಿವರಾಜು, ಸದಸ್ಯರು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT