ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಮಟ್ಟ ಹೆಚ್ಚಳದ ಗುರಿ

ಆರ್ಯಬಾಲಿಕ ಶಾಲೆಗೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ದಿಢೀರ್ ಭೇಟಿ
Last Updated 24 ಸೆಪ್ಟೆಂಬರ್ 2019, 12:38 IST
ಅಕ್ಷರ ಗಾತ್ರ

ತುಮಕೂರು: ನಗರದ ಆರ್ಯ ಬಾಲಿಕ ಪ್ರಾಥಮಿಕ ಶಾಲೆಗೆ ಮಂಗಳವಾರ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ದಿಢೀರ್ ಭೇಟಿ ನೀಡಿದರು. ಶಾಲೆಗೆ ಬಂದ ಅವರು ಮೊದಲು ಬಿಸಿಯೂಟದ ಕೋಣೆಗೆ ತೆರಳಿ ಸ್ವಚ್ಛತೆ ಪರಿಶೀಲಿಸಿದರು.

ನಂತರ ಶಾಲಾ ಆವರಣ ಪರಿಶೀಲಿಸಿದರು. ಮಕ್ಕಳಿಂದ ಮಗ್ಗಿ ಹೇಳಿಸಿದರು. ನಲಿ ಕಲಿಯ ಹಾಡುಗಳನ್ನು ಹೇಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಕ್ಕದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕಾರ್ಯಕರ್ತೆಯಿಂದ ಮಕ್ಕಳ ಸಂಖ್ಯೆ, ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಪಡೆದರು. ಶಾಲೆ ಪ್ರವೇಶದಲ್ಲಿ ನೀರು ನಿಂತಿದ್ದನ್ನು ಗಮನಿಸಿ ನೀರು ನಿಲ್ಲದಂತೆ ಕ್ರಮಕೈಗೊಳ್ಳಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.

ಶಾಲೆಗೆ ಸಮವಸ್ತ್ರ, ಶೂ ಬಂದೆಯಾ ಎನ್ನುವ ಮಾಹಿತಿ ಪಡೆದರು. ವಿದ್ಯಾರ್ಥಿಯೊಬ್ಬ ತಲೆಗೂದಲಿಗೆ ಬಣ್ಣ ಬಳಿದುಕೊಂಡು ಬಂದಿದ್ದನ್ನು ನೋಡಿ, ‘ಹೀಗೆ ಮಾಡಿಕೊಂಡು ಬರಬಾರದು’ ಎಂದು ಕಿವಿಮಾತು ಹೇಳಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಸುರೇಶ್ ಕುಮಾರ್, ‘ನಾನು ಗುಬ್ಬಿ ಶಾಲೆಯೊಂದರ ಕಾರ್ಯಕ್ರಮಕ್ಕೆ ಬಂದಿದ್ದೇನೆ. ದಾರಿಯಲ್ಲಿ ಒಂದು ಶಾಲೆಗೆ ಭೇಟಿ ನೀಡಬೇಕು ಎಂದುಕೊಂಡೆ. ಈ ಹಿನ್ನೆಲೆಯಲ್ಲಿ ಶತಮಾನ ಕಂಡ ಶಾಲೆಗೆ ಭೇಟಿ ನೀಡಿದ್ದೇನೆ’ ಎಂದರು.

‘ನಾನು ಸಚಿವನಾದ ದಿನದಿಂದ ಸಕ್ರಿಯವಾಗಿ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದೇನೆ. ನಿಜವಾದ ಶೈಕ್ಷಣಿಕ ಶ‌ಕ್ತಿ ಇರುವುದು ಗ್ರಾಮೀಣ ಸರ್ಕಾರಿ ಶಾಲೆಗಳಿಗೆ. ಇಲ್ಲಿಂದ ಹೊರ ಹುಮ್ಮುವ ಮಕ್ಕಳು ಸಶಕ್ತರಾಗಿರುತ್ತಾರೆ’ ಎಂದರು.

‘ಈ ಶಾಲೆಯಲ್ಲಿ ನರ್ಸರಿ ಆರಂಭಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಲ್ಲ ಪೋಷಕರಿಗೂ ಮಕ್ಕಳನ್ನು ಮಾಂಟೆಸ್ಸರಿಗೆ ಕಳುಹಿಸುವ ಶಕ್ತಿ ಇರುವುದಿಲ್ಲ. ಆದ್ದರಿಂದ ನರ್ಸರಿ ಆರಂಭಿಸುವ ಮೂಲಕ ಆ ಮಕ್ಕಳನ್ನು ಒಂದನೇ ತರಗತಿಗೆ ದಾಖಲಿಸಿಕೊಳ್ಳಬಹುದು. ಶಾಲೆಗಳ ಸಬಲೀಕರಣಕ್ಕೆ ಇದು ದಾರಿ ಆಗುತ್ತದೆ’ ಎಂದು ಹೇಳಿದರು.

ಶಿಕ್ಷಣ ಇಲಾಖೆಯ ಬಳಿ ಹೊಸ ಯೋಜನೆಗಳು ಸಾಕಷ್ಟು ಇವೆ. ಮುಂದಿನ ತಿಂಗಳು ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಜತೆ ವಿಡಿಯೊ ಸಂವಾದ ನಡೆಸಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಮಟ್ಟವನ್ನು ಹೆಚ್ಚಿಸಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಸಬೇಕು ಎನ್ನುವುದೇ ನಮ್ಮ ಗುರಿ ಎಂದರು.

‘ಹೊಸ ಪ್ರಶ್ನೆ ಪತ್ರಿಕೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಬಗ್ಗೆ ನಾನು ಮಕ್ಕಳ ಜತೆ ಈಗಾಗಲೇ ಸಂವಾದ ಸಹ ನಡೆಸಿದ್ದೇನೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಹೊಸ ಪತ್ರಿಕೆಯನ್ನು ಪರಿಚಯಿಸಲಾಗುವುದು. ಮುಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿರುವ ಭಯವನ್ನು ಹೋಗಲಾಡಿಬೇಕು ಎನ್ನುವುದು ಉದ್ದೇಶವಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT