ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ವೇಗ: ಜಿಐಎಸ್ ಅನಿವಾರ್ಯ

ಕುಮಾಮೋಟೋ ವಿಶ್ವವಿದ್ಯಾಲಯದ ಸಂಶೋಧನಾ ವಿಜ್ಞಾನಿ ಡಾ.ರಾಜು ಎಡ್ಲಾ ಅಭಿಪ್ರಾಯ
Last Updated 26 ನವೆಂಬರ್ 2020, 4:06 IST
ಅಕ್ಷರ ಗಾತ್ರ

ತುಮಕೂರು: ನಗರ-ಪಟ್ಟಣಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗೊಳಿಸಲು ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಸುಧಾರಿಸಲು ಆಯಾ ಜಿಲ್ಲಾಡಳಿತಗಳು ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು (ಜಿಐಎಸ್) ಅಳವಡಿಸಿಕೊಳ್ಳವ ಅಗತ್ಯ ಮತ್ತು ಅನಿವಾರ್ಯ ಇದೆ ಎಂದು ಜಪಾನ್‍ನ ಕುಮಾಮೋಟೋ ವಿಶ್ವವಿದ್ಯಾಲಯದ ಸಂಶೋಧನಾ ವಿಜ್ಞಾನಿ ಡಾ.ರಾಜು ಎಡ್ಲಾ ಅಭಿಪ್ರಾಯಪಟ್ಟರು.

ನಗರದ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಸಿವಿಲ್ ಎಂಜಿನಿಯರಿಂಗ್ ವಿಭಾಗದಿಂದ ನಡೆದ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್‍ ಪ್ರಾಯೋಜಿತ ‘ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆಯ ಅಳವಡಿಕೆ ಮತ್ತು ದೂರ ಸಂವೇದಿ ನಿಯಂತ್ರಣ’ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು (ಜಿಐಎಸ್) ಅಳವಡಿಸಿಕೊಳ್ಳುವುದರಿಂದ ಸಿವಿಲ್ ಕಾಮಕಾರಿಗಳನ್ನು ನಿರ್ವಹಿಸಲು, ನೀರಿನ ಸಂಪನ್ಮೂಲಗಳನ್ನು ಮರುಬಳಕೆ ಮಾಡಿಕೊಳ್ಳುವುದು ಸೇರಿದಂತೆ ಸುತ್ತಮುತ್ತಲಿನ ಭೂಪ್ರದೇಶದ ದತ್ತಾಂಶಗಳನ್ನು ಸುಲಭವಾಗಿ ಪಡೆಯಬಹುದು. ವಿಶ್ಲೇಷಣೆ ಮಾಡಲೂ ಅನುಕೂಲವಾಗುತ್ತದೆ. ಇದರಿಂದ ಸರ್ಕಾರದ ಯೋಜನಾ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬಹುದು. ಮಾನವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು ಎಂದು ಹೇಳಿದರು.

ಪರಿಸರ ವಿಜ್ಞಾನದಲ್ಲಿನ ಬದಲಾವಣೆಗಳನ್ನು ಗಂಭೀರವಾಗಿ ಅಧ್ಯಯನ ಮಾಡಲು, ಭೂ ಸಂರಕ್ಷಣೆ, ಸಮುದ್ರದಲ್ಲಿ ಉಂಟಾಗುವ ಏರುಪೇರುಗಳನ್ನು ಜಿಐಎಸ್ ವ್ಯವಸ್ಥೆಯಿಂದ ಅವಲೋಕಿಸುವ ಅವಕಾಶ ಇದೆ. ಅದನ್ನು ಅಳವಡಿಸಿಕೊಳ್ಳುವತ್ತ ಸರ್ಕಾರದ ಆಡಳಿತ ಯಂತ್ರಗಳು ಗಂಭೀರವಾಗಿ ಯೋಚಿಸಬೇಕು ಎಂದರು.

ಸಾಹೇ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಝೆಡ್.ಕುರಿಯನ್, ದೇಶದ ಬೆಳವಣಿಗೆಗೆ ತಂತ್ರಜ್ಞಾನ ಅಗತ್ಯ. ಜಗತ್ತಿನ ವೇಗಕ್ಕೆ ತಕ್ಕಂತೆ ಸಾಗಬೇಕಾದರೆ ಲಭ್ಯವಿರುವ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ತುಮಕೂರಿನ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳಾದ ಬಿ.ಪಿ.ಸಂಜೀವ್ ರಾಜು, ಎಂ.ಎಸ್.ಆನಂದ್ ಇಲಾಖೆಯಲ್ಲಿ ತುಮಕೂರು ನಗರಕ್ಕೆ ಹಮ್ಮಿಕೊಂಡಿರುವ ಕಾಮಕಾರಿಗಳ ಪ್ರಗತಿ ವಿವರಿಸಿದರು.

ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ರವಿಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಎಂ.ಸಿದ್ದಪ್ಪ, ಮಲ್ಲೇಶ್, ಎಚ್.ವೇಣುಗೋಪಾಲ್, ಮುರಳೀಧರ್, ಡಾ.ಎಸ್.ಆರ್.ರಮೇಶ್, ಡಾ.ರಾಜಾನಾಯಕ್, ಡಾ.ಬಿ.ಎಚ್.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT