ಬುಧವಾರ, ಜೂನ್ 29, 2022
25 °C

ರಾಗಿ ಖರೀದಿ ಕೇಂದ್ರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ‘ಸರ್ಕಾರ ಪ್ರತಿ ಕ್ವಿಂಟಾಲ್ ರಾಗಿಗೆ ₹3295 ಬೆಂಬಲ ಬೆಲೆಯಲ್ಲಿ ನೀಡುತ್ತಿದ್ದು, ಮಾರ್ಚ್‌ 31ರವರೆಗೆ ಖರೀದಿ ಮಾಡಲಿದೆ’ ಎಂದು ಶಾಸಕ ಮಸಾಲ ಜಯರಾಂ ಹೇಳಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವತಿಯಿಂದ ಸರ್ಕಾರಿ ಸಹಾಯಧನದೊಂದಿಗೆ 2020-21ನೇ ಸಾಲಿನ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ತಾಲ್ಲೂಕಿನ ರೈತರು ನಿಗದಿತ ದಿನಾಂಕಕ್ಕಿಂತ ಮುಂಗಡವಾಗಿ ಕಾಯ್ದಿರಿಸಿಕೊಂಡು ಅಗತ್ಯ ದಾಖಲೆಗಳೊಂದಿಗೆ ಆ ದಿನ ರಾಗಿಯನ್ನು ನೀಡಬಹುದು. ನಿಗದಿತ ಅವಧಿಯಲ್ಲಿ ನೋಂದಾಯಿಸುವ ಮೂಲಕ ರೈತರಿಂದ ರಾಗಿ ಖರೀದಿಸಲಿದ್ದು ವರ್ಷವಿಡೀ ಬೆವರು ಸುರಿಸಿ ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ರೈತರು ಆತುರ ಪಟ್ಟು ಅಗ್ಗದ ಬೆಲೆಗೆ ಮಧ್ಯವರ್ತಿ, ದಲ್ಲಾಳಿಗಳಿಗೆ ಬೇಕಾಬಿಟ್ಟಿ ಮಾರದೆ ನೇರವಾಗಿ ರಾಗಿ ಖರೀದಿ ಕೇಂದ್ರಕ್ಕೆ ಮಾರುವ ಮೂಲಕ ಇದರ ಸದುಪಯೋಗಪಡಿಸಿಕೊಳ್ಳಿ’ ಎಂದು ತಿಳಿಸಿದರು.

ತಹಶೀಲ್ದಾರ್ ಆರ್.ನಯೀಂಉನ್ನಿಸಾ ಮಾತನಾಡಿ, ‘ರೈತರ ಪಹಣಿಯಲ್ಲಿ ತೆಂಗು, ಅಡಿಕೆ, ಬಾಳೆ ಎಂದು ತಪ್ಪಾಗಿ ನೋಂದಣಿಯಾಗಿದ್ದಲ್ಲಿ ಅಂತಹ ರೈತರು ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸರಿಪಡಿಸಿಕೊಳ್ಳುವ ಮೂಲಕ ಇದರ ಸದುಪಯೋಗಪಡಿಸಿಕೊಳ್ಳಿ’ ಎಂದರು.

ಜ. 31ರವರೆಗೆ ನೋಂದಣಿ: ರಾಗಿ ಖರೀದಿ ಕೇಂದ್ರದ ಅಧಿಕಾರಿ ರವಿಕುಮಾರ್ ಮಾತನಾಡಿ, ‘ಫೆ.2ರಿಂದ ತಾಲ್ಲೂಕಿನಲ್ಲಿ ರಾಗಿ ಖರೀದಿ ಕೇಂದ್ರ ಪ್ರಾರಂಭವಾಗಲಿದ್ದು 1,481 ಫಲಾನುಭವಿಗಳು ಈಗಾಗಲೇ ತಮ್ಮ ಹೆಸರು ನೋಂದಣಿ ಮಾಡಿಸಿದ್ದಾರೆ. ಉತ್ತಮ ಗುಣಮಟ್ಟದ ರಾಗಿಯನ್ನು ಖರೀದಿಸಲಿದ್ದು, ಜ.31 ರವರೆಗೆ ನೋಂದಣಿಗೆ ಸಮಯಾವಕಾಶವಿದೆ. ರೈತರು ನೋಂದಣಿ ಮಾಡಿಸಲು ಕೃಷಿ ಇಲಾಖೆಯಿಂದ ನೀಡಿರುವ ಫ್ರೂಟ್ಸ್ ಗುರುತಿನ ಚೀಟಿ ಖಡ್ಡಾಯವಾಗಿರುತ್ತದೆ. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 50 ಕ್ವಿಂಟಾಲ್‌ರಾಗಿ ಖರೀದಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ 0816-2278792 ಕರೆ ಮಾಡಬಹುದು’ ಎಂದರು.

ಎಪಿಎಂಸಿ ಅಧ್ಯಕ್ಷ ಮಧು, ಉಪಾಧ್ಯಕ್ಷ ಎಂ.ಪಿ.ಲೋಕೇಶ್ ಪ.ಪಂ.ಅಧ್ಯಕ್ಷ ಅಂಜನ್‍ಕುಮಾರ್, ಆಹಾರ ಮತ್ತು ನಾಗರಿಕ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಚನ್ನನಾಯಕ, ಕೃಷಿಕ ಸಮಾಜದ ಅಧ್ಯಕ್ಷ ಕೆಂಪರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಪಿಎಸಿಬಿ ರಾಮೇಗೌಡ, ಮೂರ್ತಿ, ಬಾಬು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು