ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿಗೆ ಬಂದ ‘ತಾಟಿ ಬೆಲ್ಲ’

ನಗರದಲ್ಲಿ ಬೀಡು ಬಿಟ್ಟು, ವ್ಯಾಪಾರದಲ್ಲಿ ನಿರತರಾಗಿರುವ ತಮಿಳುನಾಡಿನ ತಿರುನಲ್ವೇಲಿ ವ್ಯಾಪಾರಿಗಳು
Last Updated 29 ನವೆಂಬರ್ 2019, 13:50 IST
ಅಕ್ಷರ ಗಾತ್ರ

ತುಮಕೂರು: ದೂರದಿಂದ ನೋಡಿದರೆ ತೆಂಗಿನ ಚಿಪ್ಪುಗಳನ್ನು ಉದ್ದಕ್ಕೆ ಪೇರಿಸಿಟ್ಟಂತೆ ಕಪ್ಪಗೆ ಕಾಣುವ ವಸ್ತು. ಏನಿರಬಹುದು ಎಂದು ಹತ್ತಿರಕ್ಕೆ ಹೋದಾಗಲೆ ತಿಳಿಯುವುದು ಏನೋ ತಿನ್ನುವ ಪದಾರ್ಥ ಎಂದು. ‘ಏನಿದು’ ಎಂದು ಕೇಳುತ್ತಲೆ ಸ್ವಲ್ಪ ಚೂರನ್ನು ಮುರಿದು ಬಾಯಿಗೆ ಹಾಕಿಕೊಂಡರೆ ಒಂದಿಷ್ಟು ಖಾರ ಮತ್ತು ಸಿಹಿ ಪದಾರ್ಥ ಬಾಯಲ್ಲಿ ಕರಗಿ ನೀರಾಗುವುದು.

ಅರೆ ಬೆಲ್ಲದಂತೆಯೆ ಇದೆಯಲ್ಲ! ಎಂದು ಕೇಳಿದರೆ ಹರುಕು ಮುರುಕು ಕನ್ನಡದಲ್ಲಿ ಇದು ‘ತಾಟಿಬೆಲ್ಲ’, ಕೆ.ಜಿಗೆ ₹ 140 ಆಗುತ್ತೆ ಎಂದು ಹೇಳುತ್ತಾರೆ.

ತಮಿಳುನಾಡಿನ ತಿರುನಲ್ವೇಲಿಯಿಂದ ಬಂದಿರುವ 8 ಜನರ ತಂಡ ನಗರದ ಅಲ್ಲಲ್ಲಿ ತಾಳೆಗರಿಯಲ್ಲಿ ಮಾಡಿರುವ ಪುಟ್ಟಪುಟ್ಟ ಬುಟ್ಟಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ನಗರದ ಶಿರಾ ಗೇಟ್‌ ಬಳಿ ಇರುವ ಜಿಲ್ಲಾಧಿಕಾರಿಗಳ ವಸತಿ ಗೃಹದ ಎದುರು ಬೀಡು ಬಿಟ್ಟಿದ್ದಾರೆ.

ತಾಳೆ ಜಾತಿಗೆ ಸೇರಿರುವ ಈ ತಾಟಿ ಮರ ತಮಿಳುನಾಡು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚು ಕಂಡುಬರುತ್ತವೆ. ತೆಂಗಿನ ಮರದಿಂದ ನೀರಾ ಇಳಿಸುವಂತೆ ಈ ಮರದಿಂದಲೂ ನೀರು ಅಥವಾ ನೀರಾ (ಕಳ್ಳು) ಇಳಿಸಿ ದೊಡ್ಡ ಕೊಪ್ಪರಿಗೆಯಲ್ಲಿ ಕಾಯಿಸಿ ಬೆಲ್ಲ ತಯಾರಿಸಲಾಗುತ್ತದೆ.

ಈ ತಾಟಿ ಬೆಲ್ಲದ ಜತೆಗೆ ಸಣ್ಣ ತೂಕದ ಬಟ್ಟಿನಂತೆ ಕಾಣುವ ಶುಂಠಿಬೆಲ್ಲ ಬಾಯಿಗೆ ಖಾರ ಖಾರ ಅನಿಸಿದರೂ ಆರೋಗ್ಯಕ್ಕೆ ಒಳ್ಳೆಯದು ಎಂದು ಮಾರಾಟಗಾರ ಸೆಲ್ವಕುಮಾರ್‌ ಹೇಳಿದರು. ಹೆಸರೇ ಹೇಳುವಂತೆ ಈ ಬೆಲ್ಲಕ್ಕೆ ಶುಂಠಿ, ಲವಂಗ, ತುಳಸಿ, ಪುದೀನ ಬೆರೆಸಿ ತಯಾರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಈ ಶುಂಠಿಬೆಲ್ಲ ಕೆ.ಜಿ.ಗೆ ₹240 ಇದೆ.

ಈ ಬೆಲ್ಲದ ಸೇವನೆಯಿಂದ ವಾತ- ಪಿತ್ತ ಹತೋಟಿಗೆ ಬರುತ್ತದೆ, ಬಾಣಂತಿಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ ಎದೆ ಹಾಲು ಹೆಚ್ಚಾಗುತ್ತದೆ. ಕ್ಷಯ, ಉಬ್ಬಸ ಮತ್ತು ಚರ್ಮ ರೋಗಗಳಿಗೂ ಔಷಧಿಯಾಗಿ ಇದನ್ನು ಬಳಸಲಾಗುತ್ತದೆ. ಇದರಲ್ಲಿ ಮಾಡುವ ಕಾಫಿ ಎಂತಹ ನೆಗಡಿಯನ್ನು ವಾಸಿಮಾಡಬಲ್ಲದು. ಚಳಿಗಾಲ ಹೊಸ್ತಿಲಲ್ಲೆ ಇರುವುದರಿಂದ ಶೀತದಿಂದ ಪಾರಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT