ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಮಾದಿಗರ ‘ಆತ್ಮ ಗೌರವ’ ಸಮಾವೇಶ

Published 25 ಡಿಸೆಂಬರ್ 2023, 6:06 IST
Last Updated 25 ಡಿಸೆಂಬರ್ 2023, 6:06 IST
ಅಕ್ಷರ ಗಾತ್ರ

ತುಮಕೂರು: ಪರಿಶಿಷ್ಟ ಜಾತಿಯಲ್ಲಿನ ಪ್ರಬಲ ಸಮುದಾಯಗಳು ಮೀಸಲಾತಿಯಲ್ಲಿ ಸಿಂಹಪಾಲು ಪಡೆಯುತ್ತಿವೆ. ಮಾದಿಗ ಸೇರಿದಂತೆ ಇತರೆ ಜಾತಿಗಳು ಹಲವು ಸೌಲಭ್ಯಗಳಿಂದ ವಂಚಿತವಾಗುತ್ತಿವೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಕೆ.ಬಿ.ಕೃಷ್ಣಮೂರ್ತಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ‘ಮಾದಿಗರ ಮುನ್ನಡೆ’ ಆತ್ಮಗೌರವ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್‌ನಿಂದ ಸೋಲುವ ಜಾಗದಲ್ಲಿ ಮಾದಿಗರಿಗೆ ಟಿಕೆಟ್ ನೀಡುತ್ತಿದ್ದಾರೆ. ನಮ್ಮ ಸಮುದಾಯದ ಜನ ಜಾಸ್ತಿ ಇರುವ ಕಡೆ ಏನೋ ಒಂದು ಕಾರಣ ಹೇಳಿ ‌ಟಿಕೆಟ್ ತಪ್ಪಿಸುತ್ತಾರೆ. ಕಾಂಗ್ರೆಸ್‌ ನಿಜವಾಗಿ ಮೀಸಲಾತಿ ಕೊಡುವುದಿಲ್ಲ. ಅಲ್ಲಿ ಸಾಮಾಜಿಕ ನ್ಯಾಯಕ್ಕೆ ಅವಕಾಶವೇ ಇಲ್ಲ. ಅದಕ್ಕಾಗಿ ಪಕ್ಷ‌ ಬಿಡಬೇಕಾಯಿತು. ಕಾಂಗ್ರೆಸ್ ಮಾದಿಗರನ್ನು ಮೂಲೆ ಗುಂಪು ಮಾಡಿದೆ. ನಮ್ಮ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಅದನ್ನು ಎದುರಿಸಲು ಈಗ ಸಮಯ ಬಂದಿದೆ. ‌ಸಮುದಾಯದ ಜನರು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಬಿ.ಸುರೇಶ್‌ಗೌಡ, ‘ಸದಾಶಿವ ಆಯೋಗಕ್ಕೆ ಅನುದಾನ ನೀಡಬಾರದು, ಆಯೋಗದ ವರದಿ ಸ್ವೀಕರಿಸಬಾರದು ಎಂಬ ಒತ್ತಡ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಿಗೆ ಇತ್ತು. ಎಲ್ಲ ಒತ್ತಡಗಳನ್ನು ಮೀರಿ ಬಿಜೆಪಿ ನಾಯಕರು ಆಯೋಗದ ವರದಿ ಸ್ವೀಕರಿಸಿದರು’ ಎಂದು ತಿಳಿಸಿದರು.

ಸಾಮರಸ್ಯ ವೇದಿಕೆ ಸಂಚಾಲಕ ವಾದಿರಾಜ್‌, ‘ಜನಸಂಖ್ಯೆಗೆ ಅನುಗುಣವಾಗಿ ಅವರ ಪಾಲು ಸಿಗುವ ಹಾಗೆ ಮೀಸಲಾತಿ ವರ್ಗೀಕರಣ ಮಾಡಬೇಕು. ಸದಾಶಿವ ಆಯೋಗ ರಚನೆ ಮಾಡಿದ್ದಷ್ಟೇ ಕಾಂಗ್ರೆಸ್‌ನ ಸಾಧನೆ. ಮೀಸಲಾತಿ ವರ್ಗೀಕರಣಕ್ಕೆ ಪ್ರಯತ್ನಿಸದೆ ರಾಜಕೀಯ ಮಾಡುತ್ತಿದೆ’ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಬಿ.ಎಚ್.ಅನಿಲ್‍ಕುಮಾರ್‌, ‘ಮುಂದಿನ ಲೋಕಸಭಾ ಚುನಾವಣೆ ಒಳಗೆ ಕೇಂದ್ರ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿ ಆದೇಶ ಹೊರಡಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ಡಾ.ಲಕ್ಷ್ಮಿಕಾಂತ್‌, ಮುಖಂಡರಾದ ದೀಪಕ್ ದೊಡ್ಡಯ್ಯ, ಅರಕಲವಾಡಿ ನಾಗೇಂದ್ರ, ಸೂರನಹಳ್ಳಿ ಶ್ರೀನಿವಾಸ್, ನರಸಿಂಹಮೂರ್ತಿ, ಕೃಷ್ಣಮೂರ್ತಿ, ಸೋರೆಕುಂಟೆ ಯೋಗೀಶ್, ಯಲ್ಲಾಪುರ ರಮೇಶ್, ಹೊಸಕೋಟೆ ನಟರಾಜು, ಶಿವಕುಮಾರ್ ಸಾಕೇಲ, ನಾಗೇಶ್, ಹನುಮಂತರಾಯಪ್ಪ, ಕಂಬದ ರಂಗಪ್ಪ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT