ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳಿಯಾರು ಪ.ಪಂ: ಅಧಿಕಾರದ ಚುಕ್ಕಾಣಿಗೆ ಕಸರತ್ತು

Last Updated 1 ಅಕ್ಟೋಬರ್ 2021, 4:28 IST
ಅಕ್ಷರ ಗಾತ್ರ

ಹುಳಿಯಾರು: ಇಲ್ಲಿನ ಪಟ್ಟಣ ಪಂಚಾಯಿತಿಗೆ ಅ. 1ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಿಗದಿಯಾಗಿದ್ದು, ಪಟ್ಟಣ ಪಂಚಾಯಿತಿಯ ಚೊಚ್ಚಲ ಸಾರಥಿ ಯಾರಾಗಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

ಗ್ರಾಮ ಪಂಚಾಯಿತಿ ಆಗಿದ್ದಾಗಿನಿಂದಲೂ ಒಂದಲ್ಲಾ ಒಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಜಿಲ್ಲೆಯಲ್ಲಿಯೇ 39 ಸದಸ್ಯರ ಬಲದ ಏಕೈಕ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಹುಳಿಯಾರು ಪಾತ್ರವಾಗಿತ್ತು. ಕಳೆದ 3 ವರ್ಷಗಳ ಹಿಂದೆಯೇ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದರೂ ಮತ್ತೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿತ್ತು. ಆದರೆ, ಮಾರ್ಚ್‌ನಲ್ಲಿ ಚುನಾವಣೆಗೆ ಸಮಯ ಕೂಡಿಬಂದಿತ್ತು.

ಒಟ್ಟು 16 ಕ್ಷೇತ್ರಗಳಲ್ಲಿ ಬಿಜೆಪಿ 6, ಕಾಂಗ್ರೆಸ್‌ 5, ಜೆಡಿಎಸ್‌ 3 ಹಾಗೂ 2 ಸ್ಥಾನಗಳಲ್ಲಿ ಪಕ್ಷೇತರರು ಜಯಗಳಿಸಿದ್ದಾರೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿರಲಿಲ್ಲ. ಸಂಸದರು, ವಿಧಾನಸಭಾ ಸದಸ್ಯರ ಮತಗಳು ಸೇರಿದಂತೆ 18 ಮತಗಳಲ್ಲಿ ಗೆಲುವಿಗೆ 10 ಮತ ಪಡೆಯಬೇಕಿದೆ. 6 ಸದಸ್ಯ ಬಲವುಳ್ಳ ಬಿಜೆಪಿಗೆ ಈ ಮೊದಲು ಇಬ್ಬರು ಪಕ್ಷೇತರರು ಬೆಂಬಲ ಹಾಗೂ ಆಡಳಿತ ಪಕ್ಷದ ಸಂಸದರು ಹಾಗೂ ಶಾಸಕರು ಸೇರಿ 10 ಮ್ಯಾಜಿಕ್‌ ಸಂಖ್ಯೆಯಾಗಿತ್ತು. ಹಾಗಾಗಿ,ಬಿಜೆಪಿ ಅಧಿಕಾರದ ಗಾದಿ ಹಿಡಿಯುವ ವಿಶ್ವಾಸ ಮನೆ ಮಾಡಿತ್ತು.

ನಂತರದ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಸೇರಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ಕಾಂಗ್ರೆಸ್, ಜೆಡಿಎಸ್ ಮೈತ್ರಿಗೆ ಬೆಂಬಲ ಸೂಚಿಸಿ ಅಧಿಕಾರದ ಕನಸು ಕಂಡಿದ್ದ ಬಿಜೆಪಿಗೆ ನಿರಾಸೆ ಮೂಡಿಸಿದ್ದರು. ಇಂತಹ ಸ್ಥಿತಿಯಲ್ಲಿ ಏ. 29ಕ್ಕೆ ಅಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಯಾಗಿತ್ತಾದರೂ ಕೊರೊನಾ ಸಂಕಷ್ಟದಿಂದ ಕೊನೆಗಳಿಗೆಯಲ್ಲಿ ರದ್ದಾಗಿತ್ತು. ಇದರಿಂದ ಬಿಜೆಪಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರೆ ಕಾಂಗ್ರೆಸ್, ಜೆಡಿಎಸ್‌ಗೆ ನಿದ್ದೆಗೆಡುವಂತಾಗಿತ್ತು.

ಅ. 1ರಂದು ಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಯಾಗಿದೆ. ಚುನಾವಣಾ ತಂತ್ರ ಹೆಚ್ಚಾಗಿದ್ದು ಕಾಂಗ್ರೆಸ್‌ 5, ಜೆಡಿಎಸ್‌ 3 ಹಾಗೂ ಒಬ್ಬರು ಪಕ್ಷೇತರರು ಸೇರಿ ಸಂಖ್ಯೆ 9 ಆಗುತ್ತದೆ. ಇತ್ತ ಬಿಜೆಪಿಯ 6 ಸದಸ್ಯರು ಹಾಗೂ ಇಬ್ಬರು ಸಂಸದರು, ಶಾಸಕರ ಮತ ಸೇರಿ 9 ಸಂಖ್ಯೆ ಆಗಿ ಸಮಬಲದ ಹೋರಾಟ ನಡೆದಿತ್ತು. ಎರಡು ಕಡೆ ಸಮಬಲ ಬಂದರೆ ಲಾಟರಿ ಮೂಲಕ ಅಧ್ಯಕ್ಷ ಪದವಿಯ ಅದೃಷ್ಟ ಯಾರಿಗೆ ಬೇಕಾದರೂ ದಕ್ಕಬಹುದು ಎಂಬ ಚರ್ಚೆ ನಡೆಯುತ್ತಿತ್ತು.

ಇದರ ಬೆನ್ನಲ್ಲಿ ಕಾಂಗ್ರೆಸ್ ಚಿಹ್ನೆಯಲ್ಲಿ ಗೆದ್ದಿದ್ದ ಸದಸ್ಯ ರಾಜು ಬಡಗಿ ಮೊಬೈಲ್‌ ಸ್ವಿಚ್‌ಆಫ್ ಮಾಡಿಕೊಂಡಿದ್ದಾರೆ. ಇದರಿಂದ ಅದೃಷ್ಟದ ಮೂಲಕವಾದರೂ ಪದವಿ ಪಡೆಯಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಕಾಂಗ್ರೆಸ್-ಜೆಡಿಎಸ್‌ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಬಿಜೆಪಿ ಸದಸ್ಯರೂ ಸಹ ಪ್ರವಾಸದಲ್ಲಿದ್ದಾರೆ.

ರಾಜು ಬಡಗಿ ಮನೆಯಲ್ಲಿ ಪ್ರಸ್ತುತ ಯಾರೊಬ್ಬರೂ ಇಲ್ಲದ ಕಾರಣ ಚುನಾವಣಾ ನೋಟಿಸ್ ಸಹ ತಲುಪಿಸಲಾಗಿಲ್ಲ. ಹೀಗಿರುವಾಗ ಚುನಾವಣೆಯಲ್ಲಿ ಅವರು ಭಾಗವಹಿಸುವುದು ಅನುಮಾನ ಎನ್ನಲಾಗುತ್ತಿದೆ.

ಈಗಾಗಲೇ ಕಾಂಗ್ರೆಸ್‌ ಪಕ್ಷದ ಚಿಹ್ನೆಯಡಿ ಜಯಗಳಿಸಿದ್ದ ರಾಜು ಬಡಗಿ ಅವರಿಗೆ ಪಕ್ಷದಿಂದ ವಿಪ್‌ ನೀಡಿದ್ದಾರೆ. ಅವರು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಭಾಗಿಯಾಗದೆ ಹೋದರೆ ಬಿಜೆಪಿ ಅನಾಯಾಸವಾಗಿ ಅಧಿಕಾರ ಹಿಡಿಯಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಒಟ್ಟಾರೆ ಎರಡೂ ಕಡೆ ಸದಸ್ಯರು ಪ್ರವಾಸದಲ್ಲಿದ್ದು ಶುಕ್ರವಾರ ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT