ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಉದ್ದಿಮೆ ಖಾಸಗೀಕರಣ ನಿಲ್ಲಿಸಿ

ರೈತರು, ಕಾರ್ಮಿಕರು, ಕೂಲಿಕಾರರ ಬೇಡಿಕೆ ಈಡೇರಿಸುವಂತೆ ಒತ್ತಾಯ
Last Updated 5 ಸೆಪ್ಟೆಂಬರ್ 2020, 16:48 IST
ಅಕ್ಷರ ಗಾತ್ರ

ತುಮಕೂರು: ರೈತರು, ಕಾರ್ಮಿಕರು, ಕೂಲಿಕಾರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು.

ಅರ್ಧಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ಕೇಂದ್ರ, ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಘೋಷಣೆ ಕೂಗಿದರು. ಕೈಗಾರಿಕಾ ಕಾರ್ಮಿಕರು ಮತ್ತು ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶಿಸುವಂತೆ ಉಪವಿಭಾಗಾಧಿಕಾರಿ ಅಜಯ್ ಅವರನ್ನು ಕೋರಿದರು. ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಸಭೆ ಕರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಭರವಸೆ ನೀಡಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ‘ಎಲ್ಲ ರೀತಿಯ ಕಾರ್ಮಿಕರಿಗೆ ಲಾಕ್‍ಡೌನ್ ಅವಧಿಯ ವೇತನ ದೊರೆಯುವಂತೆ ಕ್ರಮವಹಿಸಬೇಕು. ಕಾರ್ಮಿಕ ಕಾಯ್ದೆಗಳನ್ನು ದುರ್ಬಲಗೊಳಿಸುವುದು ನಿಲ್ಲಬೇಕು. ಸಾರ್ವಜನಿಕ ರಂಗದ ಕೈಗಾರಿಕೆಗಳು ಹಾಗೂ ಹಣಕಾಸು ವಲಯದ ಸಂಸ್ಥೆಗಳ ಖಾಸಗೀಕರಣ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ಪ್ರಾಂತ ರೈತ ಸಂಘದ ಸಂಚಾಲಕ ಬಿ.ಉಮೇಶ್, ‘ರಾಜ್ಯ ಸರ್ಕಾರ ಬಗರ್‌ಹುಕುಂ ಸಾಗುವಳಿ ಅರ್ಜಿಗಳ ವಿಲೇವಾರಿಗೆ ಭೂ ಮಂಜೂರಾತಿ ಸಮಿತಿ ರಚಿಸಬೇಕು. ಬಲತ್ಕಾರದಿಂದ ಹೊರಹಾಕಿರುವ ರೈತರಿಗೆ ಭೂಮಿ ವಾಪಸ್ ನೀಡಲು ಕ್ರಮವಹಿಸಬೇಕು. ಭೂಮಿ ಸಕ್ರಮಕ್ಕೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವ ರೈತರು ಮತ್ತು ಕೃಷಿ ಕೂಲಿಕಾರರಿಗೆ ಮತ್ತೊಮ್ಮೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷ ಷಣ್ಮುಖಪ್ಪ, ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ, ಬೀಡಿ ಕಾರ್ಮಿಕರ ಸಂಘದ ನಿಸಾರ್ ಅಹಮದ್, ತ್ರಿವೇಣಿ ಏರೋನಾಟಿಕ್ಸ್‌ ಕಾರ್ಮಿಕರ ಸಂಘದ ಲಿಂಗೇಶ್, ಟಿಮೇಕ್ ಇಂಡಿಯಾ ಲಿಮಿಟೆಡ್ ಕಾರ್ಮಿಕರ ಸಂಘದ ನರಸಿಂಹಮೂರ್ತಿ, ಕಟ್ಟಡ ಕಾರ್ಮಿಕರ ಸಂಘದ ಖಲೀಲ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT