ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ ಬಳಿ ತಲೆ ಎತ್ತುತ್ತಿದೆ ದಕ್ಷಿಣ ಭಾರತದ ಪ್ರಥಮ ಆಧುನಿಕ ವಧಾಗಾರ

Published 14 ಸೆಪ್ಟೆಂಬರ್ 2023, 8:25 IST
Last Updated 14 ಸೆಪ್ಟೆಂಬರ್ 2023, 8:25 IST
ಅಕ್ಷರ ಗಾತ್ರ

ಶಿರಾ: ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಕುರಿ ಮತ್ತು ಮೇಕೆ ಮಾಂಸ ಉತ್ಪಾದನೆ ಮತ್ತು ಆಧುನಿಕ ಸಂಸ್ಕರಣಾ ಕೇಂದ್ರ (ವಧಾಗಾರ) ತಾಲ್ಲೂಕಿನ ಚೀಲನಹಳ್ಳಿ ಬಳಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ನಿರ್ಮಾಣವಾಗುತ್ತಿದ್ದು ವರ್ಷದ ಅಂತ್ಯಕ್ಕೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಚೀಲನಹಳ್ಳಿ ಗ್ರಾಮದ ಸರ್ವೆ ನಂ 14 ರಲ್ಲಿರುವ 20 ಎಕರೆ ಜಮೀನಿನಲ್ಲಿ ₹ 46.63 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಇದರಿಂದ ಕುರಿಗಾಹಿಗಳಿಗೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆ ಇದೆ.

ರಾಜ್ಯದಲ್ಲಿ ಅತಿ ಹೆಚ್ಚು ಕುರಿ ಮತ್ತು ಮೇಕೆಗಳು ಶಿರಾ ತಾಲ್ಲೂಕಿನಲ್ಲಿರುವುದನ್ನು ಮನಗಂಡು ಹಿಂದೆ ಟಿ.ಬಿ.ಜಯಚಂದ್ರ ಅವರು ಪಶುಸಂಗೋಪನೆ ಸಚಿವರಾಗಿದ್ದ ಸಮಯದಲ್ಲಿ ಅಧುನಿಕ ರೀತಿಯ ವಧಾಗಾರವನ್ನು ಮಂಜೂರು ಮಾಡಿಸಿದರು. ಅವರು ಪಶುಸಂಗೋಪನೆ ಸಚಿವ ಸ್ಥಾನವನ್ನು ಬಿಟ್ಟ ನಂತರ ಇದನ್ನು ಹಾಸನ ಜಿಲ್ಲೆಗೆ ವರ್ಗಾವಣೆ ಮಾಡಲು ಅನೇಕ ರೀತಿಯ ಪ್ರಯತ್ನ ನಡೆದರೂ ಪಟ್ಟು ಬಿಡದೆ ಟಿ.ಬಿ.ಜಯಚಂದ್ರ ಅವರು ಹಲವಾರು ಅಡಚಣೆಗಳ ನಡುವೆ 2017ರಲ್ಲಿ ಚೀಲನಹಳ್ಳಿ ಸಮೀಪ 20 ಎಕರೆ ಜಮೀನು ನೀಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕಾಮಗಾರಿ ಮಂದಗತಿಯಲ್ಲಿ ಸಾಕುತ್ತಿತ್ತು. ಈಗ ಟಿ.ಬಿ.ಜಯಚಂದ್ರ ಅವರು ಶಾಸಕರಾಗಿ ಆಯ್ಕೆಯಾಗಿದ್ದು ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಮಾಡುವುದು ಅವರಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿದೆ.

ರೈತರಿಗೆ ಅನುಕೂಲ: ಶಿರಾ, ಚಿಕ್ಕನಾಯಕನಹಳ್ಳಿ, ಪಾವಗಡ, ಮಧುಗಿರಿ ಹಾಗೂ ಪಕ್ಕದ ಹಿರಿಯೂರು ತಾಲ್ಲೂಕಿನಲ್ಲಿನ ಹೆಚ್ಚಿನ ಸಂಖ್ಯೆಯಲ್ಲಿ ಕುರಿ ಮತ್ತು ಮೇಕೆಗಳಿದ್ದು ವಧಾಗಾರ ಪ್ರಾರಂಭವಾದರೆ ಮಧ್ಯವರ್ತಿಗಳ ಕಾಟವಿಲ್ಲದೆ ಜೀವಂತ ಕುರಿಯ ತೂಕದ ಮೇಲೆ ಬೆಲೆ ನಿಗದಿ ಮಾಡುವುದರಿಂದ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಜತೆಗೆ ಮಾಂಸ ಪ್ರಿಯರಿಗೆ ಆರೋಗ್ಯವಂತ ಕುರಿ ಮತ್ತು ಮೇಕೆಯ ಮಾಂಸ ದೊರೆಯುವುದು.

ಶಿರಾ ತಾಲ್ಲೂಕಿನಲ್ಲಿ 2012ನೇ ಸರ್ವೆ ಪ್ರಕಾರ 4.76 ಲಕ್ಷ ಕುರಿ ಮತ್ತು 54 ಸಾವಿರ ಮೇಕೆಗಳಿದ್ದು ಇದರ ಪ್ರಮಾಣ ಈಗ ಇನ್ನೂ ಹೆಚ್ಚಾಗಿದೆ.

ಆಧುನಿಕ ವಧಾಗಾರದಲ್ಲಿ ಪ್ರತಿನಿತ್ಯ 1,500ಕ್ಕೂ ಹೆಚ್ಚು ಕುರಿ ಮತ್ತು ಮೇಕೆಗಳನ್ನು ವಧೆ ಮಾಡಿ ಉತ್ಕೃಷ್ಟವಾದ ಮಾಂಸವನ್ನು ಬೆಂಗಳೂರು ಸೇರಿದಂತೆ ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗೆ ಸರಬರಾಜು ಮಾಡಲು ಉದ್ದೇಶಿಸಲಾಗಿದೆ.

ಚರ್ಮ ಸಂಸ್ಕರಣೆ ಘಟಕ: ಆಧುನಿಕ ವಧಾಗಾರ ನಿರ್ಮಾಣವಾಗುತ್ತಿರುವುದರಿಂದ ಇಲ್ಲಿಯೇ ₹ 2 ಕೋಟಿ ವೆಚ್ಚದಲ್ಲಿ ಚರ್ಮ ಸಂಸ್ಕರಣಾ ಘಟಕವನ್ನು ಸಹ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಪ್ರಾರಂಭವಾಗುತ್ತಿರುವ ಮೊದಲ ಚರ್ಮ ಸಂಸ್ಕರಣ ಘಟಕ ಎನ್ನುವ ಹೆಗ್ಗಳಿಕೆ ಸಹ ಹೊಂದಿದ್ದು ಕಾಮಗಾರಿ ಪ್ರಾರಂಭವಾಗಬೇಕಿದೆ.

ಖಾಸಗಿ ಸಹಭಾಗಿತ್ವ: ಯಂತ್ರೋಪಕರಣಗಳನ್ನು ಆಳವಡಿಸಿ ಘಟಕವನ್ನು ಸಂಪೂರ್ಣಗೊಳಿಸಲು ಹಿಂದಿನ ಸರ್ಕಾರ ಅನುದಾನ ನೀಡದ ಕಾರಣ ಖಾಸಗಿ ಸಹಭಾಗಿತ್ವದಲ್ಲಿ (ಪಿ.ಪಿ.ಪಿ) ಉಳಿದ ಕಾಮಗಾರಿ ಕೈಗೊಳ್ಳಲು ಖಾಸಗಿ ಖಾಸಗಿ ಸಂಸ್ಥೆಗೆ ವಹಿಸಿಕೊಡಲಾಗಿದೆ. ಯಂತ್ರೋಪಕರಣಗಳ ಜೋಡಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಡಿಸೆಂಬರ್ ಅಂತ್ಯಕ್ಕೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಶಿರಾ ತಾಲ್ಲೂಕಿನ ಚೀಲನಹಳ್ಳಿ ಬಳಿ ನಿರ್ಮಾಣವಾಗಿರುವ ಆಧುನಿಕ ವಧಾಗಾರ
ಶಿರಾ ತಾಲ್ಲೂಕಿನ ಚೀಲನಹಳ್ಳಿ ಬಳಿ ನಿರ್ಮಾಣವಾಗಿರುವ ಆಧುನಿಕ ವಧಾಗಾರ
ಶಿರಾ ತಾಲ್ಲೂಕಿನ ಚೀಲನಹಳ್ಳಿ ಬಳಿ ನಿರ್ಮಾಣವಾಗಿರುವ ಆಧುನಿಕ ವಧಾಗಾರ
ಶಿರಾ ತಾಲ್ಲೂಕಿನ ಚೀಲನಹಳ್ಳಿ ಬಳಿ ನಿರ್ಮಾಣವಾಗಿರುವ ಆಧುನಿಕ ವಧಾಗಾರ
ಟಿ.ಬಿ.ಜಯಚಂದ್ರ
ಟಿ.ಬಿ.ಜಯಚಂದ್ರ
ಡಾ.ನಾಗೇಶ್ ಕುಮಾರ್
ಡಾ.ನಾಗೇಶ್ ಕುಮಾರ್
ಅಂದಾಜು ವೆಚ್ಚ ₹ 44.63 ಕೋಟಿ ಸಿವಿಲ್ ಕಾಮಗಾರಿಗಳಿಗೆ ₹ 23.53 ಕೋಟಿ ಯಂತ್ರೋಪಕರಣಗಳು ₹ 21.10 ಕೋಟಿ
ಕುರಿಗಾಹಿಗಳ ಬದುಕಿನಲ್ಲಿ ಹೊಸ ತಿರುವು
ಶಿರಾ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕುರಿಗಾಹಿಗಳಿದ್ದಾರೆ. ಅವರು ಹಲವಾರು ರೀತಿಯಲ್ಲಿ ಶೋಷಣೆ ಗುರಿಯಾಗುತ್ತಿದ್ದ ಈ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲ ಮಾಡಿಕೊಡಲು ಮಾರುಕಟ್ಟೆ ಕಲ್ಪಿಸಿಕೊಡಲು ಆಧುನಿಕ ವಧಾಗಾರವನ್ನು ಪ್ರಾರಂಭಿಸಲಾಗುವುದು. ಇದು ಕುರಿಗಾಹಿಗಳ ಬದುಕಿನಲ್ಲಿ ಹೊಸ ತಿರುವು ನೀಡಲಿದೆ. ಟಿ.ಬಿ.ಜಯಚಂದ್ರ ಶಾಸಕ ಡಿಸೆಂಬರ್ ಅಂತ್ಯಕ್ಕೆ ಕಾರ್ಯಾರಂಭ ಶಿರಾ ತಾಲ್ಲೂಕಿನ ಕುರಿಗಾಹಿಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗುವುದು. ಕುರಿಗಾಹಿಗಳಿಂದ ನೇರವಾಗಿ ಜೀವಂತ ಕುರಿ ಮತ್ತು ಮೇಕೆಗಳನ್ನು ತೂಕದ ಮೇಲೆ ಖರೀದಿ ಮಾಡುವುದರಿಂದ ಅವರಿಗೆ ಉತ್ತಮ ಬೆಲೆ ದೊರೆತು ಆರ್ಥಿಕವಾಗಿ ಸದೃಢರಾಗಲು ಅನುಕೂಲವಾಗುವುದು. ಡಿಸೆಂಬರ್ ಅಂತ್ಯದ ವೇಳೆಗೆ ವಧಾಗಾರ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಡಾ.ನಾಗೇಶ್ ಕುಮಾರ್ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಉಪನಿರ್ದೇಶಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT