ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಗಂಗಾಮಠದಲ್ಲಿ ಹಿಂದೆಂದೂ ಕಾಣದ ನೀರಿನ ಅಭಾವ

ಕೊಳವೆ ಬಾವಿ ಕೈಕೊಟ್ಟರೆ ಟ್ಯಾಂಕರ್ ನೀರೇ ಗತಿ
Last Updated 19 ಮೇ 2019, 16:12 IST
ಅಕ್ಷರ ಗಾತ್ರ

ತುಮಕೂರು: ನಾಡಿನ ಪ್ರಸಿದ್ಧ ಪ್ರವಾಸಿ ಕ್ಷೇತ್ರಗಳಲ್ಲಿ ನಗರದ ಸಿದ್ಧಗಂಗಾಮಠವೂ ಒಂದು. ಈ ಮಠಕ್ಕೆ ನಿತ್ಯ ಸಾವಿರಾರು ಭಕ್ತರು ಬಂದು ಹೋಗುತ್ತಾರೆ.

ದಿನಪೂರ್ತಿ ದಾಸೋಹ ನಡೆಯುತ್ತಲೇ ಇರುತ್ತದೆ. ಮಠದ ವಸತಿ ಶಾಲೆಯಲ್ಲಿ ಪ್ರತಿ ವರ್ಷ ಅಂದಾಜು 9 ಸಾವಿರ ಮಕ್ಕಳು ಅಭ್ಯಾಸ ಮಾಡುತ್ತಾರೆ. ಅಲ್ಲದೇ ಮಠದ ಆಡಳಿತ ಸಿಬ್ಬಂದಿ, ಶಿಕ್ಷಕರು ನೂರಾರು ಮಂದಿ ಇದ್ದಾರೆ. ಅಷ್ಟೇ ಅಲ್ಲ ಮಠದಲ್ಲಿನ ಮಕ್ಕಳಿಗೆ ಹಾಲು, ಊಟಕ್ಕೆ ಮೊಸರು, ಮಜ್ಜಿಗೆ ಕೊರತೆ ನೀಗಿಸಲು ನೂರಾರು ಹಸುಗಳನ್ನು ಸಾಕಲಾಗಿದೆ.

ಇಂತಹ ಮಠಕ್ಕೆ ನಿತ್ಯ ಲಕ್ಷಾಂತರ ಲೀಟರ್ ನೀರು ಬೇಕು. ಆದರೆ, ಈ ಮಠದ ನೀರಿನ ಸಮಸ್ಯೆ ಶಾಶ್ವತವಾಗಿ ಹೋಗಲಾಡಿಸುವ ಪ್ರಯತ್ನ ಈವರೆಗೂ ಆಗಿಲ್ಲ. ಈ ವರ್ಷ ಧರ್ಮಸ್ಥಳ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಉಂಟಾದ ರೀತಿಯಲ್ಲಿಯೇ ಕ್ಷೇತ್ರದಲ್ಲೂ ನೀರಿನ ಬರ ಆವರಿಸಿದೆ.

ಮಠದಲ್ಲಿನ ನೀರಿನ ಅಭಾವ ಮನಗಂಡ ಆಡಳಿತ ಮಂಡಳಿಯು ವಸತಿ ಶಾಲೆಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನೂ 15 ದಿನ ಮುಂಗಡವಾಗಿಯೇ ಸ್ಥಗಿತಗೊಳಿಸಿದೆ.

ಕೊಳವೆ ಬಾವಿಗಳೇ ಗತಿ: ಮಠದ ನೀರಿನ ಅಗತ್ಯ ನಿಭಾಯಿಸಲು ಮಠದ ಆವರಣದಲ್ಲಿ 20ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಯಲಾಗಿದೆ. ಅಲ್ಲಲ್ಲಿ ಟ್ಯಾಂಕ್‌ಗಳನ್ನು ನಿರ್ಮಿಸಿ ಅಲ್ಲಿಂದ ಪೂರೈಕೆ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ, ಈ 20 ಕೊಳವೆ ಬಾವಿಗಳಲ್ಲಿ 5–6 ಕೊಳವೆ ಬಾವಿಗಳು ಬತ್ತಿವೆ. ಕೆಲವು ಕೊಳವೆ ಬಾವಿಗಳಲ್ಲಿ ಕನಿಷ್ಠ ನೀರು ಲಭ್ಯವಾಗುತ್ತಿದೆ ಎಂದು ಮಠದ ಮೂಲಗಳು ಹೇಳುತ್ತವೆ.

ಹತ್ತು ದಿನಕ್ಕೆ ಸಮಸ್ಯೆ ಇಲ್ಲ: ವಸತಿ ನಿಲಯದಲ್ಲಿ ಸದ್ಯಕ್ಕೆ ವಿದ್ಯಾರ್ಥಿಗಳಿಲ್ಲ. ಜೂನ್ ಮೊದಲ ವಾರ ಬರುತ್ತಾರೆ. ಅಲ್ಲಿಯವರೆಗೆ ಮಠದಲ್ಲಿ ನೀರಿನ ಸಮಸ್ಯೆಯನ್ನು ಕೊಳವೆ ಬಾವಿಗಳಿಂದ ನಿಭಾಯಿಸಬಹುದು. ಮಠಕ್ಕೆ ಬಂದು ಹೋಗುವ ಭಕ್ತರು ಹೆಚ್ಚು. ಉಳಿದುಕೊಳ್ಳುವವರು ಕಡಿಮೆ. ಹೀಗಾಗಿ, ಸಮಸ್ಯೆ ಆಗುವುದಿಲ್ಲ. ಆದರೆ, ಜೂನ್ ತಿಂಗಳಿಂದ ಹೇಗೆ ಈ ಸಮಸ್ಯೆ ಎದುರಿಸುವುದು ಎಂಬುದು ಸವಾಲಾಗಿದೆ ಎಂದು ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಸತಿ ನಿಲಯ, ಪ್ರಸಾದ ನಿಲಯಗಳು, ವಿವಿಧ ಕಟ್ಟಡಗಳಲ್ಲಿ ಶುದ್ಧ ನೀರಿನ ಘಟಕ ಇವೆ (ಆರ್.ಒ ಪ್ಲಾಂಟ್). ಅವುಗಳಿಂದ ಶುದ್ಧ ನೀರು ಪೂರೈಕೆ ಮಾಡಲಾಗುತ್ತದೆ. ಜೂನ್‌ನಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವುದರಿಂದ ಟ್ಯಾಂಕರ್‌ಗಳನ್ನು ಖರೀದಿಸಿ ನೀರು ಪಡೆಯುವ ಸ್ಥಿತಿ ಬರಬಹುದು’ ಎಂದು ಹೇಳಿದರು.

ಮಠಕ್ಕೆ ನೀರಿನ ಮೂಲ ಇಲ್ಲ

ಕೊಳವೆ ಬಾವಿಗಳ ನೀರೇ ಮಠಕ್ಕೆ ಆಧಾರವಾಗಿವೆ. ಈ ಹಿಂದೆ ಮೈದಾಳ ಕೆರೆಯಿಂದ ಮಠಕ್ಕೆ ನೀರು ಪೂರೈಕೆ ಯೋಜನೆ ಸ್ಥಗಿತವಾಗಿದೆ.

ತುಮಕೂರಿನಿಂದ ಹೇಮಾವತಿ ನೀರು ಪೂರೈಕೆಗೆ ಪೈಪ್‌ ಲೈನ್‌ ವ್ಯವಸ್ಥೆ ಇದ್ದರೂ ಸಮರ್ಪಕವಾಗಿಲ್ಲ. ತುಮಕೂರು ನಗರದಲ್ಲೇ ನೀರಿನ ಅಭಾವ ಹೆಚ್ಚಾಗಿದೆ. ಮಠದ ಕಡೆಗೆ ವಾಲ್ವ್ ತಿರುಗಿಸಿ ನೀರು ಬಿಟ್ಟರೂ ಮಧ್ಯದಲ್ಲಿ ಪೈಪ್‌ಗಳ ಮೂಲಕ ಕೆಲ ಬಡಾವಣೆ ವಾಸಿಗಳು ಪಡೆಯುವುದರಿಂದ ಸಮರ್ಪಕ ನೀರು ಲಭಿಸದಂತಾಗಿದೆ ಎಂದು ಮಠದ ಮೂಲಗಳು ಮಾಹಿತಿ ನೀಡುತ್ತವೆ.

ಹೇಮಾವತಿ ಜಲಾಶಯದಿಂದ ಬುಗುಡನಹಳ್ಳಿ ಕೆರೆ ಭರ್ತಿಯಾದ ಬಳಿಕ ದೇವರಾಯಪಟ್ಟಣ ಕೆರೆಗೆ ನೀರು ತುಂಬಿಸಿ ಅಲ್ಲಿಂದ ಉದ್ದಾನ ಶಿವಯೋಗಿಗಳ ಕಟ್ಟೆಗೆ ನೀರು ಹರಿಸುವ ಶಾಶ್ವತ ನೀರು ಪೂರೈಕೆ ಯೋಜನೆ ನನೆಗುದಿಗೆ ಬಿದ್ದಿದೆ. ಪೈಪ್‌ಲೈನ್ ಅರ್ಧಭಾಗ ಆಗಿದೆ. ತಕರಾರು, ನೀರಿನ ಕೊರತೆ ಕಾರಣಕ್ಕೆ ಈ ಯೋಜನೆಯೂ ಸ್ಥಗಿತವಾಗಿದೆ. ಈ ಯೋಜನೆ ಸಕಾಲಕ್ಕೆ ಜಾರಿಯಾಗಿದ್ದರೆ ಮಠವು ಈಗ ಎದುರಿಸುತ್ತಿರುವ ನೀರಿನ ಸಮಸ್ಯೆ ಇರುತ್ತಿರಲಿಲ್ಲ ಮಠದ ಅಧಿಕಾರಿಯೊಬ್ಬರು ಸಮಸ್ಯೆ ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT