ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ‘ಕೇಡರ್ ಬೇಸ್’ ಪಕ್ಷವಾಗಿ ಸಂಘಟಿಸಲು ಸಲಹೆ

Published 15 ಫೆಬ್ರುವರಿ 2024, 7:40 IST
Last Updated 15 ಫೆಬ್ರುವರಿ 2024, 7:40 IST
ಅಕ್ಷರ ಗಾತ್ರ

ತುಮಕೂರು: ‘ಮಾಸ್ ಪಾರ್ಟಿಯಾಗಿರುವ ಕಾಂಗ್ರೆಸ್‍ಅನ್ನು ಕೇಡರ್ ಬೇಸ್ ಪಾರ್ಟಿಯಾಗಿ’ ಸಂಘಟಿಸಲು ಬೂತ್ ಮಟ್ಟದ ಏಜೆಂಟರು, ಬ್ಲಾಕ್ ಅಧ್ಯಕ್ಷರು ಕೆಲಸ ಮಾಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಆರ್.ರಮೇಶ್ ಸಲಹೆ ಮಾಡಿದರು.

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಬುಧವಾರ ಬೂತ್ ಮಟ್ಟದ ಏಜೆಂಟರು ಹಾಗೂ ಬ್ಲಾಕ್ ಅಧ್ಯಕ್ಷರ ಕಾರ್ಯಾಗಾರದಲ್ಲಿ ಮಾತನಾಡಿದರು.

ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುವ ಬೂತ್ ಮಟ್ಟದ ಏಜೆಂಟರಿಗೆ ಪಕ್ಷದ ಹುದ್ದೆಗಳಲ್ಲದೆ, ಸರ್ಕಾರದ ಹಂತದಲ್ಲಿ ನಡೆಯುವ ನೇಮಕಾತಿ, ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶಗಳು ಸಿಗಲಿವೆ. ಮತದಾನದ ದಿನ ಬೂತ್‌ಗಳಲ್ಲಿ ಪಕ್ಷದ ಪರವಾಗಿ ಕುಳಿತುಕೊಳ್ಳುವ ಏಜೆಂಟರಲ್ಲ. ಮತದಾರರು ಹಾಗೂ ಪಕ್ಷದ ನಡುವೆ ಕೊಂಡಿಯಾಗಿ ಕೆಲಸ ಮಾಡುವ ಅತ್ಯಂತ ಜವಾಬ್ದಾರಿಯುತ ಹುದ್ದೆಯಾಗಿದೆ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ, ‘ಮುಂದಿನ ಲೋಕಸಭಾ ಚುನಾವಣೆಯು ಕಾಂಗ್ರೆಸ್ ಪಾಲಿಗೆ ಅತ್ಯಂತ ಕಠಿಣವಾದ ಪರೀಕ್ಷೆಯಾಗಿದೆ. ಇದನ್ನು ಪಾಸು ಮಾಡಬೇಕಾದರೆ ಮುಖಂಡರೊಂದಿಗೆ ಕಾರ್ಯಕರ್ತರು, ಬೂತ್ ಮಟ್ಟದ ಏಜೆಂಟ್‍ರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ’ ಎಂದು ತಿಳಿಸಿದರು.

ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟವನ್ನು ಸಮರ್ಥವಾಗಿ ಎದುರಿಸಬೇಕು. ಜತೆಗೆ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲೂ ಪಕ್ಷ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಬೇಕಿದೆ. ಹಾಗಾಗಿ ಎಲ್ಲರೂ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ಗೌಡ, ‘ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ಬೂತ್ ಮಟ್ಟದ ಏಜೆಂಟರ ಸಭೆ ನಡೆಸಲಾಗಿದೆ. ಕಾರ್ಯಕರ್ತರ ಕುಂದುಕೊರತೆ ಜತೆಗೆ ಬೂತ್ ಮಟ್ಟದ ಕುಂದುಕೊರತೆ ನಿವಾರಣೆ ಮಾಡಲಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಇದೊಂದು ಒಳ್ಳೆಯ ವೇದಿಕೆಯಾಗಲಿದೆ’ ಎಂಬ ಆಶಯ ವ್ಯಕ್ತಪಡಿಸಿದರು.

ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್, ಕೆಪಿಸಿಸಿ ಸದಸ್ಯ ಮುನೀರ್ ಅಹಮದ್, ಮಾಜಿ ಶಾಸಕರಾದ ಗಂಗಹನುಮಯ್ಯ, ರಫೀಕ್ ಅಹಮದ್, ಮುಖಂಡರಾದ ಇಕ್ಬಾಲ್ ಅಹಮದ್, ಅತೀಕ್ ಅಹಮದ್, ಷಣ್ಮುಖಪ್ಪ, ನರಸಿಂಹಯ್ಯ, ಬಿ.ಜಿ.ಲಿಂಗರಾಜು, ಹಾಲನೂರು ಲೇಪಾಕ್ಷ, ಹೆಬ್ಬೂರು ಶ್ರೀನಿವಾಸ್, ನಾಗಮಣಿ, ಸಂಜೀವಕುಮಾರ್, ರಂಗಸ್ವಾಮಯ್ಯ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT